ADVERTISEMENT

ಶಿರಸಿ | ಶುದ್ಧ ನೀರು ಚರಂಡಿ ಪಾಲು: ಬರಗಾಲದಲ್ಲಿ ನಗರಾಡಳಿತದ ನಡೆಗೆ ಆಕ್ಷೇಪ

ರಾಜೇಂದ್ರ ಹೆಗಡೆ
Published 12 ಮಾರ್ಚ್ 2024, 5:24 IST
Last Updated 12 ಮಾರ್ಚ್ 2024, 5:24 IST
ಶಿರಸಿಯ ಭೀಮನಗುಡ್ಡದ ಜಲಸಂಗ್ರಹಾಲಯದಿಂದ ಹೊರಬಿಡುವ ಹೆಚ್ಚುವರಿ ನೀರು ಕಲ್ಕುಣಿ ರಸ್ತೆ ಬದಿಯ ಚರಂಡಿಯಲ್ಲಿ ತೊರೆಯಾಗಿ ಹರಿಯುತ್ತಿರುವುದು.
ಶಿರಸಿಯ ಭೀಮನಗುಡ್ಡದ ಜಲಸಂಗ್ರಹಾಲಯದಿಂದ ಹೊರಬಿಡುವ ಹೆಚ್ಚುವರಿ ನೀರು ಕಲ್ಕುಣಿ ರಸ್ತೆ ಬದಿಯ ಚರಂಡಿಯಲ್ಲಿ ತೊರೆಯಾಗಿ ಹರಿಯುತ್ತಿರುವುದು.   

ಶಿರಸಿ: ನಗರ ಪ್ರದೇಶಕ್ಕೆ ನಿರಂತರ ಹಾಗೂ ಸಮರ್ಪಕ ನೀರು ಪೂರೈಕೆ ಜವಾಬ್ದಾರಿ ಹೊತ್ತ ನಗರಸಭೆ ಬರಗಾಲದ ಸನ್ನಿವೇಶದಲ್ಲಿ ಲಕ್ಷಾಂತರ ಲೀಟರ್ ಶುದ್ಧ ನೀರನ್ನು ಅನಗತ್ಯವಾಗಿ ತೆರೆದ ಚರಂಡಿಗೆ ಬಿಟ್ಟು ಪೋಲು ಮಾಡುತ್ತಿದೆ. ನಗರಾಡಳಿತದ ಬೇಜವಾಬ್ದಾರಿ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಜಲಮೂಲಗಳಾದ ಮಾರಿಗದ್ದೆ ಹಾಗೂ ಕೆಂಗ್ರೆ ಜಾಕ್ ವೆಲ್ ಬಳಿ ನೀರಿನ ಹರಿವು ನಿಂತು ಕೆಲ ವಾರ ಕಳೆದಿದೆ. ಇರುವ ನೀರಿನ ಸಂಗ್ರಹದಲ್ಲಿ ಇನ್ನು ಎರಡೂವರೆ ತಿಂಗಳ ಬೇಸಿಗೆ ಕಳೆಯುವುದು ಕಷ್ಟಸಾಧ್ಯ. ಈ ನಡುವೆ 25 ಲಕ್ಷಕ್ಕೂ ಹೆಚ್ಚಿನ ಭಕ್ತರು ಸೇರುವ ಮಾರಿಕಾಂಬಾ ಜಾತ್ರೆ ಕೂಡ ಜರುಗಲಿದೆ.

ನಗರ ವ್ಯಾಪ್ತಿಗೆ ನೀರು ಪೂರೈಕೆಗೆ ₹56 ಲಕ್ಷ ವೆಚ್ಚದಲ್ಲಿ 13 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಯಲಾಗಿದೆ. ಇದರಲ್ಲಿ ಕೆಲವು ಬಾವಿಗಳಲ್ಲಿ ನೀರಿನ ಪ್ರಮಾಣ ಸಮರ್ಪವಾಗಿಲ್ಲ. ಇರುವ ನೀರನ್ನು ಮಿತವಾಗಿ ಬಳಸುವ ಕಾಲವಿದು. ಆದರೆ ಇಂಥ ಸಂದರ್ಭದಲ್ಲಿ ಮಾರಿಗದ್ದೆ ನೀರು ಶುದ್ಧೀಕರಿಸುವ ಹಾಗೂ ಸಂಗ್ರಹಿಸುವ ನಗರದ ನಿಲೇಕಣಿ ಸಮೀಪದ ಭೀಮನಗುಡ್ಡದಲ್ಲಿರುವ ಜಲಸಂಗ್ರಹಾಲಯದಿಂದ ನಿತ್ಯವೂ ಲಕ್ಷಾಂತರ ಲೀಟರ್ ನೀರನ್ನು ಚರಂಡಿಗೆ ಬಿಟ್ಟು ಪೋಲು ಮಾಡಲಾಗುತ್ತಿದೆ.

