ADVERTISEMENT

ಮುಂಡಗೋಡ: ಈ ಪಾಲಿಹೌಸ್‌ನಲ್ಲಿ ನಳನಳಿಸುತ್ತಿವೆ ಸೌತೆಕಾಯಿ

ಟಿಬೇಟಿಯನ್ನರು ದೊಡ್ಡ ಮಟ್ಟದ ಗ್ರಾಹಕರು: ಮಾವ–ಅಳಿಯನ ಕೃಷಿಗಾಥೆ

​ಶಾಂತೇಶ ಬೆನಕನಕೊಪ್ಪ
Published 12 ಜುಲೈ 2024, 7:24 IST
Last Updated 12 ಜುಲೈ 2024, 7:24 IST
ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾನಂದ ಹರಿಜನ ಹಾಗೂ ಮಂಜುನಾಥ ಕಟ್ಟಿಮನಿ ಇಬ್ಬರೂ ಜೊತೆಯಾಗಿ ಪಾಲಿಹೌಸ್‌ನಲ್ಲಿ ಬೆಳೆದಿರುವ ಸೌತೆಕಾಯಿ
ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾನಂದ ಹರಿಜನ ಹಾಗೂ ಮಂಜುನಾಥ ಕಟ್ಟಿಮನಿ ಇಬ್ಬರೂ ಜೊತೆಯಾಗಿ ಪಾಲಿಹೌಸ್‌ನಲ್ಲಿ ಬೆಳೆದಿರುವ ಸೌತೆಕಾಯಿ   

ಮುಂಡಗೋಡ: ಕಾಲೇಜು ಶಿಕ್ಷಣ ಮುಗಿಸಿದ ನಂತರ, ಉದ್ಯೋಗಕ್ಕಾಗಿ ಅಲೆದಾಡದೇ, ಇರುವ ಜಮೀನಿನಲ್ಲಿಯೇ ಕ್ಯಾಪ್ಸಿಕಂ ಹಾಗೂ ಸೌತೆಕಾಯಿ ಬೆಳೆದು ಕೈತುಂಬ ಆದಾಯ ಗಳಿಸಿ, ಪ್ರಗತಿಪರ ರೈತ ಎನಿಸಿದ್ದಾರೆ ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾನಂದ ಹರಿಜನ ಹಾಗೂ ಮಂಜುನಾಥ ಕಟ್ಟಿಮನಿ.

ಸಂಬಂಧದಲ್ಲಿ ಇವರು ಅಳಿಯ ಮತ್ತು ಮಾವ. ಇಬ್ಬರ ಶ್ರಮದಿಂದ ಪಾಲಿಹೌಸ್‌ನಲ್ಲಿ ಸೌತೆಕಾಯಿ ನಳನಳಿಸುತ್ತಿವೆ.

ಪಿಯುಸಿ ಮುಗಿಸಿರುವ ಶಿವಾನಂದ ಹಾಗೂ ಡಿಪ್ಲೊಮಾ ಮುಗಿಸಿರುವ ಮಂಜುನಾಥ ಇಬ್ಬರೂ ಜತೆಯಾಗಿ, ಪಾರಂಪರಿಕ ಬೆಳೆಯ ಜತೆಗೆ ಕಡಿಮೆ ಖರ್ಚಿನಲ್ಲಿ ಆದಾಯ ತಂದುಕೊಡುವ ಸೌತೆಕಾಯಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ತೋಟಗಾರಿಕಾ ಇಲಾಖೆಯ ಸಹಾಯಧನದ ಯೋಜನೆಯಡಿ ಹತ್ತು ಗುಂಟೆ ಜಾಗದಲ್ಲಿ ಪಾಲಿಹೌಸ್‌ ನಿರ್ಮಿಸಿಕೊಂಡು, ಆರಂಭದಲ್ಲಿ ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದಿದ್ದಾರೆ. ಎರಡು ವರ್ಷ ಬೆಳೆದ ನಂತರ, ಮಾರುಕಟ್ಟೆಯ ಸಮಸ್ಯೆ ಎದುರಾಗಿದೆ. ಆಗ ಕ್ಯಾಪ್ಸಿಕಂ ಬಿಟ್ಟು, ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಸೌತೆಕಾಯಿ ಬೆಳೆಯಲು ಮುಂದಾಗಿದ್ದಾರೆ.

