ADVERTISEMENT

Diwali 2024 | ನಿಶ್ಶಬ್ದದಲ್ಲಿ ಹುಲಿದೇವರ ಪೂಜೆ

​ಶಾಂತೇಶ ಬೆನಕನಕೊಪ್ಪ
Published 31 ಅಕ್ಟೋಬರ್ 2024, 6:22 IST
Last Updated 31 ಅಕ್ಟೋಬರ್ 2024, 6:22 IST
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ಹುಲಿದೇವರಿಗೆ ದೀಪಾವಳಿ ಅಮವಾಸ್ಯೆಯಂದು ಪೂಜೆ ಸಲ್ಲಿಸಿರುವುದು (ಸಂಗ್ರಹ ಚಿತ್ರ)
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ಹುಲಿದೇವರಿಗೆ ದೀಪಾವಳಿ ಅಮವಾಸ್ಯೆಯಂದು ಪೂಜೆ ಸಲ್ಲಿಸಿರುವುದು (ಸಂಗ್ರಹ ಚಿತ್ರ)   

ಮುಂಡಗೋಡ: ಅರೆಮಲೆನಾಡಿನ ತಾಲ್ಲೂಕಿನಲ್ಲಿ ದೀಪಾವಳಿ ವಿಶೇಷವಾಗಿ ಆಚರಿಸುತ್ತಾರೆ. ಬಯಲು ಸೀಮೆ ಗಾಳಿ ಬೀಸುವ ಊರುಗಳಲ್ಲಿ ಅನ್ನದಾತ ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುತ್ತಾನೆ.

ಮಲೆನಾಡಿನ ತುಸು ಸೆರಗು ಹೊದ್ದುಕೊಂಡಂತೆ ಭಾಸವಾಗುವ ಪಾಳಾ ಹೋಬಳಿ ವ್ಯಾಪ್ತಿಯ ಬೆಡಸಗಾಂವ್‌, ಕೂರ್ಲಿ, ತೊಗರಳ್ಳಿ ಈ ಭಾಗದಲ್ಲಿ ಹುಲಿ ದೇವರ ಪೂಜೆ ಮಾಡುತ್ತಾರೆ. ಕಾನನದ ಮಧ್ಯೆ ಬದುಕು ಕಟ್ಟಿಕೊಂಡಿರುವ, ದನಗರ ಗೌಳಿಗರು ‘ಶಿಲ್ಲೆಂಗಾನ್‌ʼ ಮೂಲಕ ಬೆಳಕಿನ ಹಬ್ಬ ಸಂಭ್ರಮಿಸುತ್ತಾರೆ. ಇನ್ನೂ ಲಂಬಾಣಿ ಸಮುದಾಯದವರು ದೀಪಾವಳಿ ವಿಶಿಷ್ಟವಾಗಿ ಆಚರಿಸುತ್ತಾರೆ.

ತಾಲ್ಲೂಕಿನ ಗಡಿಭಾಗವಾದ ಬೆಡಸಗಾಂವ್‌ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆಯಂದು ‘ಹುಲಿದೇವರ’ ಪೂಜೆ ನಡೆಯುತ್ತದೆ. ಕಾಡಿನಲ್ಲಿರುವ ಹುಲಿಯಪ್ಪ ದೇವರಿಗೆ ಮಧ್ಯರಾತ್ರಿಯಲ್ಲಿ, ನಿಶ್ಯಬ್ಧದಲ್ಲಿ ಕಾಯಿ ಹರಕೆ ಸಮರ್ಪಿಸಿ, ಪೂಜೆ ಸಲ್ಲಿಸುವುದು ವಾಡಿಕೆ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಅದೂ ದೀಪಾವಳಿ ಅಮವಾಸ್ಯೆಯಂದು ಮಾತ್ರ. ಗ್ರಾಮದಲ್ಲಿರುವ ಜಾನುವಾರುಗಳ ಪ್ರಾಣ ಉಳಿಯಲಿ. ಹುಲಿಯಿಂದ ಯಾವುದೇ ತೊಂದರೆ ಆಗದಿರಲಿ ಎಂದು ಗ್ರಾಮಸ್ಥರು ಪ್ರಾರ್ಥಿಸುತ್ತಾರೆ.

ADVERTISEMENT

‘ಗೋವಿನ ಬಾಲಕ್ಕೆ ತಲಾ ಒಂದು ತೆಂಗಿನಕಾಯಿ ಎಂದು ಲೆಕ್ಕ ಹಾಕಿ ಕಾಯಿ ಒಡೆಯುತ್ತಾರೆ. ಕೇವಲ ಪುರುಷರು ಮಾತ್ರ ಈ ದೇವರ ಹತ್ತಿರ ತೆರಳಿ ಪೂಜೆ ಸಲ್ಲಿಸುವುದು ನಿಯಮ. ನೂರು ವರ್ಷಗಳ ಹಿಂದಿನಿಂದಲೂ ಇಂತಹ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿರುವ ಬಗ್ಗೆ ಹಿರಿಯರು ಹೇಳುತ್ತಾರೆ. ಹುಲಿದೇವರನ್ನು ಸಂತುಷ್ಟಗೊಳಿಸುವುದು ಪೂಜೆಯ ಮುಖ್ಯ ಉದ್ದೇಶ’ ಎಂದು ಗ್ರಾಮಸ್ಥ ದೇವೇಂದ್ರ ನಾಯ್ಕ ಹೇಳಿದರು.

