ADVERTISEMENT

ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ | ಕಾಂಗ್ರೆಸ್ ಅರಾಜಕತೆಗೆ ಸಾಕ್ಷಿ: ಕಾಗೇರಿ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2024, 14:22 IST
Last Updated 26 ಮೇ 2024, 14:22 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರಿಗೇ ರಕ್ಷಣೆ ನೀಡುವ ದುಸ್ಥಿತಿ ಈಗಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಬಂದಿರುವುದು ಕಾಂಗ್ರೆಸ್ ಅರಾಜಕತೆಗೆ ಸಾಕ್ಷಿಯಾಗಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು. 

ನಗರದಲ್ಲಿ ಪತ್ರಕರ್ತರ ಜತೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ಎಲ್ಲೆಡೆ ಜನಾಕ್ರೋಶದ ನಡುವೆಯೇ ಚೆನ್ನಗಿರಿ ಪೊಲೀಸ್ ಠಾಣೆ ಧ್ವಂಸ ಪ್ರಕರಣ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಇದೆಯೇ ಎಂಬ ಸಂಶಯ ಮೂಡುವಂತೆ ಮಾಡಿದೆ. ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸ್ ಠಾಣೆಗೆ ರಕ್ಷಣೆ ಕೊಡಬೇಕಾಗಿ ಬಂದ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆಯೇ ಎಂದು ಪ್ರಶ್ನಿಸುವಂತಾಗಿದೆ ಎಂದರು.

ಈ ಹಿಂದೆ ಕೆಜೆ ಹಳ್ಳಿ, ಡಿಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲಿ ಠಾಣೆ ಧ್ವಂಸ, ಸಾರ್ವಜನಿಕ ಆಸ್ತಿ ಹಾನಿ ಮಾಡುವಾಗಲೂ ಅಧಿಕಾರಿಗಳ ವಿರುದ್ದ ಕ್ರಮಕೈಗೊಂಡರೆ ವಿನಾ ತಪ್ಪಿತಸ್ಥರನ್ನು ಶಿಕ್ಷಿಸಲಿಲ್ಲ. ಈಗಲೂ ಸಹ ಚೆನ್ನಗಿರಿಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ನೈತಿಕ ಶಕ್ತಿ ಉಡುಗಿಸಿದ್ದಾರೆ. ಯಾರೇ ಕಾನೂನು ಉಲ್ಲಂಘಿಸಿದರೂ ಅವರ ಮೇಲೆ ಕಠಿಣ ಕ್ರಮ ಕೈಕೊಂಡಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಪರಾಧಿಗಳನ್ನು ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳಿಗೆ ಬಿಗಿ ಕ್ರಮ ಜರುಗಿಸಲು ಬಿಡುತ್ತಿಲ್ಲ ಎಂದರು.

ADVERTISEMENT

ಘಟನೆಯನ್ನು ಗಂಭಿರವಾಗಿ ಪರಿಗಣಿಸಿ, ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟು ಕಾನೂನು ವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.