ADVERTISEMENT

ಸೂಕ್ತ ಮಾರುಕಟ್ಟೆ ಲಭ್ಯತೆ, ಬೆಳೆಗೆ ಇರುವ ಬೇಡಿಕೆಯಿಂದ ಕಳೆದ ನಾಲ್ಕು ವರ್ಷಗಳಿಂದ ಸೌತೆಕಾಯಿ ಬೆಳೆಯುತ್ತ ಹಾಕಿದ ಬಂಡವಾಳಕ್ಕೆ ಮೋಸ ಆಗದಂತೆ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ.

‘ಮಾರುಕಟ್ಟೆ ಸಮಸ್ಯೆಯಿಂದ ಕ್ಯಾಪ್ಸಿಕಂ ಬೆಳೆ ಕೈ ಹಿಡಿಯಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಪಾಲಿಹೌಸ್‌ನ್ನು ಪರ್ಯಾಯ ಬೆಳೆಗೆ ಉಪಯೋಗಿಸುವ ಆಲೋಚನೆ ಬಂತು. ಸನಿಹದ ಟಿಬೆಟನ್‌ ಕ್ಯಾಂಪ್‌ನಲ್ಲಿ ಸೌತೆಕಾಯಿಗೆ ಬೇಡಿಕೆ ಹೆಚ್ಚಿರುವುದು ಕಂಡುಬಂತು. ಸೌತೆಕಾಯಿ ಬೆಳೆದರೆ ಮಾರುಕಟ್ಟೆ ಸಮಸ್ಯೆ ಆಗಲಿಕ್ಕಿಲ್ಲ ಎಂದು ತಿಳಿದು, ಹೊಸ ಪ್ರಯೋಗಕ್ಕೆ ಮುಂದಾದೆವು. ರಿಜ್ವಾನ್‌ ತಳಿಯ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಂಶ ಇರುತ್ತದೆ. ಟಿಬೆಟನ್‌ರೂ ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಕಾರಣದಿಂದ ಈ ತಳಿಯ ಸೌತೆಕಾಯಿ ಬೆಳೆಯಲು ಸಾಧ್ಯವಾಯಿತು’ ಎಂದು ರೈತ ಶಿವಾನಂದ ಹೇಳಿದರು.

ಪಾಲಿಹೌಸ್‌ನಲ್ಲಿ ಬೆಳೆದಿರುವ ಸೌತೆಕಾಯಿ ಕಟಾವು ಮಾಡುತ್ತಿರುವ ರೈತ ಶಿವಾನಂದ

45 ದಿನದಲ್ಲಿ ಫಸಲು

‘10 ಗುಂಟೆ ವಿಸ್ತೀರ್ಣದ ಪಾಲಿಹೌಸ್‌ನಲ್ಲಿ ತಿಂಗಳಿಗೆ 8 ಕ್ವಿಂಟಾಲ್‌ನಿಂದ 1 ಟನ್‌ವರೆಗೆ ಸೌತೆಕಾಯಿ ಬೆಳೆಯಬಹುದು. ಸಸಿಗಳನ್ನು ಬೆಳೆಸಿದ 45 ದಿನಗಳಲ್ಲಿಯೇ ಫಲ ನೀಡಲು ಆರಂಭವಾಗುತ್ತದೆ. ಕಟಾವಿನ ಬಗ್ಗೆ ತುಸು ಜಾಗೃತೆ ವಹಿಸಬೇಕಾದ ಅವಶ್ಯಕತೆಯಿದೆ. ಹನಿ ನೀರಾವರಿ ಸೌಲಭ್ಯದಿಂದ ಬೆಳೆಗೆ ಅಗತ್ಯವಿದ್ದಷ್ಟು ನೀರು ಕೊಟ್ಟರೆ ಸಾಕು. ಕಡಿಮೆ ನೀರಿನಲ್ಲಿ ಉಷ್ಣ ವಾತಾವರಣದಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ. ನೂರು ದಿನಗಳವರೆಗೆ ಸೌತೆಕಾಯಿ ಕಟಾವು ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲಿ ಈ ತಳಿಯ ಸೌತೆಕಾಯಿ ಪ್ರತಿ ಕೆಜಿಗೆ ₹30 ರಿಂದ 35 ರೂಪಾಯಿಯಂತೆ ಮಾರಾಟ ಆಗುತ್ತದೆ’ ಎಂದು ವಿವರಿಸುತ್ತಾರೆ ರೈತ ಶಿವಾನಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.