ADVERTISEMENT

ಹಾಲ್ನೊರೆಯಾಗಿ ಧರೆಗಿಳಿವ ‘ದೇವಕಾರ ಜಲಪಾತ’

ನೀರು ಧುಮ್ಮಿಕ್ಕುವ ತಾಣದಿಂದಲೇ ವೀಕ್ಷಣೆ: ಗಮನ ಸೆಳೆಯುವ ಪರ್ವತ ಸಾಲು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 6:58 IST
Last Updated 20 ಅಕ್ಟೋಬರ್ 2024, 6:58 IST
ದೇವಕಾರು ಜಲಪಾತ
ದೇವಕಾರು ಜಲಪಾತ   

ಯಲ್ಲಾಪುರ: ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಗುಂದಿ ವಲಯದ ದಟ್ಟ ಅರಣ್ಯದ ನಡುವೆ ಮೈತಳೆದು ನಿಂತಿರುವ ದೇವಕಾರ (ಕಾನೂರು) ಜಲಪಾತ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ.

ಬಾರೆಕ್ರಾಸ್‌ ಹಳ್ಳ, ತಣ್ಣೀರಗುಂಡಿ ಹಳ್ಳ ಹಾಗೂ ಹರನಗದ್ದೆ ಹಳ್ಳಗಳ ಕೂಡುವಿಕೆಯಿಂದ ನಿರ್ಮಾಣವಾಗಿರುವ ಈ ಜಲಧಾರೆಯನ್ನು ಎದುರಿನಿಂದ ನಿಂತು ಕಣ್ತುಂಬಿಕೊಳ್ಳಲಾಗದು. ಬದಲಾಗಿ ನೀರು ಧುಮ್ಮಿಕ್ಕುವ ಸ್ಥಳದಿಂದ, ಅಂದರೆ ಮೇಲಿನಿಂದಲೇ ನಿಂತು ನೋಡಬೇಕು.

ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಜಲಪಾತ ವೀಕ್ಷಣೆಗೆ ಕಾನೂರು-ವಾಗಳ್ಳಿ ಗ್ರಾಮ ಅರಣ್ಯ ಸಮಿತಿ ಅವಕಾಶ ಕಲ್ಪಿಸಿದೆ.

ADVERTISEMENT

‘ಜಲಪಾತವನ್ನು ಮೇಲಿನಿಂದ ಮಾತ್ರ ವೀಕ್ಷಿಸಬಹುದು. ನೀರು ಕೆಳಗಿನ ಆಳವಾದ ಕಂದಕದಲ್ಲಿ ಧುಮುಕುವುದರಿಂದ ಕಾಲು ಜಾರಿದರೆ ಅಪಾಯವಿದೆ. ಪ್ರವಾಸಿಗರಿಗೆ ಈ ಎಚ್ಚರಿಕೆ ಅಗತ್ಯ. ಪ್ರವಾಸಿಗರ ಹಿತದೃಷ್ಟಿಯಿಂದ ನೀರಿನಲ್ಲಿ ಮುಂದೆ ಸಾಗದಂತೆ ಇಲ್ಲಿ ಹಗ್ಗ ಅಥವಾ ಸರಪಳಿ ಅಳವಡಿಸಬೇಕು’ ಎನ್ನುತ್ತಾರೆ ಸ್ಥಳೀಯರು.

ಜಲಪಾತದ ಮೇಲ್ಭಾಗದಲ್ಲಿ ಕಿರು ಜಲಪಾತವಿದ್ದು ಅದನ್ನು ‘ವಜ್ರಗುಂಡಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನೀರು ವಜ್ರದ ಹವಳದಂತೆ ಶುಭ್ರವಾಗಿ, ಮಣಿ ಉರುಳಿದಂತೆ ಇಳಿಯುತ್ತ ಮಾಲೆ ಮಾಲೆಯಾಗಿ ಧುಮುಕುವುದನ್ನು ಕೆಳಗಿನ ಕಲ್ಲುಹಾಸಿನ ಮೇಲೆ ಕುಳಿತು ನೋಡುವುದೇ ಚೆಂದ.

