ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಇದ್ದ 11 ತಾಲ್ಲೂಕುಗಳ ಪಟ್ಟಿಗೆ 12ನೇಯದಾಗಿ ‘ದಾಂಡೇಲಿ’ ಸೇರಿಕೊಂಡು ಐದು ವರ್ಷ ಕಳೆಯಿತು. ದಾಖಲೆಯಲ್ಲಿ ಹೊಸ ತಾಲ್ಲೂಕಾದರೂ ವಾಸ್ತವದಲ್ಲಿ ತಾಲ್ಲೂಕು ಕೇಂದ್ರದಲ್ಲಿರಬೇಕಾದ ಸೌಕರ್ಯಗಳ ಕೊರತೆ ಇನ್ನೂ ಎದ್ದು ಕಾಡುತ್ತಿದೆ.
ಈ ಮೊದಲು ಹಳಿಯಾಳ ತಾಲ್ಲೂಕಿಗೆ ದಾಂಡೇಲಿ ಸೇರಿಕೊಂಡಿತ್ತು. ಇಲ್ಲಿನ ಜನರು ಕಚೇರಿ ಕೆಲಸಗಳಿಗೆ ದೂರ ಅಲೆಯುವುದನ್ನು ತಪ್ಪಿಸಲು ಮತ್ತು ಆಡಳಿತ ವ್ಯವಸ್ಥೆ ಸುಗಮವಾಗಿಸುವ ಉದ್ದೇಶದಿಂದ ಹೊಸ ತಾಲ್ಲೂಕು ರಚನೆ ಆಯಿತು. ಆದರೆ, ಈ ಉದ್ದೇಶ ಇನ್ನೂ ಈಡೇರಿಲ್ಲ ಎಂಬುದು ಜನರ ದೂರು.
ನಗರದಲ್ಲಿ ಅಗತ್ಯ ಕಚೇರಿಗಳನ್ನು ಕಾಣದೆ ಪಕ್ಕದ ಹಳಿಯಾಳಕ್ಕೆ ಜನರು ಅಗತ್ಯ ಕೆಲಸಗಳಿಗೆ ಅಲೆಯುವುದು ಮಾತ್ರ ತಪ್ಪಿಲ್ಲ. ಇದು ಜನರ ಬೇಸರಕ್ಕೂ ಮುಖ್ಯ ಕಾರಣವಾಗಿದೆ. ಇನ್ನೂ ತಾಲ್ಲೂಕಿನ ಗಡಿ ನಿಗದಿಯಾಗಿಲ್ಲ. ತಾಲ್ಲೂಕು ಪಂಚಾಯ್ತಿ ಕಚೇರಿಯು ನಗರಸಭೆ ಕಚೇರಿಯ ಕೊಠಡಿಯೊಂದರಲ್ಲಿ ನಡೆಯುತ್ತಿದೆ. ಉಳಿದ ಇಲಾಖೆಗಳಿಗೆ ಸ್ವಂತ ಕಚೇರಿಗಳಿಲ್ಲ.
ತಾಲ್ಲೂಕಿಗೆ ಆಲೂರು, ಕೋಗಿಲಬನ-ಬಡಕಾನಶಿರಡಾ, ಅಂಬಿಕಾನಗರ,ಅಂಬೇವಾಡಿ ನಾಲ್ಕು ಗ್ರಾಮ ಪಂಚಾಯ್ತಿಯನ್ನು ನೀಡಲಾಗಿದೆ. ಕೆಲವು ಕಡೆ ತಾಲ್ಲೂಕಿನ ಗಡಿ ಗುರುತು ಪ್ರಕ್ರಿಯೆಯೂ ಖಚಿತವಾಗದೆ, ಗಡಿಭಾಗದ ಜನ ಸೌಲಭ್ಯಗಳಿಗಾಗಿ ಯಾವ ತಾಲ್ಲೂಕಿನಲ್ಲಿ ಅರ್ಜಿಸಲ್ಲಿಸಬೇಕೆಂಬ ಗೊಂದಲದಲ್ಲಿ ಜನರಿದ್ದಾರೆ.
ನಗರದಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ರಕ್ತದ ಕೊರತೆ ನೀಗಿಸಲು ರಕ್ತನಿಧಿ ಬ್ಯಾಂಕ್ ಸ್ಥಾಪನೆಗೆ ಅನುಮತಿ ಬೇಕಾಗಿದೆ. ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗದ ಕೊರತೆಯಿಂದಾಗಿ ಬಂದಿರುವ ಅನುದಾನ ಮರಳುವ ಸಾಧ್ಯತೆ ಇದೆ. ಪ್ರವಾಸೋದ್ಯಮದಿಂದ ಹೆಚ್ಚಿನ ಆದಾಯ ತರುವ ದಾಂಡೇಲಿ ತಾಲ್ಲೂಕಿಗೆ ಸಿಗಬೇಕಾದ ಸೌಲಭ್ಯಗಳು ಇಲ್ಲದಿರುವುದರಿಂದ ದಾಂಡೇಲಿ ಜನರು ಆಸ್ಪತ್ರೆಗೆ, ಚಿಕಿತ್ಸೆಗೆ ಬೇರೆಡೆಗೆ ತೆರಳಲು ವೈದ್ಯರ ಶಿಫಾರಸು ಪಡೆದುಕೊಳ್ಳಲು ಸಹ ಪಕ್ಕದ ಹಳಿಯಾಳ, ಧಾರವಾಡ ಅವಲಂಬಿಸಬೇಕಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಹೊಸ ತಾಲ್ಲೂಕಾಗಿ ಘೋಷಣೆಯಾಗಿ ಹಲವು ವರ್ಷ ಕಳೆದರೂ ತಾಲ್ಲೂಕು ಪಂಚಾಯ್ತಿಗೆ ಇದುವರೆಗೂ ಸ್ವಂತ ಕಟ್ಟಡದ ಭಾಗ್ಯ ಲಭಿಸಿಲ್ಲ. ನಗರಸಭೆಯ ಕಟ್ಟಡದ ಎರಡು ಕೊಠಡಿ ಬಳಸಿ ತಾಲ್ಲೂಕು ಪಂಚಾಯ್ತಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯ ಸಿಬ್ಬಂದಿ ಕೊರತೆ ಕಾಡುತ್ತಿದೆ. ಒಟ್ಟು 14 ಸಿಬ್ಬಂದಿ ಇರಬೇಕಾದ ಕಚೇರಿಯಲ್ಲಿ ಇಒ ಮತ್ತು ಯೋಜನಾಧಿಕಾರಿ ಹೊರತುಪಡಿಸಿದರೆ ಉಳಿದ ಯಾವುದೇ ಕಾಯಂ ಸಿಬ್ಬಂದಿ ಇಲ್ಲ.
ನಗರಸಭೆಯಲ್ಲಿ ಪೌರಾಯುಕ್ತ ಸೇರಿದಂತೆ ಕೆಲವು ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಇದ್ದು, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್, ಪರಿಸರ ಅಧಿಕಾರಿ, ಹಿರಿಯ ಎಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕ, ಸಮುದಾಯದ ಅಧಿಕಾರಿ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಉಳಿದಕೊಂಡಿವೆ. 10 ಮಂದಿ ಪೌರಕಾರ್ಮಿಕರು ಸೇರಿದಂತೆ ಹೊರ ಗುತ್ತಿಗೆ 69 ಪೌರ ಕಾರ್ಮಿಕರ ಕೆಲಸ ಮಾಡುತ್ತಿದ್ದು ನೀರು ಸರಬರಾಜು ವಿಭಾಗದಲ್ಲಿ, ಲೋಡರ್ ವಿಭಾಗಕ್ಕೆ ಸಿಬ್ಬಂದಿ ಕೊರತೆ ಇದೆ.
‘ಕೆಲವು ಹುದ್ದೆಗಳು ಕಳೆದ ಆರು ತಿಂಗಳಿಂದ ಖಾಲಿಯಿದ್ದು, ಕೆಲಸದ ಒತ್ತಡ ಸಿಬ್ಬಂದಿಯನ್ನು ಹೈರಾಣಾಗಿಸಿದೆ. ಹೊಸದಾಗಿ ಬರುವವರು ಮೂರರಿಂದ ಆರು ತಿಂಗಳು ಕೆಲಸ ಮಾಡಿ ಮತ್ತೆ ಬೇರೆ ಕಡೆ ವರ್ಗಾವಣೆಗೊಳ್ಳುತ್ತಿದ್ದಾರೆ. ಇದರಿಂದ ಸುಗಮ ಆಡಳಿತ ನಡೆಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ನಗರಸಭೆ ಸಿಬ್ಬಂದಿ.
‘ನಗರಾಡಳಿತವು ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇದರಿಂದ ಇರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ಪೌರಾಯುಕ್ತ ರಾಜಾರಾಮ ಪವಾರ.
ಅಂಬೇವಾಡಿಯಲ್ಲಿ ಹೊಸದಾಗಿ ನಿರ್ಮಿಸಿದ ಕಟ್ಟಡಕ್ಕೆ ಕಚೇರಿ ಸ್ಥಳಾಂತರವಾಗಿದೆ. ಜನರಿಗೆ ಅಗತ್ಯವಿರುವ ಕೆಲಸಗಳನ್ನು ಹಳೆಯ ನಾಡಕಚೇರಿಯ ಸಿಬ್ಬಂದಿಯೂ ಮಾಡಿಕೊಡುತ್ತಿದ್ದಾರೆ’ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ಹೇಳುತ್ತಾರೆ.
ಜಾತಿ ಆದಾಯ ಪ್ರಮಾಣ ಪತ್ರಕ್ಕಷ್ಟೆ ಸೀಮಿತ!
