ADVERTISEMENT

ಶಿರಸಿ: ಪಾಲನೆ ನಿಲ್ಲಿಸಿದ ಸಸ್ಯ ಪಾಲನಾ ಕ್ಷೇತ್ರ, ಪಾಳು ಬಿದ್ದ ಪ್ರದೇಶ

ಉದ್ಯಾನವಾಗಿ ರೂಪಿಸಲು ಸಾರ್ವಜನಿಕರ ಆಗ್ರಹ

ಗಣಪತಿ ಹೆಗಡೆ
Published 18 ನವೆಂಬರ್ 2022, 19:30 IST
Last Updated 18 ನವೆಂಬರ್ 2022, 19:30 IST
ಶಿರಸಿಯ ಚಿಪಗಿ ಸಮೀಪವಿರುವ ಕೇಂದ್ರೀಯ ಸಸ್ಯಪಾಲನಾ ಕೇಂದ್ರ ಸೊರಗಿದ ಸ್ಥಿತಿಯಲ್ಲಿ
ಶಿರಸಿಯ ಚಿಪಗಿ ಸಮೀಪವಿರುವ ಕೇಂದ್ರೀಯ ಸಸ್ಯಪಾಲನಾ ಕೇಂದ್ರ ಸೊರಗಿದ ಸ್ಥಿತಿಯಲ್ಲಿ   

ಶಿರಸಿ: ಇಲ್ಲಿನ ಚಿಪಗಿ ಸಮೀಪದಲ್ಲಿರುವ ಕೇಂದ್ರೀಯ ಸಸ್ಯ ಪಾಲನಾ ಕ್ಷೇತ್ರ ಮತ್ತು ಉದ್ಯಾನ ಸಸಿಗಳ ಪಾಲನೆ ಕೆಲಸ ಸ್ಥಗಿತಗೊಳಿಸಿ ಹಲವು ವರ್ಷ ಕಳೆದಿದೆ. ಸೊರಗಿರುವ ಈ ಪ್ರದೇಶವನ್ನು ಸುಂದರ ಉದ್ಯಾನವಾಗಿ ರೂಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಶಿರಸಿ–ಹುಬ್ಬಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ಸಸ್ಯ ಪಾಲನಾ ಕ್ಷೇತ್ರದಲ್ಲಿ ಸದ್ಯ ಒಣಗಿದ ಗಿಡಗಳು, ಮುರಿದ ಕಬ್ಬಿಣದ ಮಕ್ಕಳ ಆಟಿಕೆಗಳು, ಶಿಥಿಲಗೊಂಡಿರುವ ಕುಟೀರಗಳು ಕಾಣಸಿಗುತ್ತಿವೆ. ಐದು ಎಕರೆಗೂ ಹೆಚ್ಚು ವಿಸ್ತಾರದ ಜಾಗದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ಹೊರತಾಗಿ ಉಪಯುಕ್ತ ಸೌಲಭ್ಯ ಕಾಣುತ್ತಿಲ್ಲ.

1996ರ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಸಸ್ಯಪಾಲನಾ ಕ್ಷೇತ್ರ ಹಾಗೂ ಉದ್ಯಾನ ಸಾರ್ವಜನಿಕರನ್ನು ಸೆಳೆಯುವ ತಾಣವಾಗಿತ್ತು. ಅರಣ್ಯ ಇಲಾಖೆ ಇಲ್ಲಿಯೇ ಸಾವಿರಾರು ಸಸಿಗಳನ್ನು ಬೆಳೆಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿತ್ತು. ಈಗ ಒಣಗಿದ ಗಿಡ–ಮರಗಳು ಕಾಣಸಿಗುತ್ತಿವೆ.

ADVERTISEMENT

‘ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸಸ್ಯಪಾಲನಾ ಕೇಂದ್ರವನ್ನು ಅರಣ್ಯ ಇಲಾಖೆ ಸುಂದರ ಉದ್ಯಾನವಾಗಿ ರೂಪಿಸಿದರೆ ಸ್ಥಳೀಯರಿಗೆ ಅನುಕೂಲವಾಗುವ ಜತೆಗೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ನಗರ ಪ್ರವೆಶಿಸುವ ಮುನ್ನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಮನೋರಂಜನೆ ಪಡೆಯಲು ಅಗತ್ಯ ಆಟಿಕೆ, ಸಾಹಸ ಚಟುವಟಿಕೆ ಅಳವಡಿಸುವುದು ಸೂಕ್ತ’ ಎನ್ನುತ್ತಾರೆ ನಾರಾಯಣಗುರು ನಗರದ ನಿವಾಸಿ ಗೌರೀಶ ನಾಯ್ಕ.

‘ಎಕರೆಗಟ್ಟಲೆ ಭೂಮಿ ಸರಿಯಾಗಿ ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಲಕ್ಷಾಂತರ ವ್ಯಯಿಸಿ ಸರ್ಕಾರ ನಿರ್ಮಿಸಿದ ಸೌಲಭ್ಯಗಳು ಹಾಳಾಗಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ’ ಎಂದು ಅವರು ದೂರಿದರು.

‘ಸಸಿಗಳ ಆರೈಕೆ ಉದ್ದೇಶಕ್ಕೆ ಸಸ್ಯಪಾಲನಾ ಕೇಂದ್ರ ಸ್ಥಾಪನೆಯಾಗಿತ್ತು. ಕಾಲಕ್ರಮೇಣ ತಾಲ್ಲೂಕಿನ ನಾಲ್ಕೈದು ಕಡೆಗಳಲ್ಲಿ ನರ್ಸರಿಗಳ ಸ್ಥಾಪನೆಯಾದ ಬಳಿಕ ಈ ಕೇಂದ್ರದ ಬಳಕೆ ಕಡಿಮೆಯಾಗಿದೆ. ಹೀಗಾಗಿ ಅಲ್ಲಿ ಗಿಡಗಳನ್ನು ಬೆಳೆಸುತ್ತಿಲ್ಲ’ ಎಂದು ಡಿಸಿಎಫ್ ಆರ್.ಅಜ್ಜಯ್ಯ ತಿಳಿಸಿದರು.

‘ನಗರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ನಾಲ್ಕು ಉದ್ಯಾನ ರೂಪಿಸಿದೆ. ಹೀಗಾಗಿ ಈ ಸ್ಥಳದಲ್ಲಿ ಉದ್ಯಾನ ರೂಪಿಸುವ ಬದಲು ಅರಣ್ಯ ಇಲಾಖೆಯ ವಸತಿಗೃಹ ನಿರ್ಮಾಣ ಅಥವಾ ಸಸಿಗಳ ಹಂಚಿಕೆ ತಾಣವಾಗಿ ಬಳಕೆ ಮಾಡುವ ಯೋಚನೆ ಇದೆ’ ಎಂದರು.

*
ಸಸ್ಯಪಾಲನಾ ಕೇಂದ್ರವನ್ನು ಅಭಿವೃದ್ಧಿ ಮಾಡಿ ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದೆ. ಅನುದಾನ ಲಭ್ಯತೆ ಆಧರಿಸಿ ಈ ಬಗ್ಗೆ ನಿರ್ಣಯಿಸುತ್ತೇವೆ.
-ಆರ್.ಅಜ್ಜಯ್ಯ,ಶಿರಸಿ ಡಿ.ಸಿ.ಎಫ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.