ADVERTISEMENT

ಸಿಎಂ ಸಿದ್ದರಾಮಯ್ಯ 'ಸಮಾಜವಾದಿ' ಅಲ್ಲ 'ಮಜಾವಾದಿ': ಸಂಸದ ಕಾಗೇರಿ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 8:22 IST
Last Updated 11 ಜುಲೈ 2024, 8:22 IST
<div class="paragraphs"><p>ವಿಶ್ವೇಶ್ವರ ಹೆಗಡೆ ಕಾಗೇರಿ</p></div>

ವಿಶ್ವೇಶ್ವರ ಹೆಗಡೆ ಕಾಗೇರಿ

   

ಶಿರಸಿ: 'ನಾನು ಸಮಾಜವಾದಿ ಎನ್ನುವ ಸಿಎಂ ಸಿದ್ದರಾಮಯ್ಯ ವಿವಿಧ ಭ್ರಷ್ಟ ಹಗರಣಗಳಲ್ಲಿ ಭಾಗಿಯಾಗಿ 'ಮಜಾವಾದಿ' ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಸೂಕ್ತ ಕಾಲ ಇದಾಗಿದೆ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ದೀನದಯಾಳ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿದ್ದು, ಸಚಿವರ ತಲೆದಂಡವಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರೂ ಆಗಿದ್ದಾರೆ. ಸರ್ಕಾರದ ಅಧಿಕೃತ ಖಾತೆಯಿಂದ ಬೇರೆ ಖಾತೆಗೆ ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆದರೆ ಸಿಎಂ ಗಮನಕ್ಕೆ ಬಂದಿಲ್ಲವೇ? ಹಾಗಾಗಿ ಈ ಭ್ರಷ್ಟತೆ ನಡೆಯಲು ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರಾಗಿದ್ದಾರೆ. ಸರ್ಕಾರದ ವ್ಯವಸ್ಥೆಯನ್ನೇ ಭ್ರಷ್ಟಾಚಾರಕ್ಕೆ ಬಳಸಿಕೊಂಡ ರೀತಿ ಕಾಂಗ್ರೆಸ್ ಭ್ರಷ್ಟತೆಯ ದಾಹಕ್ಕೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಮುಡಾ ಭ್ರಷ್ಟಾಚಾರ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಸ್ವತಃ ಸಿಎಂ ಹಾಗೂ ಸಚಿವ ಭೈರತಿ ಸುರೇಶ ಮುಂದಾಗಿದ್ದಾರೆ. ಅಧಿಕಾರಿಗಳ ತಲೆದಂಡದ ಮೂಲಕ ತಾವು ಬಚಾವಾಗಲು ನೋಡುತ್ತಿದ್ದಾರೆ’ ಎಂದು ಹೇಳಿದರು.

‘ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಹಗರಣ, ಮುಡಾ ಹಗರಣದಲ್ಲಿ ನೇರ ಪಾತ್ರವಿರುವ ಸಿಎಂ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು. ಇವೆರಡೂ ಪ್ರಕರಣ ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ರಾಜ್ಯದ ಮತದಾರರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯು ಕಾಂಗ್ರೆಸ್ ವಿರುದ್ಧ ಸದಾ ಧ್ವನಿ ಎತ್ತುತ್ತಿದೆ. ಆದರೂ ಆಡಳಿತದಲ್ಲಿ ಸುಧಾರಣೆಯಿಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಇದಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ’ ಎಂದರು.

‘ಅಲ್ಪಸಂಖ್ಯಾತರ ತುಷ್ಟೀಕರಣ ಮಿತಿಮೀರಿದೆ. ರಾಜ್ಯ ಸರ್ಕಾರದಲ್ಲಿ ಆಡಳಿತವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಸ್ಥಳೀಯವಾಗಿ ಕಾಂಗ್ರೆಸ್ ಮರಿ ಪುಡಾರಿಗಳು ಆಡಳಿತ ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.