ADVERTISEMENT

ಶೋಷಿತರ ಗಟ್ಟಿ ಧ್ವನಿಗೆ ಅರಸು ಕಾರಣ: ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 12:36 IST
Last Updated 20 ಆಗಸ್ಟ್ 2023, 12:36 IST
ಕಾರವಾರದಲ್ಲಿ ನಡೆದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿದರು.
ಕಾರವಾರದಲ್ಲಿ ನಡೆದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿದರು.   

ಕಾರವಾರ: ‘ಸಮಾಜದಲ್ಲಿ ಒಂದು ಕಾಲದಲ್ಲಿ ದಮನಿತರಾದವರು, ಹಿಂದುಳಿದ ವರ್ಗದವರು ಇಂದು ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರೆ ಅದಕ್ಕೆ ಡಿ.ದೇವರಾಜ ಅರಸು ಕಾರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿಯ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕಾರಣಿಯೋ, ಅಧಿಕಾರಿಯೋ ಆದರೆ ಅದು ಸಾಧನೆಯಲ್ಲ. ಅಧಿಕಾರ ಸಿಕ್ಕರೆ ಡಿ.ದೇವರಾಜ ಅರಸು ಅವರ ದೂರದೃಷ್ಟಿಯ ವಿಚಾರಗಳನ್ನು ಚಾಚೂ ತಪ್ಪದೆ ಜಾರಿಗೆ ತರಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು‌. ಅಂದಾಗ ಮಾತ್ರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರನ್ನಾಗಿಸಲು ಸಾಧ್ಯ’ ಎಂದರು.

ADVERTISEMENT

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ‘ಧ್ವನಿ ಇಲ್ಲದವರ ಪಾಲಿಗೆ ದೇವರಾಜ ಅರಸು ಧ್ವನಿಯಾಗಿದ್ದರು. ಸಂವಿಧಾನದ ಆಶಯಕ್ಕೆ ತಕ್ಕಂತೆ ಅವರ ಆಡಳಿತವಿತ್ತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಸೈಲ್, ‘ದೇವರಾಜ ಅರಸು ಎಲ್ಲ ಕಾಲಕ್ಕೂ ಮಾದರಿಯಾಗಬಲ್ಲ ಜನನಾಯಕ’ ಎಂದರು. ಸೋಮಲಿಂಗಪ್ಪ ಬಾಳಿಕಾಯಿ ಡಿ.ದೇವರಾಜ ಅರಸು ಜೀವನ, ಚಿಂತನೆ ಕುರಿತು ಉಪನ್ಯಾಸ ನೀಡಿದರು.

ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಉಳಿದು, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ತಹಶೀಲ್ದಾರ್ ನಿಶ್ಚಲ್ ನೊರೋನಾ, ನಗರಸಭೆ ಸದಸ್ಯ ಹನುಮಂತ ತಳವಾರ, ದೀಪಕ್ ಕುಡಾಳಕರ್, ಎಲಿಷಾ ಯಲಕಪಾಟಿ, ಜಿ.ಡಿ. ಮನೋಜೆ, ಬಾಬು ಅಂಬಿಗ ಇದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ಸತೀಶ್ ಸ್ವಾಗತಿಸಿದರು.

ಸಭೆಗೆ ಮುನ್ನ ಕಲಾತಂಡಗಳೊಂದಿಗೆ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.