ADVERTISEMENT

ಮುಂಡಗೋಡ: ಅತಿಕ್ರಮಣ ತಡೆಯಲು ವಸತಿಗೃಹ, ಕಚೇರಿ ನಿರ್ಮಾಣ

ಶಾಂತೇಶ ಬೆನಕನಕೊಪ್ಪ
Published 1 ಜೂನ್ 2024, 6:10 IST
Last Updated 1 ಜೂನ್ 2024, 6:10 IST
ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಕ್ರಾಸ್‌ನಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ಹಾಗೂ ವಸತಿ ಗೃಹದ ನಿರ್ಮಾಣ ಕಾರ್ಯ ನಡೆದಿರುವುದು
ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಕ್ರಾಸ್‌ನಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ಹಾಗೂ ವಸತಿ ಗೃಹದ ನಿರ್ಮಾಣ ಕಾರ್ಯ ನಡೆದಿರುವುದು   

ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಾಗವು ಮತ್ತಷ್ಟು ಅತಿಕ್ರಮಣವಾಗುವುದನ್ನು ತಪ್ಪಿಸಲು, ಇಲಾಖೆಯು ಸಿಬ್ಬಂದಿಗೆ ವಸತಿ ಗೃಹ ಹಾಗೂ ಕಚೇರಿ ನಿರ್ಮಾಣಕ್ಕೆ ಮುಂದಾಗಿದೆ. ಈ ಮೂಲಕ ಬೆಲೆ ಬಾಳುವ ಇಲಾಖೆಯ ಆಸ್ತಿಯನ್ನು ರಕ್ಷಿಸಲು ಹೊಸ ಪ್ರಯೋಗ ಮಾಡುತ್ತಿದೆ.

ಇಲ್ಲಿಯ ಹುಬ್ಬಳ್ಳಿ ರಸ್ತೆಯ ಹೆಸ್ಕಾಂ ಕಚೇರಿ ಎದುರು ಅರಣ್ಯ ಇಲಾಖೆಯ ಜಾಗವಿದೆ. ಈಗಾಗಲೇ ಅಲ್ಲಿ ಎರಡು ಸಮುದಾಯದವರು ದೇವಸ್ಥಾನ ನಿರ್ಮಿಸಿ, ಪ್ರತಿ ವರ್ಷ ಜಯಂತ್ಯುತ್ಸವ ಆಚರಿಸುತ್ತಿದ್ದಾರೆ. ಮಧ್ಯಭಾಗದಲ್ಲಿ ಉಳಿದಿದ್ದ ಜಾಗವು ಮತ್ತಷ್ಟು ಅತಿಕ್ರಮಣವಾಗದಿರಲಿ ಎಂದು ಮುಂದಾಲೋಚನೆ ಮಾಡಿರುವ ಅರಣ್ಯ ಇಲಾಖೆ, ಇಲಾಖೆಯ ಸಿಬ್ಬಂದಿಗೆ ವಸತಿ ಗೃಹ ಕಟ್ಟಿಸಿದೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ ಕಟ್ಟಡ ಇನ್ನೂ ಉದ್ಘಾಟನೆ ಆಗಿಲ್ಲ. 

ಬಂಕಾಪುರ ರಸ್ತೆಯ ಕಂಬಾರಗಟ್ಟಿ ಕ್ರಾಸ್‌ನಲ್ಲಿ ಸಾಮಾಜಿಕ ಅರಣ್ಯ ವಿಭಾಗದವರು ವಸತಿ ಗೃಹ ಹಾಗೂ ಕಚೇರಿ ನಿರ್ಮಾಣದ ಕೆಲಸವನ್ನು ನಡೆಸಿದ್ದಾರೆ. ಈ ಜಾಗವು ಅತಿಕ್ರಮಣವಾಗದಂತೆ ಸುತ್ತಲೂ ಕಾಂಪೌಂಡ್‌ ಗೋಡೆ ಕಟ್ಟಿಸಿ, ಆಸ್ತಿಯನ್ನು ಉಳಿಸಿಕೊಳ್ಳಲು ಇಲಾಖೆ ಮುಂದಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಬಹುತೇಕ ಅರಣ್ಯ ಪ್ರದೇಶವಿದ್ದು, ವಸತಿ ಹಾಗೂ ಉಳುಮೆಗಾಗಿ ಹಲವರು ಅರಣ್ಯ ಭೂಮಿಯನ್ನೇ ಅವಲಂಬಿಸಿದ್ದಾರೆ. ಬಹಳ ವರ್ಷಗಳಿಂದ ಅತಿಕ್ರಮಣ ಭೂಮಿಯಲ್ಲಿಯೇ ವಸತಿ ಹಾಗೂ ಉಳುಮೆ ಮಾಡುತ್ತಿರುವ ಫಲಾನುಭವಿಗಳಿಗೆ ಈಗಾಗಲೇ ಜಿಪಿಎಸ್‌ ಮಾಡಿಸುವ ಕಾರ್ಯವೂ ನಡೆದಿದೆ. ಅತಿಕ್ರಮಣ ರೈತರಿಗೆ ಪಟ್ಟಾ ಸಿಗುವ ಬೇಡಿಕೆ ದಶಕಗಳಿಂದ ಹಾಗೆಯೇ ಉಳಿದಿದೆ. ಆದರೆ, ಹೊಸದಾಗಿ ಅತಿಕ್ರಮಣ ಆಗದಂತೆ ತಡೆಗಟ್ಟಲು ಇಲಾಖೆಯು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