‘ಜಾತಿ ಆದಾಯ ಪ್ರಮಾಣ ಪತ್ರವೊಂದನ್ನು ಪಡೆಯಲು ಮಾತ್ರ ದಾಂಡೇಲಿ ತಾಲ್ಲೂಕು ಆಗಿದೆ. ನೋಂದಣಿ ಸೇರಿದಂತೆ ಅಗತ್ಯ ಕೆಲಸಗಳಿಗೆ ಮತ್ತೆ ಹಳಿಯಾಳಕ್ಕೆ ಅಲೆಯಬೇಕು. ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಬೇಕೆಂದರೂ ಹಳಿಯಾಳಕ್ಕೆ ಹೋಗಬೇಕು. ಜನರು ಮುಂಚಿನಂತೆ ಪಕ್ಕದ ತಾಲ್ಲೂಕಿಗೆ ಅಲೆಯುವುದಾದರೆ ಹೊಸ ತಾಲ್ಲೂಕು ಘೊಷಣೆ ಮಾಡಿ ಪ್ರಯೋಜನ ಏನಾಗಿದೆ?’ ಎಂದು ಪ್ರಶ್ನಿಸುತ್ತಾರೆ ನಗರದ ವ್ಯಾಪಾರಿ ಸುಧೀರ ಶೆಟ್ಟಿ.
ಕೆಲವಕ್ಕಷ್ಟೆ ಸ್ವಂತ ಕಟ್ಟಡ
ತಾಲ್ಲೂಕಿಗೆ ಅಗತ್ಯವಿರುವ 18 ಇಲಾಖೆ ಕಚೇರಿಯಲ್ಲಿ ನಗರಸಭೆ ತಹಶೀಲ್ದಾರ್ ಕಚೇರಿ ಪಶುವೈದ್ಯಕೀಯ ಹಾಗೂ ಆರ್.ಟಿ.ಒ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ನೂತನ ಕಟ್ಟಡ ಕಾಮಗಾರಿ ಅಂಬೇವಾಡಿಯಲ್ಲಿ ನಡೆಯುತ್ತಿದೆ. ಇನ್ನುಳಿದಂತೆ ಪಂಚಾಯಿತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗ ಕೃಷಿ ಇಲಾಖೆ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೋಟಗಾರಿಕಾ ಇಲಾಖೆ ಕಚೇರಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಲೋಕೋಪಯೋಗಿ ಇಲಾಖೆ ಕಚೇರಿ ಉಪ ನೋಂದಣಾ ಇಲಾಖಾ ಕಚೇರಿಗಳು ಇನ್ನಷ್ಟೆ ಪ್ರಾರಂಭವಾಗಬೇಕಿವೆ.
ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ತಾಲ್ಲೂಕು ಆಡಳಿತ ಭವನದಲ್ಲಿ ಜಾಗ ನೀಡುವಂತೆ ತಹಶೀಲ್ದಾರ್ ಅವರಿಗೂ ಕೇಳಿಕೊಳ್ಳಲಾಗಿದೆ.ಪ್ರಕಾಶ ಹಾಲಮ್ಮನವರ, ತಾಲ್ಲೂಕು ಪಂಚಾಯ್ತಿ ಇಒ
ತಾಲ್ಲೂಕಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತೀವ್ರ ಸಿಬ್ಬಂದಿ ಕೊರತೆ ಇದೆ. ಇದರಿಂದ ಜನಸಾಮಾನ್ಯರಿಗೆ ಸಾಮಾನ್ಯ ಕೆಲಸ ಮಾಡಿಸಿಕೊಳ್ಳುಲು ತಿಂಗಳಗಟ್ಟಲೆ ಕಾಯುತ್ತಿರಬೇಕಾಗಿದೆ.ಸುಧಾಕರ ರೆಡ್ಡಿ, ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಸದಸ್ಯ
ನಾಡ ಕಚೇರಿಯಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಚೀಟಿ ನೀಡಿಲ್ಲ. ಹಲವಾರು ಬಾರಿ ಅಲೆದಾಡಿದಿದ್ದೇವೆ.ಜನ್ನತ್, ಗಾಂಧಿನಗರ ನಿವಾಸಿ
ದಾಂಡೇಲಿ ತಾಲ್ಲೂಕು ಆದ ಬಳಿಕ ಅಭಿವೃದ್ಧಿ ಚಟುವಟಿಕೆ ಗರಿಗೆದರಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಹೊಸ ಕಚೇರಿಗಳಿಗೆ ಕಟ್ಟಡವೂ ಇಲ್ಲ. ಅಭಿವೃದ್ಧಿ ನೆಪದಲ್ಲಿ ಇದ್ದ ರಸ್ತೆಗಳು ಹಾಳಾಗುತ್ತಿವೆ.ಬಿ.ದಶರಥ, ಪಟ್ಟಣದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.