ಶಿರಸಿ: 'ಗುತ್ತಿಗೆದಾರರಿಂದ ರಾಜ್ಯ ಸರ್ಕಾರ ಶೇ.40 ರಷ್ಟು ಕಮೀಷನ್ ಪಡೆಯುತ್ತಿದೆ ಎಂದು ಹಾದಿಬೀದಿಯಲ್ಲಿ ಆರೋಪಿಸಿದ್ದ ಕಾಂಗ್ರೆಸ್ ಈ ಆರೋಪವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಿಲ್ಲ. ಆರೋಪ ಸಾಬೀತುಪಡಿಸಲು ಕೂಡ ವಿಪಕ್ಷ ವಿಫಲವಾಗಿದೆ' ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಇಲ್ಲಿನ ಅಂಬೇಡ್ಕರ ಭವನದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
'ಕಾಂಗ್ರೆಸ್ ಆರೋಪಕ್ಕೆ ಪ್ರತಿಯಾಗಿ ಅಗತ್ಯ ದಾಖಲೆ ಇಟ್ಟುಕೊಂಡು ಪ್ರತ್ಯತ್ತರ ನೀಡಲು ಸಿದ್ಧರಾಗಿಯೇ ಸದನಕ್ಕೆ ತೆರಳಿದ್ದೆವು. ಸಿದ್ದರಾಮಯ್ಯ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರು ಸದನದಲ್ಲಿ ಕಮೀಷನ್ ವಿಚಾರದ ಕುರಿತು ತುಟಿ ಬಿಚ್ಚಲಿಲ್ಲ. ಇದು ನಿರಾಧಾರ ಆರೋಪ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು' ಎಂದರು.
'ಪಿ.ಎಫ್.ಐ. ಮತ್ತು ಅದರ ಸಹಚರ ಸಂಘಟನೆಗಳನ್ನು ನಿರ್ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಗಟ್ಟಿತನ ತೋರಿದೆ. ದೇಶದ್ರೋಹಿಗಳ ಜತೆಗೆ ಅವರನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೂ ಇದು ತಕ್ಕ ಪಾಠವಾಗಿದೆ' ಎಂದರು.
'ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರದ ಕುರಿತು ರಾಜ್ಯ ಸರ್ಕಾರ ಮಾಹಿತಿ ಕಲೆ ಹಾಕುವ ಕೆಲಸ ಆರಂಭಿಸಿದೆ. ಸೂಕ್ತ ವರದಿ ಕಲೆಹಾಕಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದೆ' ಎಂದು ಮಾಧ್ಯಮವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.