‘ಕಂಬಾರಗಟ್ಟಿ ಕ್ರಾಸ್‌ನಲ್ಲಿದ್ದ ಅರಣ್ಯ ಜಾಗದಲ್ಲಿ ಹಲವು ವರ್ಷಗಳಿಂದ ಶವಸಂಸ್ಕಾರಕ್ಕೆ ಉರುವಲು ಕಟ್ಟಿಗೆ ಸಿಗುವ ವ್ಯವಸ್ಥೆ ಇತ್ತು. ಆದರೆ, ಇಲಾಖೆಯವರು ಅಲ್ಲಿ ಹೊಸದಾಗಿ ಕಟ್ಟಡ ಕಟ್ಟುತ್ತಿರುವುದರಿಂದ ಉರುವಲು ಕಟ್ಟಿಗೆ ಮಾರಾಟ ಬಂದ್‌ ಆಗಿದೆ. ಇದರಿಂದ ಉರುವಲು ಕಟ್ಟಿಗೆಗೆ ಟಿಂಬರ್‌ ಡಿಪೊಕ್ಕೆ ಹೋಗಿ, ಅಲ್ಲಿ ಮೊದಲೇ ಖರೀದಿಸಿದ ಜನರಿಂದ ಉರುವಲು ಕಟ್ಟಿಗೆ ಪಡೆಯಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಉರುವಲು ಕಟ್ಟಿಗೆ ಮೊದಲಿನಂತೆ ಸಿಗಲು, ಪರ್ಯಾಯ ವ್ಯವಸ್ಥೆಯನ್ನು ಇಲಾಖೆಯವರು ಮಾಡಬೇಕು. ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಂಡ ಜನರಿಗೆ ತೊಂದರೆ ಕೊಡಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ಆಗ್ರಹಿಸಿದರು.

ಹೊಸದಾಗಿ ಅತಿಕ್ರಮಣವಾಗದಂತೆ ಕ್ರಮ

‘ಈಗಾಗಲೇ ಸರ್ವೆ ಮಾಡಿ ನಕಾಶೆ ಮಾಡಿರುವ ಜಾಗದಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಆದರೆ ಪಟ್ಟಣ ವ್ಯಾಪ್ತಿಯಲ್ಲಿರುವ ಇಲಾಖೆಗೆ ಸಂಬಂಧಿಸಿದ ಆಸ್ತಿಯನ್ನು ಉಳಿಸಿಕೊಳ್ಳಲು ಸಿಬ್ಬಂದಿ ವಸತಿ ಗೃಹ ಕಚೇರಿ ನಿರ್ಮಿಸಲಾಗುತ್ತಿದೆ. ಹುಬ್ಬಳ್ಳಿ ರಸ್ತೆಯ ಹೆಸ್ಕಾಂ ಎದುರು ಈಗಾಗಲೇ ಕಟ್ಟಡ ಪೂರ್ಣಗೊಂಡಿದ್ದು ವಿದ್ಯುತ್‌ ಹಾಗೂ ನೀರಿನ ಸೌಕರ್ಯ ಬಾಕಿಯಿದೆ. ಕಂಬಾರಗಟ್ಟಿ ಕ್ರಾಸ್‌ನಲ್ಲಿಯೂ ಸಹ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿಯೂ ಹೊಸದಾಗಿ ಅತಿಕ್ರಮಣವಾಗದಂತೆ ಗಡಿ ಗುರುತಿಸಿ ಅಗಳ ತೆಗೆಸುವ ಕಾರ್ಯ ಮಾಡಲಾಗಿದೆʼ ಎಂದು ವಲಯ ಅರಣ್ಯಾಧಿಕಾರಿ ವಾಗೀಶ ಬಿ.ಜೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.