ಶಿರಸಿ: ತಾಲ್ಲೂಕು ಹಾಗೂ ಹೊರ ತಾಲ್ಲೂಕುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಎಲ್ಲರ ಸುರಕ್ಷತೆ ದೃಷ್ಟಿಯಿಂದ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಅನಿರ್ದಿಷ್ಟಾವಧಿ ಲಾಕ್‌ಡೌನ್ ನಿಯಮ ಜಾರಿಗೊಳಿಸಲಾಗಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅನೇಕ ಮಠ, ದೇವಾಲಯಗಳು ಈ ಹಿಂದೆ ತಾವಾಗಿಯೇ ಸ್ವಯಂಪ್ರೇರಿತ ಲಾಕ್‌ಡೌನ್ ನಿಯಮ ಅನುಸರಿಸಿವೆ. ಆದರೂ, ನಮ್ಮ ಮಠದಲ್ಲಿ ಹಲವು ನಿಯಮಗಳನ್ನು ಅನುಸರಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಠದ ಶಿಷ್ಯರಿಂದ ಪಾದಪೂಜೆ, ಭಿಕ್ಷಾ ಸೇವೆಗಳನ್ನು, ಮೊದಲೇ ದೂರವಾಣಿ ಮೂಲಕ ಅನುಮತಿ ಪಡೆದು ಬಂದವರಿಗೆ ದಿನಕ್ಕೆ 10 ಜನರ ಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಸ್ವಯಂಘೋಷಿತವಾಗಿ ಅನಿರ್ದಿಷ್ಟಾವಧಿ ಲಾಕ್‌ಡೌನ್ ನಿಯಮ ಅನುಸರಿಸಲಾಗುತ್ತಿದೆ. ಅನುಷ್ಠಾನದ ಹೊರತಾಗಿ ಚಾತುರ್ಮಾಸ್ಯದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುವುದು’ ಎಂದಿದ್ದಾರೆ.
ಭಕ್ತರು ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ದೇವರನ್ನು ಭಜಿಸಿ ರೋಗದ ವಿರುದ್ಧ ಜಯಿಸಬೇಕು. ಎಲ್ಲರೂ ತಮ್ಮ ಮನೆಗಳಿಗೆ ತಾವೇ ಲಾಕ್‌ಡೌನ್ ಮಾಡಿಕೊಳ್ಳಬೇಕು. ಅನಗತ್ಯ ಪ್ರಯಾಣ, ಮದುವೆ, ಮುಂತಾದ ಸಮಾರಂಭ ಮುಂದೂಡಬೇಕು. ಕೊರೊನಾ ಸೋಂಕು ಹರಡುವಿಕೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗ ಎಚ್ಚರ ತಪ್ಪಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಈ ಹಿಂದೆಯೇ ತಿಳಿಸಿರುವ ಜಪ–ತಪ ಮುಂದುವರಿಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.