ADVERTISEMENT

ಕಾರವಾರ: ಮೂರು ವರ್ಷಗಳ ಕಾಮಗಾರಿ ಲೋಕಾಯುಕ್ತ ತನಿಖೆಗೆ

ನಗರಸಭೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:20 IST
Last Updated 19 ಫೆಬ್ರುವರಿ 2024, 16:20 IST
ಕಾರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೆಎಂಸಿಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್ ಮಾತನಾಡಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ, ಪೌರಾಯುಕ್ತ ಕೆ.ಚಂದ್ರಮೌಳಿ ಪಾಲ್ಗೊಂಡಿದ್ದರು
ಕಾರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೆಎಂಸಿಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್ ಮಾತನಾಡಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ, ಪೌರಾಯುಕ್ತ ಕೆ.ಚಂದ್ರಮೌಳಿ ಪಾಲ್ಗೊಂಡಿದ್ದರು   

ಕಾರವಾರ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರಸಭೆಯಲ್ಲಿ ನಡೆದ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ನಿಯಮ ಉಲ್ಲಂಘಿಸಿ ಕೈಗೊಳ್ಳಲಾಗಿದ್ದು, ಅವುಗಳನ್ನು ಲೋಕಾಯುಕ್ತ ತನಿಖೆಗೆ ನೀಡಲಾಗುವುದು ಎಂದು ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆ.ಎಂ.ಸಿ.ಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್, ‘ಈಚೆಗೆ ಹಬ್ಬುವಾಡಾ ರಸ್ತೆ ಕಾಮಗಾರಿ ವಿಚಾರವಾಗಿ ತನ್ನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಮಾಜಿ ಶಾಸಕರು ಅನಗತ್ಯವಾಗಿ ಆರೋಪ ಹೊರಿಸಿದ್ದಾರೆ. ಅವರದೇ ಅವಧಿಯಲ್ಲಿ ಕೈಗೊಂಡ ಕಾಮಗಾರಿ ಅದಾಗಿತ್ತು’ ಎಂದರು.

ಇದಕ್ಕೆ ಆಕ್ಷೇಪಿಸಿದ ನಗರಸಭೆ ಬಿಜೆಪಿ ಸದಸ್ಯ ರವಿರಾಜ್ ಅಂಕೋಲೇಕರ, ‘ಚರಂಡಿ ನಿರ್ಮಿಸಿ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಕೆಗೆ ಒಂದು ಕೋಟಿ ಮೀಸಲಿಡಲಾಗಿದೆ. ಇನ್ನೂ ಕೆಲಸ ಕೈಗೊಂಡಿಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸೈಲ್, ‘ಕಳೆದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಟೆಂಡರ್ ಕರೆಯದೆ ಹಲವು ಕಾಮಗಾರಿಗಳು ನಡೆದಿದ್ದವು. ಸರಿಯಾಗಿ ಪೂರ್ಣಗೊಳ್ಳದ ಹಲವು ಕಾಮಗಾರಿಗಳು ಇವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕೆಲವು ನಿಯಮ ಮೀರಿ ನಡೆಸಿದ್ದೂ ಇವೆ. ಅವುಗಳನ್ನು ತನಿಖೆಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಪಂಚರಿಷಿ ವಾಡಾದಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆಯೇ ಮಂಜೂರಾತಿ ದೊರೆತಿದ್ದರೂ ಕಾಮಗಾರಿ ಆರಂಭಿಸಿಲ್ಲ’ ಎಂದು ಸದಸ್ಯೆ ಸ್ನೇಹಾ ಮಾಂಜ್ರೇಕರ ಹೇಳಿದರು.

‘ಬೀದಿದೀಪಗಳ ನಿರ್ವಹಣೆಗೆ ಎಲ್.ಇ.ಡಿ ಅಳವಡಿಕೆಯಾಗುತ್ತಿದೆ. ಪುನಃ ₹5.5 ಕೋಟಿ ಮೀಸಲಿಟ್ಟಿರುವುದು ಹೊರೆ’ ಎಂದು ಸದಸ್ಯ ಮಕ್ಬುಲ್ ಶೇಖ್ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ, ಪೌರಾಯುಕ್ತ ಕೆ.ಚಂದ್ರಮೌಳಿ ಇದ್ದರು.

₹10.92 ಲಕ್ಷದ ಉಳಿತಾಯ ಬಜೆಟ್ ಮಂಡನೆ

2024-25ನೇ ಸಾಲಿಗೆ ₹10.92 ಲಕ್ಷ ಉಳಿತಾಯ ಬಜೆಟ್‍ನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಂಡಿಸಿದರು.

‘ನಗರಸಭೆಗೆ ತೆರಿಗೆ ಎಸ್.ಎಫ್.ಸಿ ವಿಶೇಷ ಅನುದಾನ ಸೇರಿದಂತೆ ₹386509100 ಆದಾಯ ಸಂಗ್ರಹವಾಗಲಿದೆ. ಈ ಪೈಕಿ ₹385416500 ವೆಚ್ಚ ಮಾಡಲಾಗುತ್ತಿದೆ. ಹೊಸ ರಸ್ತೆಗೆ ₹327 ಲಕ್ಷ ಚರಂಡಿ ನಿರ್ಮಾಣಕ್ಕೆ ₹234 ಲಕ್ಷ ಯಂತ್ರೋಪಕರಣ ಖರೀದಿಗೆ ₹115 ಲಕ್ಷ ಸೇರಿದಂತೆ ಮೂಲಸೌಕರ್ಯಕ್ಕೆ ಗರಿಷ್ಠಕ್ಕೆ ವೆಚ್ಚ ಮಾಡಲಾಗುತ್ತಿದೆ’ ಎಂದರು.

‘ಬಜೆಟ್ ಮಂಡಿಸಿದಂತೆ ಕಾಮಗಾರಿಗಳು ಬೇಗನೆ ಅನುಷ್ಠಾನವಾಗಬೇಕು‌. ಈ ಹಿಂದೆ ಬಜೆಟ್‍ನಲ್ಲಿ ಅನುಷ್ಠಾನ ಸರಿಯಾಗಿರಲಿಲ್ಲ’ ಎಂದು ಸದಸ್ಯ ಸಂದೀಪ ತಳೇಕರ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.