ADVERTISEMENT

ಬನವಾಸಿ ಮತ ಬೇಟೆಯ ಕೇಂದ್ರಬಿಂದು: ಯಾಕಿಷ್ಟು ಮಹತ್ವ?

ಸಿ.ಎಂ. ಯಡಿಯೂರಪ್ಪ ಭೇಟಿ ಇಂದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರ ಸಭೆ ನಾಳೆ

ಸಂಧ್ಯಾ ಹೆಗಡೆ
Published 1 ಡಿಸೆಂಬರ್ 2019, 12:45 IST
Last Updated 1 ಡಿಸೆಂಬರ್ 2019, 12:45 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿರುವ ಐತಿಹಾಸಿಕ ಮಧುಕೇಶ್ವರ ದೇವಾಲಯ
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿರುವ ಐತಿಹಾಸಿಕ ಮಧುಕೇಶ್ವರ ದೇವಾಲಯ   

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯು ಮತಬೇಟೆಯ ಕೇಂದ್ರಬಿಂದುವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಬನವಾಸಿ ಸುತ್ತಮುತ್ತಲಿನ ಪಂಚಾಯ್ತಿ ಕೇಂದ್ರೀಕರಿಸಿ, ಅಬ್ಬರದ ಪ್ರಚಾರ ನಡೆಸುತ್ತಿವೆ. ಪ್ರಮುಖ ನಾಯಕರು ಇಲ್ಲಿಗೆ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಚಾರ ಸಭೆ ನ.24ರ ಬೆಳಿಗ್ಗೆ ಜಯಂತಿ ಪ್ರೌಢಶಾಲೆ ಮೈದಾನದಲ್ಲಿ ನಿಗದಿಯಾಗಿದೆ. ನ.25ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬನವಾಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಅಭ್ಯರ್ಥಿಗಳು, ಪಕ್ಷದ ನಾಯಕರು ಕೂಡ ಬನವಾಸಿಯನ್ನು ವಿಶೇಷ ಲಕ್ಷ್ಯದಲ್ಲಿಟ್ಟು ಪ್ರಚಾರ ನಡೆಸುತ್ತಿದ್ದಾರೆ.

ಯಾಕಾಗಿ ಈ ಮಹತ್ವ ?:ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳು, ಬನವಾಸಿ ಹೋಬಳಿ ಒಳಗೊಂಡ ಯಲ್ಲಾಪುರ ಕ್ಷೇತ್ರದಲ್ಲಿ ಒಟ್ಟು 1.72 ಲಕ್ಷ ಮತಗಳಿವೆ. ಅವುಗಳಲ್ಲಿ ಬನವಾಸಿ ಹೋಬಳಿಯಲ್ಲಿರುವ ಮತದಾರರು 38ಸಾವಿರದಷ್ಟು ಮಾತ್ರ. ಆದರೂ, ಈ ಭಾಗಕ್ಕೆ ರಾಜಕೀಯ ಮಹತ್ವ ಪಡೆದಿದೆ.

ADVERTISEMENT

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಮ ಹೆಬ್ಬಾರ್ ಅವರಿಗೆ ಗೆಲುವು ತಂದುಕೊಟ್ಟವರು ಬನವಾಸಿ ಮತದಾರರು. ಯಲ್ಲಾಪುರ, ಮುಂಡಗೋಡ ಭಾಗದ ಮತಕೇಂದ್ರದ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರು ಹೆಬ್ಬಾರರಿಗೆ ತೀವ್ರ ಪೈಪೋಟಿಯೊಡ್ಡಿದ್ದರು. ಕೆಲವು ಸುತ್ತಿನಲ್ಲಿ ಮುನ್ನಡೆಯನ್ನೂ ಹೊಂದಿದ್ದರು. ಕೊನೆಯ ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಹೆಬ್ಬಾರ್ 1483 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕೊನೆಯ ಸುತ್ತಿಗೆ ಉಳಿದಿದ್ದ ಇವಿಎಂಗಳು ಬನವಾಸಿ ಹೋಬಳಿಯ ಮತಗಟ್ಟೆಯದಾಗಿದ್ದವು.

ಬನವಾಸಿ ಹೋಬಳಿ ಯಾವಾಗಲೂ ಕಾಂಗ್ರೆಸ್‌ನ ಭದ್ರಕೋಟೆ. ಈ ಭಾಗದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲಿವೆ. ಹೆಬ್ಬಾರ್ ಅವರು ಈಗ ಬಿಜೆಪಿಗೆ ಬಂದಿದ್ದಾರೆ. ಅವರೊಡನೆ ಹಲವಾರು ಬೆಂಬಲಿಗರು ಬಿಜೆಪಿಗೆ ಸೇರಿದ್ದರೂ, ಸಾಮಾನ್ಯ ಮತದಾರರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಹಿಂದುಳಿದ ವರ್ಗದವರು, ನಾಮಧಾರಿಗಳು, ಲಿಂಗಾಯತರ ಪ್ರಾಬಲ್ಯ ಇರುವ ಇಲ್ಲಿನ ಮತಬ್ಯಾಂಕ್ ಉಳಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ನಾಮಧಾರಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಸಮುದಾಯದ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಹಾಗೂ ಮೂಲ ಮತ ಉಳಿಸಿಕೊಳ್ಳಲು ಕಾಂಗ್ರೆಸ್, ತಾರಾ ಪ್ರಚಾರಕರ ಮೂಲಕ ಮತಯಾಚಿಸುತ್ತಿದೆ.

‘ಚುನಾವಣೆ ಬಂದರೆ ಮತ ಕೇಳಲು ಬರುತ್ತಾರೆ ಅಷ್ಟೆ. ಚುನಾವಣೆ ರಾಜಕೀಯ ಪಕ್ಷಗಳಿಗೆ, ಅದು ನಮಗಲ್ಲ. ನಮ್ಮ ದೈನಂದಿನ ಕೃಷಿ ಚಟುವಟಿಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಯಾರ್ಯಾರೋ ಬರುತ್ತಾರೆ ಭಾಷಣ ಮಾಡಿ ಹೋಗುತ್ತಾರೆ’ ಎಂದು ಬಂಗಾರಪ್ಪ ಚನ್ನಯ್ಯ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.