ADVERTISEMENT

ಕಾರವಾರ: ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ‘ಕನಸು’

ವಿಧಾನಸಭೆ ಚುನಾವಣೆ ಹೊತ್ತಲ್ಲಿ ‘ಭರವಸೆ’ಗಾಗಿ ಜಾರಿಯಾಗಿದ್ದ ಆದೇಶ: ಆರೋಪ

ಗಣಪತಿ ಹೆಗಡೆ
Published 20 ನವೆಂಬರ್ 2024, 4:12 IST
Last Updated 20 ನವೆಂಬರ್ 2024, 4:12 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ
ಕಾರವಾರದ ಜಿಲ್ಲಾಧಿಕಾರಿ ಕಚೇರಿ   

ಕಾರವಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಬೇಕು ಎಂಬ ವಿವಿಧ ಸಂಘಟನೆಗಳ ಬೇಡಿಕೆಗೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಎರಡೂವರೆ ವರ್ಷದ ಹಿಂದೆ ಪುತ್ಥಳಿ ಸ್ಥಾಪನೆ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶ ಕಾರ್ಯಗತಗೊಂಡಿಲ್ಲ.

2023ರ ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 12 ಅಡಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು ₹25 ಲಕ್ಷ ಅನುದಾನ ಮಂಜೂರು ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಅಂದು ಇಲಾಖೆಯ ಸಚಿವರೂ ಆಗಿದ್ದ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕೃತವಾಗಿ ಘೋಷಿಸಿದ್ದರು.

ಆದರೆ, ಆದೇಶಗೊಂಡು ಒಂದು ಮುಕ್ಕಾಲು ವರ್ಷ ಕಳೆದರೂ ಪುತ್ಥಳಿ ಸ್ಥಾಪನೆಯ ಪ್ರಕ್ರಿಯೆಯೂ ನಡೆದಿಲ್ಲ. ಇದು ಸಹಜವಾಗಿ ಪರಿಶಿಷ್ಟ ಸಮುದಾಯದ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

‘ಉತ್ತರ ಕನ್ನಡದ ಜಿಲ್ಲಾಕೇಂದ್ರದಲ್ಲಿ ಹಲವು ಮಹನೀಯರ ಪುತ್ಥಳಿ ಸ್ಥಾಪಿಸಿದ್ದಾರೆ. ಈವರೆಗೂ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು ಎಂಬ ನಮ್ಮ ಆಗ್ರಹಕ್ಕೆ ಸರ್ಕಾರ ಬೆಲೆ ಕೊಟ್ಟಿಲ್ಲ’ ಎನ್ನುತ್ತಾರೆ ಅನುಸೂಚಿತ ಜಾತಿ, ಬುಡಕಟ್ಟುಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ಅಧ್ಯಕ್ಷ ತುಳಸಿದಾಸ ಪಾವುಸ್ಕರ.

‘ಕಳೆದ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಮಯದಲ್ಲೇ ಪುತ್ಥಳಿ ಸ್ಥಾಪನೆಗೆ ಆದೇಶವಾಗಿತ್ತು. ಚುನಾವಣೆ ಮುಗಿದ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ, ಘೋಷಣೆಯಾದ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಪುತ್ಥಳಿ ಸ್ಥಾಪನೆಗೆ ಆದೇಶವಾಯಿತೇ ಹೊರತು, ಅನುದಾನ ನೀಡಿಲ್ಲ ಎನ್ನುತ್ತಾರೆ.

ಚುನಾವಣೆಯಲ್ಲಿ ಮತಬ್ಯಾಂಕ್ ದೃಷ್ಟಿಕೋನದಿಂದ ಪುತ್ಥಳಿ ಸ್ಥಾಪಿಸುವ ಭರವಸೆ ನೀಡಲಾಯಿತೇ ಹೊರತು, ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ಪ್ರಮುಖ ದೀಪಕ ಕುಡಾಳಕರ ದೂರುತ್ತಾರೆ.

‘ಜಿಲ್ಲಾಕೇಂದ್ರದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ವೃತ್ತ ಸ್ಥಾಪಿಸಲಾಗಿದ್ದರೂ ಅಲ್ಲಿಯೂ ಅಂಬೇಡ್ಕರ್ ಪುತ್ಥಳಿ ಇಲ್ಲ. ಅವರಿಗೆ ಗೌರವ ಸೂಚಿಸಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಪುತ್ಥಳಿ ಸ್ಥಾಪನೆ ಮಾಡಬೇಕಾಗಿದೆ’ ಎನ್ನುತ್ತರೆ ಅವರು.

ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಈ ಹಿಂದೆ ಆದೇಶವಾಗಿದ್ದರೂ ಅನುದಾನ ಬಿಡುಗಡೆಯಾಗಿರಲಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮರುಪ್ರಸ್ತಾವ ಸಲ್ಲಿಸುವ ಬಗ್ಗೆ ಯೋಚಿಸಲಾಗುವುದು
ವೈ.ಕೆ.ಉಮೇಶ್ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.