ADVERTISEMENT

ಕುಮಟಾ: ವಿದ್ಯಾರ್ಥಿಗಳಿಂದ ಧಾರಾನಾಥ ದೇವಾಲಯ ಇತಿಹಾಸ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 23 ಮೇ 2024, 13:52 IST
Last Updated 23 ಮೇ 2024, 13:52 IST
ಕುಮಟಾದ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಈಚೆಗೆ ತಾಲ್ಲೂಕಿನ ಧಾರೇಶ್ವರದ ಧಾರಾನಾಥ ದೇವಾಲಯದ ಶಿಲಾ ಶಾಸನಗಳ ಅಧ್ಯಯನ ನಡೆಸಿದರು
ಕುಮಟಾದ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಈಚೆಗೆ ತಾಲ್ಲೂಕಿನ ಧಾರೇಶ್ವರದ ಧಾರಾನಾಥ ದೇವಾಲಯದ ಶಿಲಾ ಶಾಸನಗಳ ಅಧ್ಯಯನ ನಡೆಸಿದರು   

ಕುಮಟಾ: ‘ಇತಿಹಾಸದ ವಿದ್ಯಾರ್ಥಿಗಳು ತಮ್ಮ ಊರಿನ ಮಹತ್ವದ ಶಿಲಾ ಶಾಸನಗಳ ಬಗ್ಗೆ ಅರಿತು ಅವುಗಳ ವಿವರಗಳನ್ನು ದಾಖಲಿಸಿದರೆ ಅದು ನೂರಾರು ಜನರನ್ನು ತಲುಪಿ ಆ ಪ್ರದೇಶ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ’ ಎಂದು ಶಾಸನ ತಜ್ಞ ಶಾಮಸುಂದರ ಗೌಡ ಹೇಳಿದರು.

ಕಾಲೇಜಿನ ಇತಿಹಾಸ ವಿಭಾಗ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಆಂತರಿಕ ಗುಣಮಟ್ಟದ ಭರವಸಾ ಕೋಶ ಇವುಗಳ ಸಹಯೋಗದಲ್ಲಿ ಈಚೆಗೆ ತಾಲ್ಲೂಕಿನ ಧಾರೇಶ್ವರದ ಧಾರಾನಾಥ ದೇವಾಲಯದ ಶಾಸನಗಳ ಬಗ್ಗೆ ಅಧ್ಯಯನ ನಡೆಸುವ ಸಂದರ್ಭದಲ್ಲಿ ಮಾಹಿತಿ ನೀಡಿದರು.

‘ಧಾರಾನಾಥ ದೇವಾಲಯದ ವೀರಗಲ್ಲುಗಳು ಗಮನ ಸೆಳೆಯುತ್ತಿದ್ದು, ಅವುಗಳ ಮೇಲೆ ಯುದ್ಧದಲ್ಲಿ ಮಡಿದ ಯೋಧರ ಮೃತ ದೇಹಗಳನ್ನು ಕೊಂಡೊಯ್ಯುವ ಭಾವನಾತ್ಮಕ ಚಿತ್ರಣವಿದೆ. ಕ್ರಿ.ಶ 1083ರಲ್ಲಿ ಸಮೀಪದ ಭಟ್ಕಳದ ಹಾಡುವಳ್ಳಿಯ ಸಾಳ್ವ ದೊರೆ ಕೃಷ್ಣ ದೇವರಾಯನು ಧಾರಾನಾಥ ದೇವಾಲಯಕ್ಕೆ ಭೂ ದಾನ ನೀಡಿದ ಮಾಹಿತಿ ಸಿಗುತ್ತವೆ’ ಎಂದರು.

ADVERTISEMENT

ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಪ್ರಮೋದ ಹೆಗಡೆ, ‘ಧಾರಾನಾಥ ದೇವಾಲಯ ಸುತ್ತಲಿನ ಉಳಿದ ದೇವಾಲಯಗಳಿಗೆ ಹೋಲಿಸಿದರೆ ಅತ್ಯಂತ ಪುರಾತನದ್ದಾಗಿದೆ. ದೇವಾಲಯದ ಎದುರು ಇರುವ ಪುಷ್ಕರಣಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಹೊಳಪಿನಿಂದ ಕೂಡಿರುವ ದೇವಾಲಯ ಕಂಬಗಳ ನಿರ್ಮಾಣಕ್ಕೆ ಹಸಿರು, ಬೂದು ಬಣ್ಣದ ಕಲ್ಲುಗಳನ್ನು ಬಳಸಿರುವುದು ವಿಶೇಷ’ ಎಂದರು.

ಕ್ಷೇತ್ರ ಕಾರ್ಯದ ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ವಿಜಯಾ ನಾಯ್ಕ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಗೀತಾ ನಾಯಕ, ಇಂಗ್ಲಿಷ್ ಉಪನ್ಯಾಸಕಿ ಪ್ರತಿಭಾ ಭಟ್ಟ, ಕನ್ನಡ ವಿಭಾಗದ ಉಪನ್ಯಾಸಕಿ ಪಲ್ಲವಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೇಶ ಪಟಗಾರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.