ADVERTISEMENT

ಮುಂಡಗೋಡ: ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 14:18 IST
Last Updated 27 ಏಪ್ರಿಲ್ 2024, 14:18 IST
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಗ್ರಾಮಸ್ಥರು
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಗ್ರಾಮಸ್ಥರು   

ಮುಂಡಗೋಡ: ತಾಲ್ಲೂಕಿನ ಸನವಳ್ಳಿ ಗ್ರಾಮದಲ್ಲಿ ಶನಿವಾರ ನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಮನೆಗಳಲ್ಲಿ ನುಗ್ಗುತ್ತಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.

ಹೆಣ್ಣು ಜಿಂಕೆಯೊಂದು ಆಹಾರ, ನೀರು ಅರಸಿ ಉರಿನತ್ತ ಮುಖ ಮಾಡಿತ್ತು. ಅಷ್ಟರಲ್ಲಿಯೇ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಲು ಬೆನ್ನತ್ತಿದ್ದವು. ಇದರಿಂದ ಆತಂಕಗೊಂಡ ಜಿಂಕೆ, ಜನರಿದ್ದ ಮನೆಗಳಿಗೆ ನುಗ್ಗಿದೆ. ಕೂಡಲೇ ಗ್ರಾಮಸ್ಥರು, ನಾಯಿಗಳನ್ನು ಓಡಿಸಿ, ಜಿಂಕೆಯ ಪ್ರಾಣ ಉಳಿಸಿದ್ದಾರೆ. ನಂತರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ, ಜಿಂಕೆಯ ಆರೋಗ್ಯವನ್ನು ಪರಿಶೀಲಿಸಿದ ನಂತರ, ಮರಳಿ ಕಾಡಿಗೆ ಬಿಡಲಾಗಿದೆ.

‘ಬೆಳಗಿನ ಸಮಯದಲ್ಲಿ ಹೆಣ್ಣು ಜಿಂಕೆ ಒಂದೆರೆಡು ಮನೆಗಳಲ್ಲಿ ನುಗ್ಗುತ್ತಿತ್ತು. ಮಕ್ಕಳು, ಮಹಿಳೆಯರು ಜಿಂಕೆಯನ್ನು ಕಂಡು ಹೆದರಿದರು. ಬೆನ್ನತ್ತಿದ್ದ ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಲಾಯಿತು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆಗಳು ವಾಸಿಸುತ್ತಿದ್ದು, ಅರಣ್ಯದಲ್ಲಿ ಆಹಾರ, ನೀರಿನ ಲಭ್ಯತೆ ಕಡಿಮೆ ಆಗಿರುವುದರಿಂದ ಪದೇ ಪದೆ ಗ್ರಾಮಕ್ಕೆ ಬರುವುದು ಸಾಮಾನ್ಯವಾಗುತ್ತಿದೆ’ ಎಂದು ಗ್ರಾಮಸ್ಥ ರಾಜು ಗುಬ್ಬಕ್ಕನವರ ಹೇಳಿದರು.

ADVERTISEMENT

ಜಗದೀಶ ಕ್ಯಾಮನಕೇರಿ, ಪರುಶುರಾಮ ಮಟ್ಟಿಮನಿ, ಧರ್ಮಜ್ಜ ಅರಿಶಿಣಗೇರಿ, ನಾಗರಾಜ ಕ್ಯಾಮನಕೇರಿ, ಜಗದೀಶ ಕೆರಿಹೊಲದವರ, ಕೃಷ್ಣ ಲಕ್ಮಾಪುರ ಇನ್ನಿತರರು ಜಿಂಕೆ ರಕ್ಷಿಸುವಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.