ADVERTISEMENT

ಮುರಿದು ಬಿದ್ದ ಕಾಳಿ ಸೇತುವೆ: ಕಾರವಾರ - ಗೋವಾ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 2:01 IST
Last Updated 7 ಆಗಸ್ಟ್ 2024, 2:01 IST
<div class="paragraphs"><p>ಮುರಿದು ಬಿದ್ದ ಕಾಳಿ ಸೇತುವೆ</p></div>

ಮುರಿದು ಬಿದ್ದ ಕಾಳಿ ಸೇತುವೆ

   

ಕಾರವಾರ: ಇಲ್ಲಿನ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದ್ದು, ಲಾರಿಯೊಂದು ನದಿ ಪಾಲಾಗಿದೆ.

ರಾತ್ರಿ 1 ಗಂಟೆ ವೇಳೆಗೆ ಕಾಳಿ ನದಿಯ ಹಳೆಯ ಸೇತುವೆಯು ಮೂರು ಕಡೆಗಳಲ್ಲಿ ಏಕಾಏಕಿ ಮುರಿದು ಬಿದ್ದಿತ್ತು. ಸೇತುವೆ ಮೇಲೆ ಸಾಗುತ್ತಿದ್ದ ಗೋವಾದಿಂದ ಕಾರವಾರ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ. ಲಾರಿ ಚಾಲಕ ಮುರುಗನ್ ಅವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ADVERTISEMENT

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿನ ಕಾಳಿ ನದಿಗೆ ಎರಡು ಸೇತುವೆಗಳಿವೆ. ಗೋವಾ ಕಡೆಯಿಂದ ಕಾರವಾರದತ್ತ ವಾಹನಗಳು ಸಂಚರಿಸುತ್ತಿದ್ದ ಸೇತುವೆಯು ಮುರಿದು ಬಿದ್ದಿದೆ.

ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2009ರಲ್ಲಿ ಸೇತುವೆಯ ಸಂಪೂರ್ಣ ದುರಸ್ತಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಭಾಗಶಃ ಮಾತ್ರ ದುರಸ್ತಿ ನಡೆಸಲಾಗಿತ್ತು‌.

2018ರಲ್ಲಿ ಇದೇ ಸೇತುವೆ ಪಕ್ಕದಲ್ಲಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯ ಹೊಸ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ.

'ಹೆದ್ದಾರಿ ನಿರ್ಮಿಸಿದ ಐ.ಆರ್.ಬಿ ಕಂಪನಿಯು ಹಳೆ ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಸರಿಯಾಗಿ ನಡೆಸಿಲ್ಲ. ಶಿಥಿಲಗೊಂಡಿದ್ದ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಈ ದುರಂತಕ್ಕೆ ಕಾರಣ' ಎಂದು ಶಾಸಕ ಸತೀಶ ಸೈಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ರಸ್ತೆಯ ಎರಡೂ ಕಡೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಸೇತುವೆ ಕುಸಿದು ಬಿದ್ದಿರುವುದನ್ನು ನೋಡಲು ಜನರು ಗುಂಪು ಗುಂಪಾಗಿ ಬರತೊಡಗಿದ್ದಾರೆ.

ನಿಷ್ಕಾಳಜಿ: ಪ್ರಕರಣ ದಾಖಲು
ಕಾಳಿ ಸೇತುವೆ ಕುಸಿಯಲು ಸೇತುವೆಯ ಗುಣಮಟ್ಟ ಪರಿಶೀಲನೆ ನಡೆಸುವಲ್ಲಿ ನಿಷ್ಕಾಳಜಿತನ ತೋರಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐ.ಆರ್.ಬಿ ಕಂಪನಿ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ‘ದುರ್ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಲಾರಿ ಚಾಲಕ ತಮಿಳುನಾಡು ಮೂಲದ ರಾಧಾಕೃಷ್ಣನ್ ನೀಡಿರುವ ದೂರು ಆಧರಿಸಿ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಎನ್.ಎಚ್.ಎ.ಐ ಮತ್ತು ಐ.ಆರ್.ಬಿ ಕಂಪನಿಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಆಸ್ತಿಗೆ ರಕ್ಷಣೆ ನೀಡದೆ ನಿಷ್ಕಾಳಜಿತನ ತೋರಿರುವ ಪ್ರಕರಣ ದಾಖಲಿಸಲಾಗಿದೆ’ ಎಂದು ಎಸ್‍ಪಿ ಎಂ.ನಾರಾಯಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.