ಗೋಕರ್ಣ: ಸನಾತನ ಧಾರ್ಮಿಕ ಪರಂಪರೆಯ ಪದ್ಧತಿ, ಆಚರಣೆ, ಕ್ಷೇತ್ರ ಗೋಕರ್ಣದಲ್ಲಿ ಇಂದಿಗೂ ಮುಂದುವರಿಯುತ್ತ ಬಂದಿದೆ. ಅದರಲ್ಲೂ ದೀಪಾವಳಿಯ ಪರ್ವ ಕಾಲದಲ್ಲಿ, ಗೋಧೂಳಿ ಮುಹೂರ್ತದಲ್ಲಿ ಕಡಲ ತೀರದಲ್ಲಿ ನಡೆಯುವ ಶಿವ ಗಂಗಾ ವಿವಾಹ ಮಹೋತ್ಸವ ವಿಶಿಷ್ಟ ಆಚರಣೆಯಾಗಿದೆ.
ದೀಪಾವಳಿ ಹಬ್ಬ ಆಶ್ವೀಜ ಕೃಷ್ಣ ತ್ರಯೋದಶಿಯಿಂದ ಮೊದಲಾಗಿ ಕಾರ್ತೀಕ ಶುದ್ಧ ಬಿದಿಗೆಯವರೆಗೆ ಐದು ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ. ಈ ಉತ್ಸವಕ್ಕೆ ಅಪಮೃತ್ಯು ಭಯ ಮತ್ತು ನರಕ ಭೀತಿ ನಿವಾರಕ ಶಕ್ತಿಯನ್ನೂ ಧಾರೆ ಎರೆಯಲಾಗಿದೆ ಎಂದು ಹಲವು ಪುರಾಣಗಳಲ್ಲಿ ಉಲ್ಲೇಖವಿದೆ.
ದೀಪಾವಳಿಯ ಪವಿತ್ರ ಪರ್ವಕಾಲದಲ್ಲಿ ಧಾರ್ಮಿಕ ಆಚರಣೆಗಳ ಮುಖೇನ ಯಮಧರ್ಮ, ಮನ್ಮಹಾವಿಷ್ಣು, ಕೃಷ್ಣ ಮತ್ತು ಲಕ್ಷ್ಮಿಯನ್ನು ಸ್ಮರಿಸಿ, ಆರಾಧಿಸಿ ಪೂಜಿಸುವುದರಿಂದ ಈ ಉತ್ಸವಕ್ಕೆ ವಿಶೇಷ ಪ್ರಾಧಾನ್ಯವಿದೆ. ಇವುಗಳ ಜತೆಗೆ ಅಭ್ಯಂಗಸ್ನಾನ, ದೀಪೋತ್ಸವ, ಮೃಷ್ಠಾನ್ನ ಭೋಜನಾದಿಗಳು ನಡೆಯುವುದರಿಂದ ದೀಪಾವಳಿ ಹಬ್ಬಕ್ಕೆ ದೊಡ್ಡಹಬ್ಬ ಎಂಬ ವಿಶೇಷ ಹೆಸರಿನಿಂದಲೂ ಕರೆಯಲಾಗುತ್ತದೆ.
ಆಶ್ವೀಜ ಬಹುಳ ಚತುರ್ದಶಿ ದಿನ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಶಿವ ಗಂಗಾ ವಿವಾಹ ಮಹೋತ್ಸವವು ಕಡಲ ತೀರದಲ್ಲಿ ವೈಭವದಿಂದ ಜರುಗುತ್ತದೆ.
ವಿಶಾಲವಾದ ಕಡಲ ತೀರದಲ್ಲಿ ಸೂರ್ಯಾಸ್ತದ ಸಮಯದ ಗೋಧೂಳಿ ಮುಹೂರ್ತದಲ್ಲಿ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರನಾಥ ಪರಮೇಶ್ವರ ಮತ್ತು ಬೆಸ್ತರ ಕನ್ಯೆ ಗಂಗೆಯೊಂದಿಗೆ ವಿವಾಹೋತ್ಸವ ನಡೆಯಲಿದೆ. ಇದಕ್ಕೂ ಮೊದಲು ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯದಲ್ಲಿ ಗಂಗಾಷ್ಟಮಿಯ ಪರ್ವಕಾಲದಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ಇವರಿಬ್ಬರ ವಿವಾಹ ನಿಶ್ಚಿತಾರ್ಥ ನಡೆಯುತ್ತದೆ. ಗಂಗಾಷ್ಟಮಿ ದಿನದಂದು ನಿಶ್ಚಿತವಾದ ವಧುವಾಗಿ ಬಂದ ಗಂಗಾಮಾತೆ ನರಕ ಚತುರ್ದಶಿ ದಿನದಂದು ಜಗದೀಶ್ವರನನ್ನು ವರಿಸುತ್ತಾಳೆ.