ಜಲಪಾತದ ಸುತ್ತ ಕಣ್ಣ ಹಾಯಿಸಿದಷ್ಟು ದೂರವೂ ಅರಣ್ಯದ ಸಾಲು ಸಾಲು ಪಂಕ್ತಿ. ಬಳಸೆ ಅರಣ್ಯ, ಈರಾಪುರ ಗ್ರಾಮದಿಂದ ದೇವಕಾರಿಗೆ ಹೋಗುವಾಗ ಸಿಗುವ ಬೆಂಡೆಗಟ್ಟ ಅರಣ್ಯ ಹಾಗೂ ದೇವಕಾರು ಬೆಟ್ಟ ಇಲ್ಲಿ ಒಂದೆಡೆ ಸೇರಿ ತ್ರಿವೇಣಿ ಸಂಗಮದಂತೆ ಭಾಸವಾಗುತ್ತದೆ. ಜಲಪಾತದ ಮೇಲ್ಬಾಗ ಯಲ್ಲಾಪುರ ತಾಲ್ಲೂಕು, ಕೆಳಗಡೆ ಕಾರವಾರ ತಾಲ್ಲೂಕು. ಜಲಪಾತದ ಸುತ್ತ ವಿಶಾಲವಾದ ಕಲ್ಲಿನ ಹಾಸು ಇದ್ದು ಆರಾಮವಾಗಿ ಕುಳಿತು ನೀರು ಧುಮುಕುವ ಚೆಲುವನ್ನು ಸವಿಯಬಹುದು.

ಕೈಗಾ ಬಂಕಾಪುರ ರಾಜ್ಯ ಹೆದ್ದಾರಿಯಲ್ಲಿ ಸಿಗುವ ವಾಗಳ್ಳಿ ಕ್ರಾಸ್‌ನಿಂದ 7 ಕಿ.ಮೀ. ಅಂತರದಲ್ಲಿರುವ ದೇವಕಾರ ಜಲಪಾತಕ್ಕೆ ಬಸ್‌ ಸಂಪರ್ಕ ಇಲ್ಲ. ಬಾಸಲ ಸಮೀಪದ ವಾಗಳ್ಳಿ ಕ್ರಾಸ್‌ನಿಂದ ಕಡಿಹಾಕಿದ ಕಚ್ಚಾ ರಸ್ತೆಯಲ್ಲಿ 6 ಕಿ.ಮೀ ವಾಹನದಲ್ಲಿ ಸಾಗಬಹುದು. ನಂತರ 1 ಕಿ.ಮೀ ದೂರವನ್ನು ಕಡಿದಾದ ದಾರಿಯಲ್ಲಿ ನಡೆದು ಕ್ರಮಿಸಬೇಕು.

ದೇವಕಾರು ಜಲಪಾತದ ಸಮೀಪವಿರುವ ದೇವಕಾರು ವಜ್ರ
ದೇವಕಾರು ಜಲಪಾತದ ಸುತ್ತ ಪರ್ವತದ ಸಾಲು

ಡೊಳ್ಳುಮೇಳದ ದೇವಿ

‘ಜಲಪಾತ ಶಕ್ತಿ ಸ್ಥಳವೂ ಹೌದು. ಈ ಹಿಂದೆ ಸುಗ್ಗಿಯ ಸಮಯದಲ್ಲಿ ಕಳಚೆ ಈರಾಪುರ ಬಾಗಿನಕಟ್ಟಾ ಮುಂತಾದ ಸುತ್ತಮುತ್ತಲ ಗ್ರಾಮದಲ್ಲಿ ಸಂಚರಿಸುತ್ತಿದ್ದ ಡೊಳ್ಳುಮೇಳದ ಆರಾಧ್ಯ ದೇವಿ ಜಲಪಾತದ ಕೆಳಭಾಗದಲ್ಲಿ ವಾಸವಾಗಿದ್ದಾಳೆ. ಡೊಳ್ಳುಮೇಳ ಸುಗ್ಗಿ ಸಂಚಾರ ಆರಂಭಿಸುವ ಮುನ್ನ ಗೌಡ ಸಮುದಾಯದ ಜನ ಇಲ್ಲಿ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಬಂದ ರೂಢಿ. ಡೊಳ್ಳುಮೇಳ ದೇವಿಯ ಆಶೀರ್ವಾದ ಪಡೆದು ಇಲ್ಲಿಂದ ಎದ್ದ ನಂತರ ಮತ್ತೆ ಪುನಃ ಇಲ್ಲಿಗೇ ಬಂದು ದೇವಿಯ ಅನುಮತಿ ಪಡೆದು ಸಂಚಾರ ಕೊನೆಗೊಳಿಸಬೇಕಿತ್ತು’ ಎಂದು ಹಳೆಯ ದಿನಗಳನ್ನು ನೆನಪಿಸುತ್ತಾರೆ ಕಳಚೆಯ ರಾಮಚಂದ್ರ ಹೆಬ್ಬಾರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.