ADVERTISEMENT

ಮುಂಡಗೋಡ | ಧರ್ಮಾ ಜಲಾಶಯ: ಪ್ರವಾಸಿಗರಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:34 IST
Last Updated 25 ಜುಲೈ 2024, 14:34 IST
<div class="paragraphs"><p>ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ </p></div>

ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ

   

ಮುಂಡಗೋಡ: ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯವು ಭರ್ತಿಯಾಗಿ ಕೋಡಿ ನೀರು ಹರಿಯುತ್ತಿರುವುದರಿಂದ, ಕೋಡಿ ಬಿದ್ದ ನೀರು ವೀಕ್ಷಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಯುವಕರು ನೀರಿಗೆ ಇಳಿದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಧರ್ಮಾ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ತಾಲ್ಲೂಕು ಆಡಳಿತ ಗುರುವಾರ ಆದೇಶ ಹೊರಡಿಸಿದೆ.

ಕೆಲವು ದಿನಗಳಿಂದ ತಾಲ್ಲೂಕು ಸೇರಿದಂತೆ ಶಿರಸಿ ಭಾಗದಲ್ಲಿ ರಭಸದ ಮಳೆ ಆಗುತ್ತಿರುವುದರಿಂದ, ಧರ್ಮಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿಯೂ ಏರಿಕೆಯಾಗಿದೆ. ಕೋಡಿ ಬೀಳುವ ನೀರಿನ ಮಟ್ಟದಲ್ಲಿಯೂ ಹೆಚ್ಚಳವಾಗಿದ್ದು, ದಡ ಭಾಗದಲ್ಲಿ ನಿಂತು ನೋಡುವ ಯುವಸಮೂಹವನ್ನು ಕೈಬೀಸಿ ಕರೆಯುವಂತಿದೆ. ಕೆಲವರು ನೀರಿನ ಆಳ ತಿಳಿಯದೇ, ಕೋಡಿ ಬೀಳುವ ಜಾಗದಲ್ಲಿಯೇ ನಡೆದಾಡುವುದು, ರೀಲ್ಸ್‌ ಮಾಡುವುದು ಹಾಗೂ ಮೀನು ಹಿಡಿಯುತ್ತ ಕುಣಿದಾಡುವುದನ್ನು ಕಾಣಬಹುದು. ಕೆಲವೊಮ್ಮೆ ನೀರಿನ ರಭಸ ಹೆಚ್ಚಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಆದರೂ, ನೀರಿಗೆ ಇಳಿಯುವ ಯುವಕರ ಸಂಖ್ಯೆ ಕಡಿಮೆ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

‘ಧರ್ಮಾ ಜಲಾಶಯದ ವೀಕ್ಷಣೆಗೆ ಬರುವ ಪ್ರವಾಸಿಗರು ಅಪಾಯ ಅರಿಯದೇ ನೀರಿಗಿಳಿದು ತೊಂದರೆ ಅನುಭವಿಸಿದಂಥ ಘಟನೆಗಳು ಜರುಗಿವೆ. ಅಪಾಯದ ಸಂಭವ ಇರುವುದರಿಂದ ಜಲಾಶಯ ನೋಡಲು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಲಾಗಿದೆ. ಮಳೆಯ ಅಬ್ಬರ ಜೋರಾಗಿರುವುದರಿಂದ ಜಲಾಶಯದ ನೀರಿಗೆ ಇಳಿಯುವ ದುಸ್ಸಾಹಸಕ್ಕೆ ಮುಂದಾಗಬಾರದು’ ಎಂದು ತಹಶೀಲ್ದಾರ್‌ ಶಂಕರ ಗೌಡಿ ಎಚ್ಚರಿಕೆ ನಿಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.