ADVERTISEMENT

ಇಲ್ಲೊಂದು ಅಪರೂಪದ ಕ್ಯಾಷ್‌ಲೆಸ್‌ ಕ್ಲಿನಿಕ್ !, ಇ– ಪಾವತಿ ಜಾಗೃತಿ

ನಮ್ಮ ಊರು ನಮ್ಮ ಜಿಲ್ಲೆ: ಜಾಗೃತಿ ಮೂಡಿಸುತ್ತಿರುವ ಡಾ.ರವಿಕಿರಣ ಪಟವರ್ಧನ

ಸಂಧ್ಯಾ ಹೆಗಡೆ
Published 29 ಸೆಪ್ಟೆಂಬರ್ 2018, 19:45 IST
Last Updated 29 ಸೆಪ್ಟೆಂಬರ್ 2018, 19:45 IST
ನಗದುರಹಿತ ವ್ಯವಸ್ಥೆ ಅಳವಡಿಸಿಕೊಂಡಿರುವ ಡಾ.ರವಿಕಿರಣ ಪಟವರ್ಧನ
ನಗದುರಹಿತ ವ್ಯವಸ್ಥೆ ಅಳವಡಿಸಿಕೊಂಡಿರುವ ಡಾ.ರವಿಕಿರಣ ಪಟವರ್ಧನ   

ಶಿರಸಿ: ನೇತ್ರದಾನ, ಜೀವ ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತ, ಸದ್ದಿಲ್ಲದ ಸಾಮಾಜಿಕ ಕಾರ್ಯ ನಡೆಸುತ್ತಿರುವ ಇಲ್ಲಿನ ಪಟವರ್ಧನ ದವಾಖಾನೆಯ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ ಅವರು, ತಮ್ಮ ಕ್ಲಿನಿಕ್‌ನಲ್ಲಿ ಇ– ಪಾವತಿ ವ್ಯವಸ್ಥೆಯನ್ನು ಅಳವಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಇ– ಪಾವತಿ ಪ್ರಚಲಿತಕ್ಕೆ ತರುವ ಮೊದಲೇ ಈ ಆಸ್ಪತ್ರೆಯಲ್ಲಿ ಕಾರ್ಡ್ ಸ್ವೈಪಿಂಗ್ ಮಷಿನ್ ಬಂದಿತ್ತು ! 5 ವರ್ಷಗಳಿಂದ ಸ್ವೈಪಿಂಗ್ ಮಷಿನ್ ಇಟ್ಟಿರುವ ಅವರು, ಈಗ ಡಿಜಿಟಲ್ ಪಾವತಿಗೂ ಅವಕಾಶ ಕಲ್ಪಿಸಿದ್ದಾರೆ. ಇದರ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

* ಸ್ವೈಪಿಂಗ್ ಮಷಿನ್ ತರುವ ಯೋಚನೆ ಬಂದಿದ್ದು ಹೇಗೆ ?

ADVERTISEMENT

5–6 ವರ್ಷಗಳ ಹಿಂದೆ ₹ 500ರ ಕಳ್ಳನೋಟಿನ ಚಲಾವಣೆ ಜೋರಾಗಿತ್ತು. ಆಗಲೇ ನಗದುರಹಿತ ವ್ಯವಸ್ಥೆ ಬಗ್ಗೆ ಯೋಚಿಸಿದ್ದೆ. ಒಂದು ವರ್ಷದ ನಂತರ ಸ್ಥಿರ ದೂರವಾಣಿ ಆಧಾರಿತ ಸ್ಟೇಟ್‌ ಬ್ಯಾಂಕ್‌ನ ಸ್ವೈಪಿಂಗ್ ಮಷಿನ್ ಸಿಕ್ಕಿತು. ದೊಡ್ಡ ನಗರಗಳಿಂದ ಬರುವ ರೋಗಿಗಳು ಮಾತ್ರ ಇದನ್ನು ಬಳಸುತ್ತಿದ್ದರು. ನೋಟು ಅಮಾನ್ಯೀಕರಣ ಆದ ಮೇಲೆ ಬಳಕೆ ಹೆಚ್ಚಾಯಿತು. ಆ ಸಂದರ್ಭದಲ್ಲಿ ಕೆಲವು ರೋಗಿಗಳು, ಕಾರ್ಡಿನಲ್ಲಿ ಬಿಲ್ ಪಾವತಿಸಿದ್ದಲ್ಲದೇ, ಹಣ ವಿಡ್ರಾವಲ್ ಕೂಡ ಮಾಡಿಕೊಂಡು ಹೋಗುತ್ತಿದ್ದರು.

