ಕಾರವಾರ: ‘ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಈ ಮೊದಲೂ ಇದ್ದವು. ಆದರೆ, ಅವುಗಳನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಕೊರತೆಯಿತ್ತು.ಈಗ ವೈದ್ಯಕೀಯ ವಿಜ್ಞಾನ ಮುಂದುವರಿದಿರುವ ಕಾರಣಹೆಚ್ಚು ಬೆಳಕಿಗೆ ಬರುತ್ತಿವೆ. ಅಲ್ಲದೇ ಜನಸಂಖ್ಯೆ ಹೆಚ್ಚಳವೂ ಇದಕ್ಕೆ ಕಾರಣ’ ಎಂದುಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಕೈಗಾದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಇಲ್ಲಿನ ಕ್ಯಾನ್ಸರ್ ರೋಗಿಗಳ ಬಗ್ಗೆ ಟಾಟಾ ಸ್ಮಾರಕ ಆಸ್ಪತ್ರೆ ಸಮೀಕ್ಷಾ ವರದಿ ಸಿದ್ಧಪಡಿಸಿದ್ದು, ಇನ್ನೆರಡು ತಿಂಗಳಲ್ಲಿ ಪ್ರಕಟವಾಗಲಿದೆ. ಸ್ಥಳೀಯ ರೋಗಿಗಳ ಅಂಕಿ ಅಂಶಗಳನ್ನು ಒಳಗೊಂಡಮೊದಲ ಸಂಪೂರ್ಣ ವರದಿ ಇದಾಗಿದೆ. ಈ ರೀತಿಯ ಸಮೀಕ್ಷೆ ಈ ಹಿಂದೆ ಯಾರೂ ಮಾಡಿರದ ಕಾರಣ ಕ್ಯಾನ್ಸರ್ ರೋಗಿಗಳ ಸಂಖ್ಯೆ ಇಂತಿಷ್ಟು ಪ್ರತಿಶತ ಹೆಚ್ಚಳವಾಗಿದೆ ಎಂದು ಹೇಳುವುದುಸರಿಯಲ್ಲ’ ಎಂದು ಹೇಳಿದರು.
ಅಣು ವಿದ್ಯುತ್ ಸ್ಥಾವರದಿಂದಲೇ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದೂ ಅವರು ತಿಳಿಸಿದರು.
ಅದೇ ಆಸ್ಪತ್ರೆಯ ಗ್ರಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಮಹಾಂತಶೆಟ್ಟಿ ಮಾತನಾಡಿ, ‘ವಿಕಿರಣದಿಂದ ಸಾಮಾನ್ಯವಾಗಿ ರಕ್ತ, ಥೈರಾಯ್ಡ್ ಮತ್ತು ಗ್ಲುಕೋಮಾ ಕ್ಯಾನ್ಸರ್ ಬರುತ್ತದೆ. ಆದರೆ, ಈ ಭಾಗದಲ್ಲಿ ಕೇವಲ ಒಂದು ಗ್ಲುಕೋಮಾ ಕ್ಯಾನ್ಸರ್ ಪತ್ತೆಯಾಗಿದೆ. ಉಳಿದಂತೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬಂದಿರುವ ಪ್ರಕರಣಗಳೇ ಜಾಸ್ತಿ. ಈ ಪ್ರಮಾಣ ದೇಶದ ವಿವಿಧ ಊರು, ನಗರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ’ ಎಂದರು.
ಸ್ಥಳೀಯರಿಗೆ ಆದ್ಯತೆ:ಕೈಗಾ ಅಣುವಿದ್ಯುತ್ ಸ್ಥಾವರದ ಘಟಕ ನಿರ್ದೇಶಕ ಜೆ.ಆರ್.ದೇಶಪಾಂಡೆ ಮಾತನಾಡಿ, ‘ಇಲ್ಲಿನ ಉದ್ಯೋಗಿಗಳ ಪೈಕಿ ಶೇ 68ರಷ್ಟು ಕನ್ನಡಿಗರಿದ್ದು, ಉತ್ತರಕನ್ನಡ ಜಿಲ್ಲೆಯವರೇ ಶೇ 38ರಷ್ಟು ಇದ್ದಾರೆ’ ಎಂದು ಅಂಕಿ ಅಂಶ ನೀಡಿದರು.
‘ಹೊಸಘಟಕಗಳ ಸ್ಥಾಪನೆಗೆ ಅವಶ್ಯವಿರುವ54.09 ಹೆಕ್ಟೇರ್ ಜಮೀನು ಈಗಾಗಲೇ ಭಾರತೀಯ ಪರಮಾಣು ಪ್ರಾಧಿಕಾರದ ವಶದಲ್ಲಿದೆ. ಈ ಘಟಕಗಳ ಸ್ಥಾಪನೆಗೆ ಕಡಿಯುವ ಮರಗಳ ಬದಲಾಗಿ ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 732 ಹೆಕ್ಟೇರ್ ಅರಣ್ಯ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲದೇ 30 ಹೆಕ್ಟೇರ್ ಖಾಸಗಿ ಜಮೀನು ಕೂಡ ಈ ಉದ್ದೇಶಕ್ಕೆ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.
‘ಇಂದು ವಿದ್ಯುತ್‌ಗೆಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಆದರೆ, ಉತ್ಪಾದನೆ ಅತಿ ಹೆಚ್ಚು ವೆಚ್ಚದಾಯಕ ಹಾಗೂ ಕಠಿಣವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಸರಕ್ಕೆ ಯಾವುದೇ ಹಾನಿ ಮಾಡದ ಅಣು ವಿದ್ಯುತ್ ಉತ್ಪಾದನೆ ಸೂಕ್ತ’ ಎಂದು ಅಭಿಪ್ರಾಯಪಟ್ಟರು.
ಕೈಗಾದ ಮುಖ್ಯ ಮೇಲ್ವಿಚಾರಕ ಟಿ.ಪ್ರೇಮಕುಮಾರ್, ಸ್ಥಾವರ ನಿರ್ದೇಶಕ ಜಿ.ಪಿ.ರೆಡ್ಡಿ, ಮುಖ್ಯ ನಿರ್ಮಾಣ ಎಂಜಿನಿಯರ್ ಪಿ.ಮೋಹನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.