ಜಾನುವಾರು ಸಿಂಗಾರ

ತಾಲ್ಲೂಕಿನ ಕೆಲವೆಡೆ ದೀಪಾವಳಿ ಪಾಡ್ಯದಂದು ಜಾನುವಾರುಗಳನ್ನು ಸಿಂಗರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಮುಂಡಗೋಡ, ಪಾಳಾ, ಕೋಡಂಬಿ ಸೇರಿದಂತೆ ಕೆಲವೆಡೆ ಹೋರಿ ಬೆದರಿಸುವ ಕಾರ್ಯಕ್ರಮಗಳು ಸಹ ನಡೆಯುತ್ತವೆ. ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಅನ್ನದಾತ, ಹೋರಿಗಳು ಸ್ಪರ್ಧೆಯಲ್ಲಿ ಗೆದ್ದರೆ ಅನ್ನದಾತ ಕುಣಿದು ಕುಪ್ಪಳಿಸುತ್ತಾನೆ. ಈ ಮೂಲಕ ಹಬ್ಬದ ಉಡುಗೊರೆ ನೀಡಿದ ತನ್ನ ಹೋರಿಯೊಂದಿಗೆ ಸಂಭ್ರಮಿಸುತ್ತಾನೆ, ವರ್ಷಪೂರ್ತಿ ದುಡಿಮೆಯಲ್ಲಿ ತನ್ಮೊಡನೆ ಹೆಜ್ಜೆ ಹಾಕುವ ಜಾನುವಾರುಗಳ ಸಿಂಗಾರ ರೈತನ ಸಂತಸವನ್ನು ಇಮ್ಮಡಿಗೊಳಿಸುತ್ತದೆ. ರೈತರ ಹಬ್ಬವೆಂದೇ ಗುರುತಿಸಲ್ಪಡುವ ಹೋರಿ ಬೆದರಿಸುವ ಸ್ಪರ್ಧೆ ದೀಪಾವಳಿಯ ಮುಖ್ಯ ಆಕರ್ಷಣೆಯಾಗಿರುತ್ತದೆ.

ದೀಪಾವಳಿ ಪಾಡ್ಯದಂದು ಜಾನುವಾರುಗಳನ್ನು ಸಿಂಗರಿಸಿ ಸ್ಪರ್ಧೆಯಲ್ಲಿ ಓಡಿಸುವ ಅನ್ನದಾತ (ಸಂಗ್ರಹ ಚಿತ್ರ)

ಮಂತ್ರವಿಲ್ಲ ಗಂಟೆ ಮೊಳಗುವುದಿಲ್ಲ

ದೀಪಾವಳಿ ಅಮವಾಸ್ಯೆಯ ಮಧ್ಯರಾತ್ರಿಯಂದು ಹುಲಿದೇವರಿಗೆ ಪೂಜೆ ಸಲ್ಲಿಸುವಾಗ ಅರ್ಚಕರು ಮಂತ್ರ ಹೇಳುವುದಿಲ್ಲ. ಗಂಟೆನಾದ ಮೊಳಗುವುದಿಲ್ಲ. ಮೌನವೇ ಪ್ರಧಾನ ಆಗಿದ್ದು ನಿಶ್ಯಬ್ಧ ವಾತಾವರಣದಲ್ಲಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ. ಆಕಳ ತುಪ್ಪದಿಂದ ನೈವೇದ್ಯ ಮಾಡಿ ಕೊರಳಿಗೆ ಅಡಿಕೆ ಸರ ಹಾಕಲಾಗುತ್ತದೆ. ಬಿಲ್ವಪತ್ರೆಯಿಂದ ಪೂಜಿಸಲಾಗುತ್ತಿದೆ. ಹರಕೆ ಈಡೇರಿಸಲು ತೆಂಗಿನಕಾಯಿಗಳನ್ನು ಬಿದಿರಿನ ಬುಟ್ಟಿಯಲ್ಲಿ ಭಕ್ತರು ತರುತ್ತಾರೆ. ಹುಲಿ ದೇವರು ಸಂತುಷ್ಟವಾಗದಿದ್ದರೆ ಕೊಟ್ಟಿಗೆಗೆ ಬಂದು ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತದೆ ಎಂಬ ನಂಬಿಕೆಯಿಂದ ಹಿಂದಿನಿಂದಲೂ ಪೂಜಿಸಿಕೊಂಡು ಬರಲಾಗುತ್ತಿದೆ ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.