ದಾಂಡೇಲಿ: ನಗರದ ನವರಾತ್ರಿ ಉತ್ಸವ ಸಮಿತಿ ವತಿಯಿಂದ 3ನೇ ವರ್ಷದ ದಾಂಡೇಲಿ ನವರಾತ್ರಿ ಉತ್ಸವಕ್ಕೆ ಹಳೆ ನಗರಸಭೆ ಮೈದಾನದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆತಿದ್ದು ಬೆಳಿಗ್ಗೆ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. 8 ಅಡಿ ಎತ್ತರದ ದುರ್ಗಾದೇವಿಯ ಮೂರ್ತಿ ಎಲ್ಲರನ್ನ ಆಕರ್ಷಿಸುತ್ತಿದೆ.
ಹಲವು ಆಕರ್ಷಣೆಗಳೊಂದಿಗೆ 9 ದಿನಗಳ ಕಾಲ ಪೂಜಿಸಲ್ಪಡುವ ದುರ್ಗಾದೇವಿಯ ಮೂರ್ತಿ ಗುರುವಾರ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪನೆಯು ಸಕಲ ವಿಧಿ ವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ನಡೆಯಿತು.
ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಟಿ.ಎಸ್.ಬಾಲಮಣಿ ಹಾಗೂ ಅಶ್ವಿನಿ ಬಾಲಮಣಿ ದಂಪತಿ ಪೂಜೆ ಸಲ್ಲಿಸುವ ಮೂಲಕ ದುರ್ಗಾದೇವಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯವನ್ನು ನೆರವೇರಿಸಿದರು. ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಹೆಗಡೆ ಹಾಗೂ ಸುವರ್ಣ ಹೆಗಡೆ ದಂಪತಿ ಪೂಜೆ ಸಲ್ಲಿಸಿದರು.
ಮೊದಲ ದಿನದ ರಾತ್ರಿ ನಾದವರ್ಷಿಣಿ ಕಲಾ ಸಂಸ್ಥೆಯ ಕಲಾವಿದರಿಂದ ಸುಗಮ ಸಂಗೀತ ಹಾಗೂ ಭಜನ ಸಂಗೀತ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ದಾಂಡಿಯಾ ಕೋಲಾಟ ಕಾರ್ಯಕ್ರಮ ನಡೆಯಿತು.
ದಾಂಡೇಲಿಯ ನವರಾತ್ರಿ ಉತ್ಸವದ ಎರಡನೇ ದಿನ ಶುಕ್ರವಾರ ಸಂಜೆ ಸ್ಥಳೀಯ ಕಲಾವಿದರಿಂದ ಕರೋಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ನವರಾತ್ರಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹಾಣ, ಕೋಶಾಧ್ಯಕ್ಷ ಅಶುತೋಶ ರಾಯ್ , ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉತ್ಸವದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.