ಶಿರಸಿ: ಬನವಾಸಿಯ ಮಧುಕೇಶ್ವರ ದೇವಸ್ಥಾನ ಕನ್ನಡಿಗರ ಪಾಲಿಗೆ ಕೇವಲ ಸ್ಮಾರಕವಲ್ಲ. ಬದಲಾಗಿ ಸ್ವಾಭಿಮಾನದ ಸಂಕೇತವಾಗಿದೆ. ಹೀಗಾಗಿ ಅದರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತೆ ಶಾಂತಲಾ ಕಾನಳ್ಳಿ ಆಗ್ರಹಿಸಿದರು.
ಬನವಾಸಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧುಕೇಶ್ವರ ದೇವಸ್ಥಾನ ಸಾಮಾನ್ಯವಾದ ದೇವಸ್ಥಾನವಲ್ಲ. ಸಮಸ್ತ ಕನ್ನಡಿಗರ ಕುಲದೇವಸ್ಥಾನವಾಗಿದೆ. ನಾನು ಕನ್ನಡಿಗ ಎಂದು ಹೇಳುವವರಿಗೆ ಮಧುಕೇಶ್ವರ ದೇವರು ಕುಲದೇವರಾಗಿದ್ದಾರೆ. ಇಂಥ ಮಧುಕೇಶ್ವರ ದೇವಸ್ಥಾನ ಕಳೆದ ಹತ್ತು ವರ್ಷಗಳಿಂದ ಸೋರುತ್ತಿದೆ. ಮಳೆಗಾಲದಲ್ಲಿ ಮಧುಕೇಶ್ವರ ದೇವರ ಮೇಲೆಯೇ ನೀರು ಬೀಳುತ್ತದೆ. ಸತತ ಹೋರಾಟದ ನಂತರ ಅಧಿಕಾರಿಗಳು ತಾಡಪತ್ರಿ ಹೊದಿಕೆ ಹಾಕಿದ್ದಾರೆ. ಐತಿಹಾಸಿಕ ದೇವಸ್ಥಾನಕ್ಕೆ ಈ ಹೊದಿಕೆ ಮಾಡಿರುವುದು ಅವಮಾನದ ಸಂಗತಿ. ಇದೇ ದೇವಸ್ಥಾನದಲ್ಲಿ ಸರಸ್ವತಿ ದೇವಿಯ ವಿಗ್ರಹ ಸಹ ಈ ಹಿಂದೆ ಇದ್ದಿತ್ತು. ಅದು ಬಿದ್ದ ಮೇಲೆ ಪುನರ್ ಪ್ರತಿಷ್ಠಾಪನೆ ಸಹ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ವಾರ್ಷಿಕ ಲಕ್ಷಾಂತರರೂಪಾಯಿ ಆದಾಯ ಬರುತ್ತದೆ. ಆದರೆ ಬರುವ ಭಕ್ತರಿಗೆ ಮೂಲ ಸೌಕರ್ಯ ಮಾತ್ರ ಇಲ್ಲದಂತಾಗಿದೆ. ಸರ್ಕಾರ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಗ್ರಾಮದ ಸುಮಂಗಲಾ ಅಜ್ಜರಣಿ, ಗಂಗಾ ಸಹವಾಸಿ, ಜಯಶ್ರೀ ಉಳ್ಳಾಗಡ್ಡಿ, ಉಮಾ ಸಂಗೀತಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.