ADVERTISEMENT

ಶಿರಸಿ: ಅಂದಗೆಟ್ಟ ಮಕ್ಕಳ ಉದ್ಯಾನವನ

ರಸ್ತೆ ವಿಸ್ತರಣೆಗೆ ತೆರವಾದ ಉದ್ಯಾನದ ಪಾರ್ಶ್ವ

ರಾಜೇಂದ್ರ ಹೆಗಡೆ
Published 17 ಜೂನ್ 2024, 4:28 IST
Last Updated 17 ಜೂನ್ 2024, 4:28 IST
ಶಿರಸಿಯ ಜೂ ಸರ್ಕಲ್ ಬಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ಮಕ್ಕಳ ಉದ್ಯಾನವನದ ಒಂದು ಪಾರ್ಶ್ವ ತೆರವುಗೊಂಡಿರುವುದು
ಶಿರಸಿಯ ಜೂ ಸರ್ಕಲ್ ಬಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ಮಕ್ಕಳ ಉದ್ಯಾನವನದ ಒಂದು ಪಾರ್ಶ್ವ ತೆರವುಗೊಂಡಿರುವುದು   

ಶಿರಸಿ: ಮಕ್ಕಳು ಹಾಗೂ ವಾಯುವಿಹಾರಿಗಳಿಗೆ ಸಮಯ ಕಳೆಯಲು ಉತ್ತಮ ತಾಣವಾಗಿದ್ದ ಹಾಗೂ ನಗರ ಸೌಂದರ್ಯಕ್ಕೆ ಪೂರಕವಾಗಿದ್ದ ಮಕ್ಕಳ ಉದ್ಯಾನವನ ಅಂದ ರಸ್ತೆ ವಿಸ್ತರಣೆ ಕಾಮಗಾರಿಯಿಂದ ಮಂಕಾಗಿದೆ. 

ನಗರದ ಜೂ ಸರ್ಕಲ್ ಬಳಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಅಂದಾಜು ಎರಡೂವರೆ ಎಕರೆ ವಿಸ್ತೀರ್ಣದ ಉದ್ಯಾನ ಈ ಹಿಂದೆ ಮೃಗಾಲಯವಾಗಿ ಜನಮನ ರಂಜಿಸಿತ್ತು. ನಂತರ ಇಷ್ಟು ಚಿಕ್ಕ ಪ್ರದೇಶ ಮೃಗಾಲಯಕ್ಕೆ ಸೂಕ್ತವಲ್ಲ ಎಂಬ ಕಾರಣದಿಂದ ಮಕ್ಕಳ ಉದ್ಯಾನವಾಗಿ ಮಾರ್ಪಡಿಸಲಾಗಿತ್ತು. ಮಕ್ಕಳ ಗಮನ ಸೆಳೆಯುವ ವಿವಿಧ ಆಟಿಕೆಗಳು, ವಾಯುವಿಹಾರಿಗಳಿಗೆ ಅನುಕೂಲಕರ ವಾಕಿಂಗ್ ಪಾಥ್, ಆಸನ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯ ಒದಗಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ಅಚ್ಚುಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿತ್ತು. ವಾರಾಂತ್ಯದ ದಿನಗಳಲ್ಲಿ ನೂರಾರು ಮಕ್ಕಳು ಇಲ್ಲಿನ ಆಟವಾಡಿ ಖುಷಿಪಡುತ್ತಿದ್ದರು. ಆದರೆ ಈಗ ಉದ್ಯಾನದಂಚಿಗೆ ಹಾದುಹೋಗಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಉದ್ಯಾನದ ಒಂದು ಪಾರ್ಶ್ವ ತೆರವುಗೊಂಡಿದೆ. ಹೀಗಾಗಿ ಇಡೀ ಉದ್ಯಾನ ಕಳೆಗುಂದಿದ್ದು, ಸಾರ್ವಜನಿಕರ ಭೇಟಿಯು ಕುಸಿತ ಆಗಿದೆ.

