ADVERTISEMENT

ಮಂಗನ ಕಾಯಿಲೆಯಿಂದ ಮೃತರಾದವರಿಗೆ ಪರಿಹಾರದ ಭರವಸೆ ನೀಡಿದ ಸಿಎಂ

ಮಂಗನ ಕಾಯಿಲೆ (ಕೆ.ಎಫ್.ಡಿ.)ಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 7:35 IST
Last Updated 6 ಮಾರ್ಚ್ 2024, 7:35 IST
   

ಶಿರಸಿ: ಮಂಗನ ಕಾಯಿಲೆ (ಕೆ.ಎಫ್.ಡಿ.)ಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಶಿರಸಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಂಗನ ಕಾಯಿಲೆಯಿಂದ ಯಾರೂ ಸಾಯಬಾರದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ರೋಗ ನಿವಾರಣೆ ಜತೆ ಪರಿಹಾರ ಕಾರ್ಯವೂ ಆಗಬೇಕು. ಹೀಗಾಗಿ ಕಾಯಿಲೆಗೆ ಔಷಧಿ ಕಂಡುಹಿಡಿಯಲು ಕೂಡ ಕ್ರಮವಹಿಸಲಾಗುವುದು. ಜತೆ, ಅರಣ್ಯ ಇಲಾಖೆ ಮೂಲಕ ಪರಿಹಾರ ನೀಡಲು, ಕಾಯಿಲೆಗೆ ತುತ್ತಾಗಿ ಮೃತಪಟ್ಟವರ ವರದಿ ತರಿಸಿಕೊಂಡು ಎಲ್ಲರಿಗೂ ಮೆಡಿಕಲ್ ಬಿಲ್ ಮೊತ್ತ ನೀಡಲು ಕ್ರಮವಹಿಸಲಾಗುವುದು ಎಂದರು.

ಖಾಸಗಿ ಸಂಸ್ಥೆಗಳು ನೀಡುವ ಎಫ್.ಎಸ್.ಎಲ್. ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ. ಆ ವರದಿ ಆಧರಿಸಿ ತನಿಖೆ ನಡೆಸುತ್ತೇವೆ ಎಂದರು.

ADVERTISEMENT

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹854 ಕೋಟಿ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉಚಿತ ಸಹಾಯವಾಣಿ ಆರಂಭಿಸಲಾಗುವುದು. ಸಚಿವರು ಮತ್ತು ಶಾಸಕರ ಅಧ್ಯಕ್ಷತೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ವಾರಕ್ಕೊಮ್ಮೆ ಪಿಡಿಒಗಳು ಮತ್ತು ವಿಎಗಳ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಡಿಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.