ADVERTISEMENT

ಕುಮಟಾ: ದೀಪಾವಳಿ ವಿಶೇಷ ‘ಬಲೀಂದ್ರ ಬುತ್ತಿ’

ಎಂ.ಜಿ.ನಾಯ್ಕ
Published 31 ಅಕ್ಟೋಬರ್ 2024, 6:20 IST
Last Updated 31 ಅಕ್ಟೋಬರ್ 2024, 6:20 IST
26ಕೆಎಂಟಿದೀಪಾವಳಿ: ದೀಪಾವಳಿಯಲ್ಲಿ ಬಲೀಂದ್ರನ ಬೀಳ್ಕೊಡುವ ಕ್ಷಣ (ಸಂಗ್ರಹ ಚಿತ್ರ)
26ಕೆಎಂಟಿದೀಪಾವಳಿ: ದೀಪಾವಳಿಯಲ್ಲಿ ಬಲೀಂದ್ರನ ಬೀಳ್ಕೊಡುವ ಕ್ಷಣ (ಸಂಗ್ರಹ ಚಿತ್ರ)   

ಕುಮಟಾ: ಪುರಾಣ ಕಥೆಯಲ್ಲಿ ತ್ಯಾಗ, ಬಲಿದಾನಕ್ಕೆ ಹೆಸರಾದ ಬಲಿ ಚಕ್ರವರ್ತಿ ದೀಪಾವಳಿ ಹಬ್ಬಕ್ಕೆಂದು ಪ್ರತೀ ವರ್ಷ ಜನ ಸಾಮಾನ್ಯರ ಮನೆಗೆ ಅತಿಥಿಯಂತೆ ಬರುತ್ತಾನೆ. ಮೂರು ದಿವಸಗಳ ಹಬ್ಬದ ನಂತರ ಆತ ಜನ ಸಾಮಾನ್ಯನಂತೆಯೇ ವಾಪಸು ಹೊರಟು ಹೋಗುವಾಗಿನ ಭಾವನಾತ್ಮ ಸನ್ನಿವೇಶ ಎಷ್ಟೋ ಮನೆಗಳಲ್ಲಿ ಇಂದಿಗೂ ಕಣ್ಣನ್ನು ಹನಿಗೂಡಿಸುತ್ತದೆ.

ಚಕ್ರವರ್ತಿಯಾದರೂ ಬಲಿ, ಜನ ಸಾಮಾನ್ಯರ ಮನೆಗಳಲ್ಲಿ ದೀಪಾವಳಿ ಮುಗಿಸಿ ವಾಪಸು ಹೊರಟು ಹೋಗುವಾಗ ಕೊಂಡೊಯ್ಯುವ ‘ಬಲೀಂದ್ರ ಬುತ್ತಿ’ ದೀಪಾವಳಿ ಆಚರಣೆಯಲ್ಲಿ ವಿಶೇಷವಾಗಿದೆ.

ದೀಪಾವಳಿಯ ಮೊದಲ ದಿನ ರಾತ್ರಿ ಮಣ್ಣಿನ ಜೋಡಿ ಹೊಸ ಪಾತ್ರೆಗಳಲ್ಲಿ ಬಾವಿಯಿಂದ ನೀರು ತಂದು ದೇವರ ಎದುರು ಇಟ್ಟು ಪೂಜೆ ಮಾಡುವ ಮೂಲಕ ಕರಾವಳಿ ಭಾಗದ ಜನರು ಬಲಿ ಚಕ್ರವರ್ತಿಯನ್ನು ಸ್ವಾಗತಿಸುತ್ತಾರೆ. ಆತ ಚಕ್ರವರ್ತಿಯಾದರೂ ಜನ ಸಾಮಾನ್ಯರು ಪ್ರೀತಿಯಿಂದ ‘ಬಲೀಂದ್ರ’ ಎಂದೇ ಕರೆಯುತ್ತಾರೆ. ನರಕ ಚತುರ್ದಶಿ, ಬಲಿಪಾಡ್ಯದ ಮರುದಿನ ಬಲೀಂದ್ರ ತನ್ನ ಊರಿಗೆ ತೆರಳುತ್ತಾನೆ.