ಗಂಗಾವಳಿ ಮತ್ತು ಗೋಕರ್ಣದ ಮಧ್ಯೆ ಕಪಿಲಾ ನದಿ ಸಮುದ್ರ ಸೇರುವ ಸ್ಥಳದಲ್ಲಿ ಮಾವಿನ ತೋರಣದಿಂದ ಮದುವೆಯ ಮಂಟಪ ನಿರ್ಮಿಸಲಾಗುತ್ತದೆ. ದಾರಿಯುದ್ದಕ್ಕೂ ಭಕ್ತರು ಹಾಕಿದ ಆಕರ್ಷಕ ತೋರಣ, ನೀಲಿ ಮತ್ತು ಬಿಳಿ ಬಣ್ಣದ ಶುಭ್ರ ಆಕಾಶ ಮದುವೆ ಮಂಟಪದ ಚಪ್ಪರದಂತೆ ಭಾಸವಾಗುತ್ತದೆ. ಕಡಲಿನ ಅಬ್ಬರ, ವಾದ್ಯಘೋಷ, ವೇದಘೋಷ, ವಿಶಿಷ್ಟ ತೋರಣ, ಹಾಲಕ್ಕಿ ಸಮಾಜದವರು ಹಾಡುವ ಗುಮಟೆಪಾಂಗ್ ಜನಪದ ಹಾಡುಗಳು ಉತ್ಸವಕ್ಕೆ ವಿಶೇಷ ಮೆರುಗನ್ನು ತಂದು ಕೊಡಲಿದೆ. ಭಕ್ತ ಜನರು ತೋರಣಕ್ಕೆ ಕಟ್ಟಿದ ಮಾವಿನ ಎಲೆಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.
ದೀಪಾವಳಿ ಪ್ರಾರಂಭದ ಮೊದಲ ದಿನ ಅಶ್ವೀಜ ಬಹುಳ ತೃಯೋದಶಿಯಂದು ಪ್ರದೋಷ ಕಾಲದಲ್ಲಿ ಮನೆಯ ಹೊರಗೆ ಯಮದೀಪ ಹಚ್ಚಲಾಗುತ್ತದೆ. ಯಮದೀಪದಿಂದ ಅಪಮೃತ್ಯು ಭಯ ದೂರವಾಗುತ್ತದೆ ಎಂಬ ಪ್ರತೀತಿಯೂ ಇದೆ. ಪುರಾಣ ಕಥೆಯ ಪ್ರಕಾರ ಹೈಮ ಎಂಬ ರಾಜಪುತ್ರನ ವಿವಾಹದ ನಾಲ್ಕನೇಯ ದಿನದ ಸಮಾರಂಭದ ಸಂಭ್ರಮದಲ್ಲಿರುವಾಗ ಆತ ಸರ್ಪ ಕಚ್ಚಿ ಮೃತಪಡುತ್ತಾನೆ. ಆತನನ್ನು ಕರೆತರಲು ಹೋದ ಯಮಧೂತರಿಗೆ ನವ ವಿವಾಹಿತನ ಸಾವಿಗೆ ಕರುಣೆ ಬಂದು ವ್ಯಾಕುಲರಾಗಿ ತಮ್ಮ ಮನಸ್ಸಿನ ವ್ಯಾಕುಲವನ್ನು ಯಮಧರ್ಮನಿಗೆ ಅರಿಕೆ ಮಾಡುತ್ತಾರೆ. ಇನ್ನಾರಿಗೂ ಈ ವಿಧದ ಮೃತ್ಯು ಬಾರದಂತೆ ಕರುಣಿಸಲು ಪ್ರಾರ್ಥಿಸುತ್ತಾರೆ. ಇದನ್ನಾಲಿಸಿದ ಯಮಧರ್ಮ ಅಶ್ವೀಜ ಬಹುಳ ತೃಯೋದಶಿಯಿಂದ ಆರಂಭಿಸಿ ಐದು ದಿನ ಸಾಯಂಕಾಲದಲ್ಲಿ ಯಾರು ಮನೆಯೆದುರು ದೀಪೋತ್ಸವ ಮಾಡುವರೋ ಅವರಿಗೆ ಇಂತಹ ಅಪಮೃತ್ಯು ಬಾರಲಾರದೆಂದು ವರ ನೀಡುತ್ತಾನೆ ಎಂಬ ಉಲ್ಲೇಖವಿದೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಶಿಂಡಲ ಕಾಯಿಯ ವಿಶೇಷ ಹಣತೆಯಲ್ಲಿ ದೀಪ ಬೆಳಗಿ ಯಮಧರ್ಮನಿಗೆ ಸಮರ್ಪಿಸುವ ಕಟ್ಟಳೆ ತಪ್ಪದೆ ಸಾಗಿಬಂದಿದೆ. ಈ ವಿಶೇಷ ಸಂದರ್ಭ ಗೋಕರ್ಣದಲ್ಲಿ ಮಾತ್ರ ಇಂದಿಗೂ ನೋಡಲು ಸಿಗುವುದು ಸಂಸ್ಕೃತಿಯ ಉಳಿವಿನ ಕುರುಹು ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.