ADVERTISEMENT

ನಿಗದಿತ ವೆಚ್ಚದಲ್ಲಿಯೇ ಕಾಮಗಾರಿ ಮುಗಿಸಿ: ಶಾಸಕ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:24 IST
Last Updated 8 ಮಾರ್ಚ್ 2024, 15:24 IST
ದಾಂಡೇಲಿಯ ಅಂಬೇವಾಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ವಯಂ ಚಾಲಿತ ಪರೀಕ್ಷಾ ಪಥದ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ದಾಂಡೇಲಿಯ ಅಂಬೇವಾಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ವಯಂ ಚಾಲಿತ ಪರೀಕ್ಷಾ ಪಥದ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ದಾಂಡೇಲಿ: ಕ್ಷೇತ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸರ್ಕಾರದ ಯೋಜನೆಗಳ ಮೂಲ ಉದ್ದೇಶ ಸಾರ್ಥಕವಾಗಬೇಕಾದರೆ ಕಾಮಗಾರಿಯಲ್ಲಿ ಗುಣಮಟ್ಟ  ಕಾಪಾಡಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದಾಂಡೇಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ವಯಂ ಚಾಲಿತ ಪರೀಕ್ಷಾ ಪಥದ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.

ದಾಂಡೇಲಿ ಪ್ರವಾಸೋದ್ಯಮ ನಗರದಲ್ಲಿ ವಾಹನ ದಟ್ಟಣೆ ಅಧಿಕವಿರುವುದರಿಂದ ಸಾರಿಗೆ ಕಚೇರಿ ಕಟ್ಟಡ ಕಾಮಗಾರಿ ಬೇಗನೆ ಮುಗಿಯಬೇಕು. ಜಾರಿಯಾದ ಯೋಜನೆಗಳು ನಿಗದಿತ ವೆಚ್ಚದಲ್ಲಿ ಮುಗಿದರೆ ಅದು ಸಂತಸ ಪಡುವ ಸುದ್ದಿ. ₹6.60 ಲಕ್ಷ ವೆಚ್ಚದ ಈ ಕಾಮಗಾರಿ ಮುಂದಿನ 9 ತಿಂಗಳಲ್ಲಿ ಪೂರ್ಣಗೊಂಡು ಜನರ ಉಪಯೋಗಕ್ಕೆ ಸಿಗಲಿದೆ ಎಂದರು.

ADVERTISEMENT

ದಾಂಡೇಲಿ ಸಹಾಯಕ ಪ್ರಾದೇಶಿಕ ಸಾರಿಗೆ ಮೋಟಾರ್ ಅಧೀಕ್ಷಕರಾದ ವೈ.ಎನ್.ಮೂಸರಕಲ್ಲ ಮಾತನಾಡಿ, 1.5 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ರೂಪುರೇಷೆಗಳನ್ನು ಹಾಗೂ ಕಾರ್ಯವೈಖರಿ ಕುರಿತು ವಿವರಿಸಿದರು.

ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮುಖ್ಯ ಕಾಮಗಾರಿ ಎಂಜಿನಿಯರ್‌ರಾದ ದಿವಾಕರ ಯರಗೊಪ್ಪ, ಗುತ್ತಿಗೆದಾರರಾದ ಬಿ.ಬಿ.ಪಾಟೀಲ, ತಹಶೀಲ್ದಾರ್‌ ಎಂ.ಎನ್. ಮಠದ, ಪೌರಾಯುಕ್ತ ರಾಜಾರಾಮ ಪವಾರ, ತಾ.ಪಂ. ಇಒ ಪ್ರಕಾಶ ಹಾಲಮ್ಮನವರ, ಬ್ಲಾಕ್ ಕಾಂಗ್ರೆಸ್ ನ ವಿ.ಆರ್.ಹೆಗಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹೀದಾ ಪಠಾಣ್ ಇದ್ದರು.

ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನಪ್ಪ ಕಪ್ಪರದ ಸ್ವಾಗತಿಸಿದರು. ಕನ್ಯಾ ವಿದ್ಯಾಲಯದ ಪ್ರಾಚಾರ್ಯರಾದ ಹನುಮಂತ ಕುಂಬಾರ ನಿರೂಪಿಸಿದರು.ಸಾರಿಗೆ ಕಚೇರಿ ಅಧಿಕಾರಿ ಎಮ್ ಎನ್.ಖಾಜಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.