ADVERTISEMENT

ಬಲೀಂದ್ರನ ಪೂಜೆಯ ನೆಪದಲ್ಲಿ ಆ ವರ್ಷ ಮದುವೆಯಾದ ಮಗಳು, ಅಳಿಯ ದೀಪಾವಳಿಗೆ ಬರುವುದೇ ಮನೆಯವರಿಗೆ ಸಂಭ್ರಮವಾಗುತ್ತದೆ. ಹಬ್ಬದ ಎರಡು ದಿನ ಬಲೀಂದ್ರನ ಎದರು ಅಕ್ಕಿ ಹಿಟ್ಟಿಗೆ ಚುಚ್ಚಿದ ಬತ್ತಿಯ ಆರತಿ ತಟ್ಟೆಗೆ ಮನೆಯವರೆಲ್ಲ ಕಾಣಿಕೆ ರೂಪದಲ್ಲಿ ಹಣ ಹಾಕಿ ನಮಸ್ಕರಿಸು ಸ್ಪರ್ಧೆಯೇ ಏರ್ಪಡುತ್ತದೆ. ಎರಡು ದಿನ ಸಂಗ್ರಹವಾದ ಆರತಿ ತಟ್ಟೆ ಕಾಣಿಕೆಯನ್ನು ಮನೆಯ ಮಹಿಳೆಯರೇ ಹಂಚಿಕೊಳ್ಳಬೇಕು ಎನ್ನುವ ನಿಯಮ ಇದೆ. ಚಕ್ರವರ್ತಿಯಾಗಿ ಆಗಮಿಸಿ ಮನೆಗಳಲ್ಲಿ ಸಂಭ್ರಮ ತರುವ ಬಲೀಂದ್ರ ದೀಪಾವಳಿ ಮರು ದಿನ ಹೊರಡುವಾಗ ಎಲ್ಲರ ಮುಖದಲ್ಲಿ ಸಹಜವಾಗಿ ಬೇಸರ ಮೂಡುತ್ತದೆ. ಆದರೂ ಬಲೀಂದ್ರನ ಪ್ರಯಾಣಕ್ಕೆ ಮನೆಯಲ್ಲಿ ವಿಶೇಷ ಬುತ್ತಿ ತಯಾರಿಸುತ್ತಾರೆ.

‘ಹಬ್ಬದ ಮುನ್ನಾ ದಿನ ರಾತ್ರಿಯೇ ಬಲೀಂದ್ರನ ಬುತ್ತಿಗಾಗಿ ಮೊಸರು ಹೆಪ್ಪು ಹಾಕಿಡಲಾಗುತ್ತದೆ. ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆಯ ಮೇಲೆ ಬಾಳೆ ಎಲೆ ಇಟ್ಟು ಬಿಸಿ ಅನ್ನ, ಅದರ ಮೇಲೆ ಮೊಸರು, ಪಕ್ಕದಲ್ಲಿ ಉಪ್ಪಿನಕಾಯಿ, ಅದರ ಪಕ್ಕದಲ್ಲಿ ಇದ್ದಿಲು ಚೂರು, ಎಂಟಾಣೆ ನಾಣ್ಯ ಇಟ್ಟು ಬುತ್ತಿಯನ್ನು ಕಟ್ಟುತ್ತಾರೆ. ಬಲಿ ಚಕ್ರವರ್ತಿ ಬುತ್ತಿಯನ್ನು ಹೆಗಲಿಗೇರಿಸಿಕೊಂಡು ಬೆಳಗಿನ ಜಾವ ಪ್ರಯಾಣ ಆರಂಭಿಸುತ್ತಾನೆ. ಬೆಳಕು ಹರಿದಾಗ ಎದುರಾಗುವ ನದಿ ದಾಟಿಸಿದ ಅಂಬಿಗನಿಗೆ ಬುತ್ತಿಯಲ್ಲಿದ್ದ ಎಂಟಾಣೆ ಕೊಡುತ್ತಾನೆ. ನದಿ ದಡದಲ್ಲಿ ಬುತ್ತಿಯೊಳಗಿಟ್ಟ ಇದ್ದಿಲು ಚೂರಿನಿಂದ ಹಲ್ಲುಜ್ಜಿ ನಿತ್ಯ ಕರ್ಮ ಮುಗಿಸಿ ಆಹಾರ ಸೇವಿಸುತ್ತಾನೆ. ಮೂರು ದಿವಸದ ದೀಪಾವಳಿ ಹಬ್ಬದಲ್ಲಿ ತನ್ನನ್ನು ಪ್ರೀತಿಯಿಂದ ಸತ್ಕರಿಸಿದ್ದಕ್ಕಾಗಿ ಕೃತಜ್ಞತೆಯಿಂದ ಒಮ್ಮೆ ಹಿಂತಿರುಗಿ ನೋಡುತ್ತಾನೆ. ಬಲೀಂದ್ರ ಹಿಂತಿರುಗಿ ನೋಡಿದ ಸಂದರ್ಭವನ್ನೂ ಕಿರು ದೀಪಾವಳಿ ಅಥವಾ ಬಲೀಂದ್ರ ಹಿಂತಿರುಗಿ ನೋಡಿದ ಹಬ್ಬ ಎಂದು ಜನರು ಆಚರಿಸುತ್ತಾರೆ’ ಎಂದು ಬಾಡ ಗ್ರಾಮದ ಗಂಗಾ ನಾಯ್ಕ ಕೌತುಕದ ಕತೆ ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.