ಹಳಿಯಾಳ: ದಾಂಡೇಲಿ ಹಾಗೂ ಜೊಯಿಡಾ ತಾಲ್ಲೂಕನ್ನು ತೀವ್ರ ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿ ಆಗ್ರಹಿಸಿದ್ದೇನೆ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಬರಗಾಲ ಘೋಷಣೆ ಮಾಡಲು ಮಲತಾಯಿ ಧೋರಣೆಯನ್ನು ಅನುಸರಿಸಬಾರದು. ಇಂದು ಕೃಷಿಕರು, ಕಾರ್ಮಿಕರು ಮತ್ತಿತರ ವರ್ಗದ ಜನರು ಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಬರಗಾಲ ಕಾಮಗಾರಿ ತೆಗೆದುಕೊಳ್ಳಬೇಕು. ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳು ಹಾಗೂ ಕೃಷಿಕರಿಗೆ ಸಂಬಂಧಿಸಿದ ಬ್ಯಾಂಕುಗಳು ಕ್ರಿಯಾಶೀಲರಾಗಿ ರೈತರ ಸಾಲ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದೇನೆ’ ಎಂದರು.
‘ಹಳಿಯಾಳ ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ತಾವು ಸ್ವಚ್ಛತೆಗೆ ಬಹಳಷ್ಟು ಪ್ರಾಧ್ಯಾನ್ಯತೆ ನೀಡಿ ಸ್ವಚ್ಛತೆಯ ಆಂದೋಲನವನ್ನು ಸಹ ಮಾಡಿರುತ್ತೇನೆ. ಸೆ.25 ರಿಂದ ಅ.2ರ ವರೆಗೆ ಹಾಗೂ ಮುಂದೆಯೂ ಕೂಡ ನಿರಂತರ ಸ್ವಚ್ಛತಾ ಆಂದೋಲನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸೆ.20ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದರು.
ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 83 ಫಲಾನುಭವಿಗಳಿಗೆ ಆಶ್ರಯ ಮನೆಗಳ ಮಂಜೂರಾತಿಯಾಗಿ ಕಾಮಗಾರಿ ಆದೇಶ ಹಾಗೂ ರಾಜೀವಗಾಂಧಿ ವಸತಿ ನಿಗಮದಲ್ಲಿ ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಬ್ಲಾಕ್ ಆದ ಮನೆಗಳನ್ನು ಪುನಃ ಪರಿಶೀಲಿಸಿ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ಮನೆ ಮಂಜೂರಾತಿಯಾಗಿದೆ. ಜೊಯಿಡಾ ತಾಲ್ಲೂಕಿನ ಕ್ಯಾಸಲರಾಕ್ ನ ಕಲಂಬುಲಿ ಗ್ರಾಮದಲ್ಲಿ 20 ಆಶ್ರಯ ಮನೆಗಳು ಮಂಜೂರಾಗಿದೆ ಹಾಗೂ ಹಳಿಯಾಳಕ್ಕೆ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ150 ಮನೆಗಳು ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 100 ಮನೆಗಳಿಗಾಗಿ ಮತ್ತು ದಾಂಡೇಲಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 150 ಮನೆಗಳು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 50 ಮನೆಗಳಿಗಾಗಿ ಮಂಜೂರಾತಿ ವಿನಂತಿಸಿದ್ದೇನೆ. ಜೊಯಿಡಾ ಮಿನಿ ವಿಧಾನಸೌಧ ಕಾಮಗಾರಿಗಾಗಿ ₹1 .50ಕೋಟಿ ಮಂಜೂರಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.