* ನಿಮ್ಮಲ್ಲಿ ಇ–ಪಾವತಿಯ ಯಾವ ಯಾವ ವ್ಯವಸ್ಥೆಗಳಿವೆ ?

ಪೇಟಿಎಂ, ಭೀಮ್ ಆ್ಯಪ್, ಭಾರತ್ ಕ್ಯೂಆರ್ ಲಭ್ಯವಿದೆ. ಭೀಮ್‌ ಅನ್ನು ಸರ್ಕಾರ ಬಿಡುಗಡೆಗೊಳಿಸಿದ 4ನೇ ದಿನದಿಂದ ಆರಂಭಿಸಿದ್ದೇನೆ. ಇವೆಲ್ಲ ಸ್ಕ್ಯಾನ್‌ ಆ್ಯಂಡ್ ಪೇ ಸೌಲಭ್ಯಗಳು.

* ರೋಗಿಗಳು ಈ ವ್ಯವಸ್ಥೆ ಇಷ್ಟಪಡುತ್ತಾರಾ ?

ನನ್ನ ದವಾಖಾನೆಗೆ ಬರುವವರಲ್ಲಿ 18ರಿಂದ 75ರ ವಯೋಮಾನದ ಕಾರ್ಡ್ ಬಳಕೆದಾರರು ಇದ್ದಾರೆ. ಸಹಕಾರಿ ಸಂಘಗಳು ರೈತ ಸದಸ್ಯರಿಗೆ ಎಟಿಎಂ ಕಾರ್ಡ್ ಕೊಟ್ಟಿವೆ. ಆದರೆ, ಅವರಿಗೆ ಅದರ ಬಳಕೆ ಗೊತ್ತಿಲ್ಲ. ಈ ಬಾರಿ ಆಸ್ಪತ್ರೆಗೆ ಬಂದಾಗ ಹೇಳಿದರೆ, ಮುಂದಿನ ಬಾರಿ ಅವರು ಕಾರ್ಡ್ ತಂದು ಹಣ ಪಾವತಿಸುತ್ತಾರೆ.

* ಕಾರ್ಡ್ ಬಳಕೆಯ ಮಹತ್ವದ ಬಗ್ಗೆ ತಿಳಿವಳಿಕೆ ನೀಡುವಿರೆಂದು ಕೇಳಿದ್ದೇನೆ...

ಹೌದು, ರೂಪೆ ಕಾರ್ಡ್ ಅನ್ನು ಪ್ರತಿ 45 ದಿನಗಳಿಗೊಮ್ಮೆ ಬಳಕೆ ಮಾಡಿದರೆ, ಅಪಘಾತ ವಿಮೆ ಉಚಿತವಾಗಿ ಸಿಗುತ್ತದೆ. ಕೆಲವು ಬಾರ್ ಬೆಂಡರ್‌ಗಳಿಗೆ ಇ–‍ಪಾವತಿ ಬಗ್ಗೆ ತಿಳಿಸಿದ್ದೇನೆ. ಈಗ ಅವರು ವಿದ್ಯುತ್ ಬಿಲ್‌ ಅನ್ನು ಸಹ ಕಾರ್ಡ್ ಮೂಲಕವೇ ಪಾವತಿಸುತ್ತಾರೆ.

* ಕಾರ್ಡ್ ಬಳಕೆಗೆ ನಿರ್ದಿಷ್ಟ ಮೊತ್ತ ಇರಬೇಕಾ ?

ಖಂಡಿತ ಇಲ್ಲ. ಕನಿಷ್ಠ ₹ 20 ಇದ್ದರೂ, ಇ– ಪಾವತಿ ಮೂಲಕ ಹಣ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.