ADVERTISEMENT

ಡೆಂಗಿ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕಟ್ಟುನಿಟ್ಟಿನ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:04 IST
Last Updated 11 ಜುಲೈ 2024, 15:04 IST
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಡೆಂಗಿ ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಯಿತು
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಡೆಂಗಿ ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಯಿತು   

ಕಾರವಾರ: ‘ಜಿಲ್ಲೆಯ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕೆಲಸ ನಡೆಯಬೇಕು. ಕನಿಷ್ಠ ಐದು ಕಡೆಯಲ್ಲಿ ಈ ಕೆಲಸ ಮಾಡಿ ವರದಿ ನೀಡುವುದು ಕಡ್ಡಾಯ. ತಪ್ಪಿದರೆ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಎಚ್ಚರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಡೆಂಗಿ ನಿಯಂತ್ರಣದ ಕುರಿತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಜಿಲ್ಲೆಯಲ್ಲಿ ಡೆಂಗಿ ರೋಗ ಉಲ್ಬಣಗೊಳ್ಳದಂತೆ, ಅದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಪಂಚಾಯಿತಿ ಇಒಗಳು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಪ್ರತಿ ಶುಕ್ರವಾರ ಡೆಂಗಿ ನಿಯಂತ್ರಣಕ್ಕೆ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಯನ್ನು ನಡೆಸಬೇಕು. ಗ್ರಾಮೀಣ ಪ್ರದೇಶ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಚರಂಡಿ, ರಾಜಕಾಲುವೆ, ಜನವಸತಿ ಪ್ರದೇಶಗಳ ಸಮೀಪದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಗೂಡಂಗಡಿಗಳಲ್ಲಿ ಬಳಸಿ ಬಿಸಾಡುವ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದ್ದು, ಈ ಬಗ್ಗೆ ಗಮನ ಹರಿಸುವುದರ ಜತೆಗೆ, ಆರೋಗ್ಯ ಇಲಾಖೆಯಿಂದ ಸೂಚಿಸುವ ಡೆಂಗಿ ನಿಯಂತ್ರಣ ಕುರಿತ ಎಲ್ಲಾ ಕ್ರಮಗಳನ್ನು ಅನುಷ್ಠಾನಗೊಳಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಬೇಕು’ ಎಂದರು.

ADVERTISEMENT

‘ಆರೋಗ್ಯ ಇಲಾಖೆಯ ಮೂಲಕ ಈಗಾಗಲೇ ಶಾಲಾ ಶಿಕ್ಷಕರಿಗೆ ಡೆಂಗಿ ನಿಯಂತ್ರಣ ಕ್ರಮಗಳ ಕುರಿತಂತೆ ತರಬೇತಿಯನ್ನು ನೀಡಲಾಗಿದೆ. ಶಿಕ್ಷಕರು ತಮ್ಮ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತು ಇತರೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಿ ಅವರ ಮೂಲಕ ಮನೆ ಮನೆಗಳಿಗೆ ಜಾಗೃತಿ ಮೂಡುವಂತೆ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ತಿಳಿಸಿದರು.

ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ನಟರಾಜ್ ಕೆ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್ ಇದ್ದರು.

ಕಾರ್ಮಿಕರ ಮೇಲೆ ನಿಗಾ ಇರಿಸಿ

‘ಜಿಲ್ಲೆಗೆ ಉದ್ಯೋಗ ಅರಸಿ ಬರುವ ಹೊರ ರಾಜ್ಯಗಳ ಕಾರ್ಮಿಕರ ಮೂಲಕ ಡೆಂಗಿ ಹರಡುವ ಸಂಭವವಿದ್ದು ವಲಸೆ ಕಾರ್ಮಿಕರು ಆಗಮಿಸಿದಾಗ ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅವರ ಆರೋಗ್ಯ ತಪಾಸಣೆ ಮಾಡಿಸಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇವೆಲ್ಲ ಸೂಚನೆಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಗಮನಹರಿಸಬೇಕು’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.