ADVERTISEMENT

ಶಿರಸಿ: ಕಾರ್ಮಿಕರಿಗೆ ಪಿಪಿಇ ಕಿಟ್ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2020, 15:35 IST
Last Updated 14 ಮೇ 2020, 15:35 IST
ಸಿಐಟಿಯು ಸಂಘಟನೆ ಪ್ರಮುಖರು ಶಿರಸಿಯಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಸಿಐಟಿಯು ಸಂಘಟನೆ ಪ್ರಮುಖರು ಶಿರಸಿಯಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ಕೋವಿಡ್ 19 ಕಾಯಿಲೆ ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ಕಾರ್ಮಿಕರ ಸುರಕ್ಷತೆ ಹಾಗೂ ಅವರಿಗೆ ವಿಮೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ತಾಲ್ಲೂಕು ಘಟಕದ ಪ್ರಮುಖರು ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಗುರುವಾರ ಇಲ್ಲಿ ಮನವಿ ಸಲ್ಲಿಸಿದರು.

ಕಂಟೈನ್ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗೆ ಪಿಪಿಇ ಕಿಟ್ ವಿತರಿಸಬೇಕು. ಎಲ್ಲ ಸಿಬ್ಬಂದಿ ಕೋವಿಡ್ 19 ಪರೀಕ್ಷೆಯನ್ನು ಆಗಾಗ ನಡೆಸುತ್ತಿರಬೇಕು. ಕರ್ತವ್ಯದಲ್ಲಿರುವಾಗ ಯಾವುದೇ ಸಿಬ್ಬಂದಿ ಮರಣ ಹೊಂದಿದರೆ ಅವರು ಮತ್ತು ಅವರ ಇಡೀ ಕುಟುಂಬಕ್ಕೆ ಅನ್ವಯವಾಗುವಂತೆ ₹ 50 ಲಕ್ಷ ವಿಮೆ ಜಾರಿಗೊಳಿಸಬೇಕು. ಕರ್ತವ್ಯದಲ್ಲಿರುವ ಎಲ್ಲ ಎನ್.ಎಚ್.ಎಂ. ಗುತ್ತಿಗೆ ಮತ್ತು ಸ್ಕೀಂ ಸಿಬ್ಬಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ₹ 25ಸಾವಿರ ಪ್ರೋತ್ಸಾಹ ಧನ, ಉಚಿತ ಪಡಿತರ ನೀಡಬೇಕು. ಕೋವಿಡ್,19 ಸೋಂಕಿತ ಸಿಬ್ಬಂದಿಗೆ ಕನಿಷ್ಟ ₹ 5 ಲಕ್ಷ ಪರಿಹಾರ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ ₹ 7500 ನೆರವು ಕೊಡಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಲು ಜಿಡಿಪಿಯ ಶೇ 5ನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಮೀಸಲಿಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಖಾಸಗೀಕರಣ ನಿಲ್ಲಿಸಿ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಶಾಸನ ರಚಿಸಬೇಕು. ಮೇ 10ರಂದು ಮೃತಪಟ್ಟಿರುವ ಆಶಾ ಕಾರ್ಯಕರ್ತೆ ಸಾಕಮ್ಮ ಅವರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಸಂಘಟನೆ ಪ್ರಮುಖ ನಾಗಪ್ಪ ನಾಯ್ಕ ಒತ್ತಾಯಿಸಿದರು. ಹಮಾಲಿ ಸಂಘದ ಅಲ್ಲಾಭಕ್ಷ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.