‘ಉದ್ಯಾನದೊಳಗಿನ ಜಾರು ಬಂಡಿ, ಜೋಕಾಲಿ, ವಾಕಿಂಗ್ ಪಾಥ್‍ಗಳು ಹಾಗೂ ಇತರ ಆಟಿಕೆ ಸ್ಥಳಗಳು, ಕಿರು ಸೇತುವೆ, ಕಾಂಪೌಂಡ್ ಗೋಡೆ ರಸ್ತೆ ವಿಸ್ತರಣೆ ಕಾಮಗಾರಿಗೆ ಈಗಾಗಲೇ ತೆರವಾಗಿವೆ. ಇದರಿಂದ ಉದ್ಯಾನವನದ ಅಂದ ಹದಗೆಟ್ಟಿದೆ. ಇವುಗಳ  ಮರು ನಿರ್ಮಾಣವಾಗುವವರೆಗೆ ಸಾರ್ವಜನಿಕರ ಕೊರತೆ ಕಾಡುತ್ತದೆ’ ಎಂಬುದು ಉದ್ಯಾನ ನಿರ್ವಹಣಾ ಸಿಬ್ಬಂದಿಯೊಬ್ಬರ ಮಾತಾಗಿದೆ. 

ADVERTISEMENT
ಹೊಸ ರೂಪ ಕೊಡಲು ಸಿದ್ಧತೆ:
ಈ ಹಿಂದೆ ಮೃಗಾಲಯವಾಗಿ, ನಂತರ ಉದ್ಯಾನವಾಗಿ ಮಾರ್ಪಟ್ಟಿದ್ದ ಜಾಗದಲ್ಲಿ ಸರಿಯಾದ ಯೋಜನೆಯಿಲ್ಲದೆ ಸಾರ್ವಜನಿಕರನ್ನು ಸೆಳೆಯಲು ಕೆಲವು ಉಪಕರಣ ಜೋಡಿಸಲಾಗಿತ್ತು. ಇದರಿಂದ ಜಾಗದ ಕೊರತೆಯೂ ಕಾಡುವಂತಾಗಿತ್ತು. ಪ್ರಸ್ತುತ ರಸ್ತೆ ವಿಸ್ತರಣೆಗೆ ಕೆಲವು ಪರಿಕರಗಳನ್ನು ತೆರವು ಮಾಡಿದ್ದು, ಅವುಗಳನ್ನು ಬೇರೆಡೆ ಜೋಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾಗದ ಕೊರತೆಯೂ ಆಗದಂತೆ ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿಕೊಂಡಿದ್ದು, ಅಂದುಕೊಂಡಂತೆ ಯೋಜನೆ ಜಾರಿಯಾದರೆ ಮಕ್ಕಳ ಉದ್ಯಾನ ಮತ್ತೆ ನಗರ ಸೌಂದರ್ಯಕ್ಕೆ ಗರಿಯಾಗಲಿದೆ’ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. 
ನಗರದ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದ್ದ ಮಕ್ಕಳ ಉದ್ಯಾನವನದಲ್ಲಿ ಪರಿಕರಗಳ ಮರು ನಿರ್ಮಾಣ ಕಾಮಗಾರಿ ತ್ವರಿತವಾಗಿ ನಡೆಸಬೇಕು
ಶ್ರೀನಾಥ ಹೆಗಡೆ ನಗರ ನಿವಾಸಿ
ಕಾಂಪೌಂಡ್ ಆಟದ ಪರಿಕರಗಳು ಮುಖ್ಯ ದ್ವಾರ ಕಮಾನುಗಳ ತೆರವಾಗಿದೆ. ಪುನರ್ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಅದರ ಅನುಮೋದನೆ ನಂತರ ಮರು ನಿರ್ಮಾಣ ಕಾರ್ಯ ನಡೆಯಲಿದೆ
ಜಿ.ಆರ್.ಅಜ್ಜಯ್ಯ- ಡಿಎಫ್ಒ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.