ಭಟ್ಕಳ (ಉತ್ತರ ಕನ್ನಡ): ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಮಂಕಾಳ ವೈದ್ಯ ಭಾರಿ ಅಂತರದ ಮತಗಳಿಸಿ ವಿಜಯಶಾಲಿಯಾಗಿದ್ದು ಪ್ರತಿ ಸ್ಪರ್ಧಿ ಬಿಜೆಪಿಯ ಸುನೀಲ ನಾಯ್ಕ ವಿರುದ್ಧ 32 ಸಾವಿರ ಮತಗಳ ಅಂತರದಿಂದ ಜಯಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ನಡೆಸಿದರು.
ಮಂಕಾಳ ವೈದ್ಯ 20 ಸಾವಿರಕ್ಕಿಂತ ಹೆಚ್ಚಿನ ಮತಗಳ ಮುನ್ನಡೆ ಪಡೆಯುತ್ತಿದ್ದಂತಯೇ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ಶಂಶುದ್ದೀನ್ ವೃತ್ತ ಹಾಗೂ ಹಳೆ ಬಸ್ ನಿಲ್ದಾಣ, ಮಣ್ಕುಳಿ ಭಾಗಗಳಲ್ಲಿ ವಿಜಯೋತ್ಸವ ನಡೆಸಿದರು. ಕೆಲವೆಡೆ ರೋಡ್ ಶೋ ನಡೆಯಿತು.
‘ಆರು ತಿಂಗಳ ಹಿಂದಿನಿಂದಲೂ ಬೂತ್‌ಮಟ್ಟದಲ್ಲಿ ಜನಜಾಗೃತಿ ಸಭೆ ನಡೆಸಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಪ್ರತಿ ಬೂತ್ ವ್ಯಾಪ್ತಿಗೆ ಸರಾಸರಿ 50 ಕಾರ್ಯಕರ್ತರನ್ನು ನೇಮಿಸಿದ್ದು ಮತ ಸೆಳೆತಕ್ಕೆ ಅನುಕೂಲವಾಯಿತು’ ಎಂದು ಕಾಂಗ್ರೆಸ್ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.
‘ಕಳೆದ ಬಾರಿ ಹೊನ್ನಾವರ ಭಾಗದಲ್ಲಿ ಹಿಡಿತ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದರು. ಪರೇಶ ಮೇಸ್ತನದ್ದು ಸಹಜ ಸಾವು ಎಂದು ಸಿಬಿಐ ನೀಡಿದ ವರದಿ ಹೊನ್ನಾವರ ಭಾಗದಲ್ಲಿ ಮಂಕಾಳ ವೈದ್ಯ ಅವರಿಗೆ ಅನುಕಂಪದ ಮತ ಪಡೆಯಲು ಅನುಕೂಲವಾಯಿತು. ಚುನಾವಣೆ ಸಮಯದಲ್ಲೂ ಮೂಲ ಬಿಜೆಪಿಗರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ರೋಸಿ ಹೋದ ಅತೃಪ್ತ ಬಿಜೆಪಿಗರೇ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು ಹೀನಾಯ ಸೋಲಿಗೆ ಕಾರಣವಾಯಿತು’ ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.