ADVERTISEMENT

ಕಾಂಗ್ರೆಸ್ ಸರ್ಕಾರದಲ್ಲಿ ಅಪರಾಧಿಗಳ ರಕ್ಷಣೆ: ಕಾಗೇರಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 16:07 IST
Last Updated 13 ಅಕ್ಟೋಬರ್ 2024, 16:07 IST
ವಿಶ್ವೇಶ್ವರ ಹೆಗಡೆ ಕಾಗೇರಿ 
ವಿಶ್ವೇಶ್ವರ ಹೆಗಡೆ ಕಾಗೇರಿ    

ಶಿರಸಿ: ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಗುಂಪೊಂದರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಅಪರಾಧಿಗಳಿಗೆ ರಕ್ಷಣೆ ನೀಡುವ ಸಂದೇಶ ರವಾನಿಸಿದ್ದು ಖಂಡನೀಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

ನಗರದ ಸಂಸದರ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೆಲವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ದುಷ್ಕೃತ್ಯ ನಡೆದಿದ್ದು ಇನ್ನೂ ಹಚ್ಚಹಸಿರಾಗಿದೆ. ಆದರೆ ರಾಜ್ಯ ಸರ್ಕಾರ ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ 150 ಜನರ ಮೇಲಿನ ಪ್ರಕರಣ ಹಿಂತೆಗೆದುಕೊಂಡು ಅಪರಾಧಿಗಳಿಗೆ ರಕ್ಷಣೆ ನೀಡುವ ಸಂದೇಶ ರವಾನಿಸಿದೆ. ಇದರಿಂದ ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮೇಲೆ ನಂಬಿಕೆ ಹೋಗುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ರಕ್ಷಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮಾಡಿರುವ ಅಪರಾಧವಾಗಿದೆ ಎಂದರು. 

ಅಲ್ಪ ಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಸಮಾಜದ ಮುಖ್ಯ ವಾಹಿನಿಗೆ ಬರಬಾರದು ಎಂದು ಓಲೈಕೆಯ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಗೆ ಹಿಂದೂಗಳ ಮಾತನಾಡುವಾಗ ಜಾತಿಯೇ ಮುಖ್ಯವಾಗುತ್ತದೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅಲ್ಲಿ ಯಾಕೆ ಜಾತಿ ಗಣತಿ ನಡೆಸುತ್ತಿಲ್ಲ. ಕಾಂಗ್ರೆಸ್ ನ ಷಡ್ಯಂತರಕ್ಕೆ ಅಲ್ಪ ಸಂಖ್ಯಾತರು ಬಲಿಯಾಗಬಾರದು. ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆ ಬೆಳೆಸಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರವಿದೆ, ಆದರೆ ಆಡಳಿತ ಶೂನ್ಯವಾಗಿದೆ. ರಾಜಕೀಯ ದ್ವೇಷ, ಸೇಡಿನ ರಾಜಕಾರಣದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

ಸರ್ಕಾರ ಕೋರ್ಟ್‌ನಲ್ಲಿದೆ. ಮೊಂಡುತನ, ಅಹಂಕಾರದ ನಡುವಳಿಕೆಯಿಂದ ಸಿದ್ದರಾಮಯ್ಯ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ. ರೈತರ ಬೆಳೆಗಳೆಲ್ಲವೂ ಅತಿವೃಷ್ಟಿಯಿಂದ ಹಾನಿಯಾಗಿದೆ. ಪರಿಹಾರ ಮಾತ್ರ ಇಲ್ಲ. ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ಓಲೈಕೆ ರಾಜಕಾರಣ, ಭ್ರಷ್ಟಾಚಾರ ಸರ್ಕಾರೀಕರಣವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ ನಿಡಗೋಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಯುವ ಮೋರ್ಚಾ ಜಿಲ್ಲಾ ಘಕಟದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ನಗರ ಮಂಡಳ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಮುಖರಾದ ಶ್ರೀಕಾಂತ ನಾಯ್ಕ, ನಂದನಸಾಗರ, ರವಿಕುಮಾರ ಶೆಟ್ಟಿ, ಮಂಜುನಾಥ ಭಂಡಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.