ADVERTISEMENT

ಸಂಗ್ರಹಾಲಯದ ಎರಡು ದಿಕ್ಕಿಗೆ ಪ್ರತ್ಯೇಕವಾಗಿ ಈ ನೀರನ್ನು ಹೊರ ಬಿಡಲಾಗುತ್ತಿದ್ದು, ಕಲ್ಕುಣಿ ರಸ್ತೆಯಲ್ಲಿ ಸಾಗಿದರೆ ತೊರೆಯಂತೆ ಈ ನೀರು ಚರಂಡಿಯಲ್ಲಿ ಹರಿಯುವುದು ಕಾಣುತ್ತದೆ. ಇದು ಯಾರ ಬಳಕೆಗೂ ಸಿಗದೆ ಚರಂಡಿಯಲ್ಲಿ ಹರಿದು ಹೋಗುತ್ತಿದ್ದು, ಕುಡಿಯುವ ನೀರಿಗೆ ಪರಿತಪಿಸುವ ಮಂದಿ ನಗರಸಭೆ ನಡೆಗೆ ಹಿಡಿ ಶಾಪ ಹಾಕುವಂತಾಗಿದೆ.

ಈ ಬಗ್ಗೆ ಜಲಸಂಗ್ರಹಾಲಯದ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ‘ಸಂಗ್ರಹಾಲಯ ಸ್ವಚ್ಛಗೊಳಿಸಿದ ಬೇಸ್ ವಾಟರ್ ಹಾಗೂ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಇಲ್ಲಿ ಅವಕಾಶವಿಲ್ಲ. ಅನಿವಾರ್ಯವಾಗಿ ಹೊರಬಿಡಬೇಕಿದೆ’ ಎನ್ನುತ್ತಾರೆ.

‘ನೀರು ಹೊರಬಿಡುವ ಪ್ರಕ್ರಿಯೆ ಇಂದು, ನಿನ್ನೆಯದಲ್ಲ. ವರ್ಷಂಪ್ರತಿ ಇದೇ ರೀತಿ ನೀರು ಹರಿಯುತ್ತದೆ. ಈ ಬಗ್ಗೆ ನಗರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ ಭಂಡಾರಿ. 

‘ನಗರ ಪ್ರದೇಶದ ನಿವಾಸಿಗಳು ವಿಶೇಷ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಾರೆ. ನೀರಿನ ಮೂಲ ತಿಳಿಯದ, ಅಶುದ್ಧ ನೀರಿಗೂ ಪ್ರತಿ ಟ್ಯಾಂಕರ್ ನೀರಿಗೆ ₹800ರಿಂದ ₹1 ಸಾವಿರ ಮೊತ್ತ ನೀಡಿ ಖರೀದಿಸುತ್ತಾರೆ. ನಿತ್ಯ ಒಂದಿಲ್ಲೊಂದು ಕಡೆ ಇಂಥ ಹತ್ತಾರು ಟ್ಯಾಂಕರ್ ನೀರು ಖಾಸಗಿಯವರಿಂದ ಪೂರೈಕೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಭೀಮನಗುಡ್ಡ ಜಲಸಂಗ್ರಹಾಲಯದಿಂದ ಹೊರಬಿಡುವ ಹೆಚ್ಚುವರಿ ನೀರನ್ನು ಪ್ರತ್ಯೇಕ ಟ್ಯಾಂಕ್ ನಿರ್ಮಿಸಿ ಸಂಗ್ರಹಿಸಿಟ್ಟರೆ ಟ್ಯಾಂಕರ್ ನೀರಿಗೆ ಬೇಡಿಕೆ ಸಲ್ಲಿಸುವವರಿಗೆ ನೀಡಬಹುದು. ಕನಿಷ್ಠ ದರ ನಿಗದಿ ಮಾಡಿದರೆ ನಗರಸಭೆಗೂ ಅದರಿಂದ ಆದಾಯ’ ಎನ್ನುತ್ತಾರೆ ಅವರು.  

ಕುಡಿಯುವ ನೀರಿನ ಬರ ಒಂದೆಡೆಯಾದರೆ ಇನ್ನೊಂದೆಡೆ ಧಾರಾಕಾರವಾಗಿ ಪೋಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಪೋಲಾಗುವ ನೀರಿನ ಬಳಕೆಗೆ ವ್ಯವಸ್ಥೆ ಮಾಡಬೇಕು
-ಪರಮಾನಂದ ಹೆಗಡೆ, ಸಾಮಾಜಿಕ ಕಾರ್ಯಕರ್ತ
ಸಂಗ್ರಹಾಲಯ ಶುದ್ಧ ಮಾಡಿದ ಕೆಲ ಪ್ರಮಾಣದ ನೀರನ್ನು ಹೊರಬಿಡುವುದು ಅನಿವಾರ್ಯ. ಹೀಗಾಗಿ ಹೊರಬಿಡುವ ನೀರಿನ ಪ್ರಮಾಣ ಎಷ್ಟೆಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
-ಕಾಂತರಾಜ್, ಪೌರಾಯುಕ್ತ ಶಿರಸಿ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.