ಕಾರವಾರ: ‘ಭವಿಷ್ಯದಲ್ಲಿ ದೇಶದ ಭದ್ರತೆಯ ವಿಚಾರದಲ್ಲಿ ನೌಕಾದಳವು ಪ್ರಮುಖ ಪಾತ್ರ ವಹಿಸಲಿದೆ. ಹಲವು ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳ ಸುಧಾರಣೆಯಲ್ಲೂ ಮುಖ್ಯವಾಗಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಇಲ್ಲಿನ ‘ಸೀಬರ್ಡ್’ ನೌಕಾನೆಲೆಗೆ ಗುರುವಾರ ಭೇಟಿ ನೀಡಿದ ಅವರು, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ನೌಕಾನೆಲೆಯ ಸಿಬ್ಬಂದಿ, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
‘ಪ್ರಸ್ತುತ ವಿಶ್ವದ ಐದು ಅತ್ಯಂತ ಶಕ್ತಿಶಾಲಿ ನೌಕಾದಳಗಳಲ್ಲಿ ನಮ್ಮ ದೇಶದ್ದೂ ಒಂದಾಗಿದೆ. ಮುಂದಿನ 10–12 ವರ್ಷಗಳಲ್ಲಿ ಮೊದಲ ಮೂರು ದೇಶಗಳ ಪಟ್ಟಿಯಲ್ಲಿ ನಾವು ಇರಬೇಕು. ಆ ಸಾಮರ್ಥ್ಯ ನಮಗಿದ್ದು, ಇದು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಹೇಳಿದರು.
‘ರಕ್ಷಣಾ ಇಲಾಖೆಯಲ್ಲೂ ಆತ್ಮ ನಿರ್ಭರ ಭಾರತದ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಶೇ 64ರಷ್ಟು ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಹೊಸದಾಗಿ ಸೇರ್ಪಡೆಯಾಗುವ 48 ನೌಕೆಗಳು ಮತ್ತು ಸಬ್‌ಮರೈನ್‌ಗಳ ಪೈಕಿ 40 ನಮ್ಮದೇ ಶಿಪ್‌ಯಾರ್ಡ್‌ಗಳಲ್ಲಿ ತಯಾರಾಗುತ್ತಿವೆ. ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ವಾಹಕ ನೌಕೆ ‘ವಿಕ್ರಾಂತ್’, ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸೇವೆಗೆ ಲಭಿಸುವ ಸಾಧ್ಯತೆಯಿದೆ’ ಎಂದು ತಿಳಿಸಿದರು.
‘ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಭಾರತೀಯ ನೌಕಾದಳ ಮತ್ತಷ್ಟು ಸದೃಢವಾಗುವುದು ಅವಶ್ಯವಾಗಿದೆ. ರಕ್ಷಣಾ ಇಲಾಖೆಯ ಮೂರೂ ದಳಗಳ ನಡುವೆ ಮತ್ತಷ್ಟು ಸಮನ್ವಯ ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ಸುಧಾರಣೆಗಳನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.