ADVERTISEMENT

ಚನ್ನಪಟ್ಟಣ ಹನುಮಂತನ ಬ್ರಹ್ಮರಥೋತ್ಸವ ವಿಜೃಂಭಣೆ

ಭಟ್ಕಳ: ಕೊರೊನಾ ಕಾರಣದಿಂದ ಎರಡು ವರ್ಷ ಕಳೆಗುಂದಿದ್ದ ಆಚರಣೆ

ಮೋಹನ ನಾಯ್ಕ
Published 9 ಏಪ್ರಿಲ್ 2022, 19:31 IST
Last Updated 9 ಏಪ್ರಿಲ್ 2022, 19:31 IST
ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥ ನಿರ್ಮಾಣ ಹಂತದಲ್ಲಿರುವುದು
ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥ ನಿರ್ಮಾಣ ಹಂತದಲ್ಲಿರುವುದು   

ಭಟ್ಕಳ: ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಈ ಬಾರಿ ವಿಜೃಂಭಣೆಯಿಂದ ನೆರವೇರಲಿದೆ. ಏ.10ರಂದು ನಡೆಯುವ ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ.

ತಾಲ್ಲೂಕಿನ ಗ್ರಾಮ ದೇವರೆಂದೇ ಕರೆಯುವ ಚೆನ್ನಪಟ್ಟಣ ಹನುಮಂತ ದೇವಸ್ಥಾನಕ್ಕೆ 600 ವರ್ಷಗಳ ಇತಿಹಾಸ ಇದೆ. ಹನುಮಂತ ದೇವರ ವಿಗ್ರಹವು ಅಪರೂಪದ ‘ಗಂಡು ಶಿಲೆ’ಯಿಂದ ಮಾಡಿದ್ದಾಗಿದೆ. ಆಗಮೋಕ್ತ ಪದ್ಧತಿಯಲ್ಲಿ ತ್ರಿಕಾಲ ಪೂಜೆಗೊಳ್ಳುವುದು ವಿಶೇಷವಾಗಿದೆ. ಬಹಳ ವರ್ಷಗಳ ಹಿಂದೆ ದೇವರ ಮೂರ್ತಿಯು ವಿಧ್ವಂಸಕರ ಕೈಗೆ ಸಿಲುಕಿಯೋ ಇಲ್ಲವೇ ದೇವಸ್ಥಾನವು ಜೀರ್ಣಗೊಂಡೋ ಬಾವಿ ದಂಡಿಗೆಯನ್ನು ಸೇರಿತ್ತು. ಸನ್ಯಾಸಿಯೊಬ್ಬರು ನೀರು ಸೇದಲು ಹೋದಾಗ ಮೂರ್ತಿ ಗೋಚರವಾದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಕಟ್ಟಿಸಿ ಪೂಜಿಸಲಾಯಿತು ಎನ್ನುವ ಪ್ರತೀತಿ ಇದೆ.

ಭಟ್ಕಳದ ಹಾಡುವಳ್ಳಿಯ ರಾಜ್ಯವಾಳಿದ ಚೆನ್ನಭೈರಾ ದೇವಿಯು ಈ ದೇವಸ್ಥಾನಕ್ಕೆ ತನ್ನ ಸಂಸ್ಥಾನದಿಂದ ಉಂಬಳಿ ಆಸ್ತಿ ನೀಡಿ ಜೀರ್ಣೊದ್ಧಾರ ಮಾಡಿದ್ದರು. ಅಂದಿನಿಂದ ಇದು ಚೆನ್ನಪಟ್ಟಣ ಶ್ರೀ ಹನುಮಂತ ಎಂದು ಪ್ರಸಿದ್ಧವಾಯಿತು ಎಂದು ಹೇಳಲಾಗುತ್ತದೆ.

ADVERTISEMENT

ಅಷ್ಟ ದಿಕ್ಕುಗಳಲ್ಲಿ ಹನುಮ:

ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಸುತ್ತಲೂ ಅಷ್ಟ ದಿಕ್ಕುಗಳಲ್ಲಿ ಒಂದೊಂದು ಹನುಮಂತನ ದೇವಸ್ಥಾನ ಇದೆ. ಎಲ್ಲ ದಿಕ್ಕುಗಳಲ್ಲಿರುವ ವಿಗ್ರಹಗಳು ಚೆನ್ನಪಟ್ಟಣ ಹನುಮಂತ ದೇವರ ವಿಗ್ರಹವನ್ನೇ ಹೋಲುವುದು ಇನ್ನೊಂದು ವೈಶಿಷ್ಟ್ಯವಾಗಿದೆ. ಹಿಂದೆ ಊರಿಗೆ ನೆರಹಾವಳಿ, ರೋಗರುಜಿನ ಸಂಕಷ್ಟ ಎದುರಾದಾಗ ರಕ್ಷಣೆಗೆಂದು ಅಷ್ಟದಿಕ್ಕುಗಳಲ್ಲಿ ಹನುಮಂತನನ್ನು ಸ್ಥಾಪಿಸಿ ಕೊನೆಗೆ ಪ್ರಧಾನ ದೇವತೆಯಾಗಿ ಚನ್ನಪಟ್ಟಣ ಹನುಮಂತನನ್ನು ಸ್ಥಾಪಿಸಿದರು ಎಂದೂ ನಂಬಲಾಗಿದೆ.

ಪೂರ್ವದಲ್ಲಿ ವೀರ ಮಾರುತಿ, ಆಗ್ನೇಯದಲ್ಲಿ ಕಾಸ್ಮುಡಿ ಹನುಮಂತ, ದಕ್ಷಿಣದಲ್ಲಿ ಗರಡಿ ಹನುಮಂತ, ನೈರುತ್ಯದಲ್ಲಿ ದೊಡ್ಡಕಂಠ ಹನುಮಂತ, ಪಶ್ಚಿಮದಲ್ಲಿ ದಾಟಬಾಗಿಲ ಹನುಮಂತ, ವಾಯವ್ಯದಲ್ಲಿ ಕಳಿ ಹನುಮಂತ, ಉತ್ತರದಲ್ಲಿ ಕೋಟೆ ಹನುಮಂತ ಹಾಗೂ ಈಶಾನ್ಯದಲ್ಲಿ ಮಣ್ಕುಳಿ ಹನುಮಂತ ಅಷ್ಟ ದಿಕ್ಕುಗಳಲ್ಲಿರುವ ಹನುಮಂತ ದೇವಸ್ಥಾನಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.