ಕಾರವಾರ: ತಾಯಿ ಸರ್ಕಾರಿ ಅಧಿಕಾರಿ, ಕುಟುಂಬ ಆರ್ಥಿಕವಾಗಿ ಸಬಲ. ಸಹೋದರರಿಬ್ಬರು ವಾಣಿಜ್ಯ ಪದವಿ ಪಡೆದವರು. ಆದರೂ, ಅವರಿಬ್ಬರು ಉದ್ಯೋಗ ಅರಸುತ್ತ ಮಹಾನಗರಕ್ಕೆ ವಲಸೆ ಹೋಗದೆ, ಅಂಕೋಲಾ ತಾಲ್ಲೂಕಿನ ಸಗಡಗೇರಿ ಎಂಬ ಗ್ರಾಮದ ಬಂಜರು ಭೂಮಿಯನ್ನು ಫಲವತ್ತಗೊಳಿಸಿ ಕೃಷಿ ಮಾಡುತ್ತಿದ್ದಾರೆ.
ಗಂಗಾವಳಿ ನದಿ ತಟದ ಊರಿನಲ್ಲಿ ವಿದೇಶಿ ಮೂಲದ ‘ಡ್ರ್ಯಾಗನ್ ಫ್ರುಟ್’ ಕೃಷಿ ಆರಂಭಿಸಿ ಗ್ರಾಮದ ಇತರ ಯುವಕರಿಗೆ ಮಾದರಿಯಾಗುವ ಜತೆಗೆ, ‘ನಮ್ಮೂರಲ್ಲಿ ಇಂಥ ಬೆಳೆ ಬೆಳೆಯದು’ ಎಂದು ಹೇಳುತ್ತಿದ್ದವರ ಎದುರಿಗೇ ಟನ್‍ಗಟ್ಟಲೆ ಡ್ರ್ಯಾಗನ್ ಫ್ರುಟ್ ಬೆಳೆದು, ರಾಶಿ ಹಾಕುತ್ತಿರುವ ವಿತ್ತೇಶ ನಾಯಕ ಮತ್ತು ವಿಘ್ನೇಶ ನಾಯಕ ಸಹೋದರ ಕೃಷಿಗಾಥೆ ಇದಾಗಿದೆ.
ಗ್ರಾಮದಲ್ಲಿನ ಒಂದೂವರೆ ಎಕರೆ ಬೇಣದ ಭೂಮಿಯನ್ನು ಹದಗೊಳಿಸಿ, ಅಲ್ಲಿ ಸಿಮೆಂಟ್ ಕಂಬಗಳನ್ನು ನೆಟ್ಟು, ಒಂದೂವರೆ ವರ್ಷದ ಹಿಂದೆ ಡ್ರ್ಯಾಗನ್ ಫ್ರುಟ್ ಕೃಷಿ ಆರಂಭಿಸಿದ್ದ ಸಹೋದರರು ಈಗ 1,600ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದಾರೆ. ಉದ್ಯಮವೊಂದನ್ನು ಮುನ್ನಡೆಸುತ್ತ, ಅದರೊಟ್ಟಿಗೆ ದಿನವೂ ಕೆಲ ತಾಸು ಕೃಷಿಗೆ ಮೀಸಲಿಡುತ್ತಿದ್ದಾರೆ.
‘ಯುಟ್ಯೂಬ್‍ನಲ್ಲಿನ ದೃಶ್ಯವೊಂದು ಡ್ರ್ಯಾಗನ್ ಫ್ರುಟ್ ಬೆಳೆಯಲು ಪ್ರೇರಣೆಯಾಯಿತು. ಕುಟುಂಬಕ್ಕೆ ಸ್ವಂತ ಜಮೀನು ಇದ್ದ ಕಾರಣ ಅದರಲ್ಲಿಯೇ ಕೃಷಿ ಮಾಡಲು ನಿರ್ಧರಿಸಿದೆವು. ಡ್ರ್ಯಾಗನ್ ಫ್ರುಟ್ ಕೃಷಿಯಿಂದ ಯಶಸ್ಸು ಸಾಧಿಸಿದವರಿಗಾಗಿ ಕಾರ್ಕಳ, ಬೆಂಗಳೂರು ಸೇರಿ ಹಲವೆಡೆ ಹುಡುಕಾಟ ನಡೆಸಿ, ಕೆಲ ಕೃಷಿಕರಿಂದ ಮಾಹಿತಿಯನ್ನೂ ಪಡೆದುಕೊಂಡೆವು. ಗುಣಮಟ್ಟದ ಸಸಿಗಳ ಖರೀದಿಗೂ ರಾಜ್ಯದ ವಿವಿಧೆಡೆ ಸುತ್ತಾಟ ನಡೆಸಿ ಶೋಧಿಸಿದ್ದೆವು. ಬೆಂಗಳೂರಿನಿಂದ ಬಸ್‍ನಲ್ಲಿ, ಸ್ವಂತ ಕಾರಿನಲ್ಲಿ ಸಸಿಗಳನ್ನು ತಂದು ಕೃಷಿ ಆರಂಭಿಸಿದೆವು’ ಎಂದು ವಿವರಿಸುತ್ತಾರೆ ವಿತ್ತೇಶ ನಾಯಕ.
‘ಕೃಷಿ ಆರಂಭಿಸಿದ ಜಮೀನು ನೀರಾವರಿಯದ್ದೇನೂ ಆಗಿರಲಿಲ್ಲ. ಎತ್ತರದ ಗುಡ್ಡದ ಮೇಲಿನ ಸ್ಥಳದಲ್ಲಿ ಕೃಷಿ ಮಾಡುವುದು ಸುಲಭವೂ ಆಗಿರಲಿಲ್ಲ. ಜಾಗ ಸಮತಟ್ಟುಗೊಳಿಸಿಕೊಂಡು, ಅಲ್ಲಿನ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಪದ್ಧತಿಯ ಕ್ರಮಗಳನ್ನು ಅನುಸರಿಸಲಾಯಿತು. ಕಂಬಗಳನ್ನು ನೆಟ್ಟು ಅವುಗಳಿಗೆ ಡ್ರ್ಯಾಗನ್ ಫ್ರುಟ್ ಸಸಿಗಳನ್ನು ಹಬ್ಬಿಸಲಾಯಿತು. ಹಲವು ಸಿಮೆಂಟ್ ಕಂಬಗಳನ್ನೂ ಇಬ್ಬರು ಸಹೋದರರು ಸೇರಿಕೊಂಡು ನಿರ್ಮಿಸಿಕೊಂಡಿದ್ದೆವು’ ಎಂದರು.
ಎಲ್ಲ ಯುವಕರಂತೆ ನಮಗೂ ಮಹಾನಗರದಲ್ಲಿ ಉದ್ಯೋಗ ಮಾಡಬೇಕು ಎಂಬ ಬಯಕೆ ಸಹಜವಾಗಿಯೇ ಇತ್ತು. ಆದರೆ ಕೃಷಿಯಲ್ಲಿ ತೊಡಗಿಸಿಕೊಂಡ ಬಳಿಕ ಇದರಲ್ಲಿರುವಷ್ಟು ನೆಮ್ಮದಿ ಬೇರೆ ಕ್ಷೇತ್ರದಲ್ಲಿ ಸಿಗದು ಎಂಬುದು ಅರಿವಿಗೆ ಬಂತುವಿತ್ತೇಶ ನಾಯಕ ಕೃಷಿಕ
ಸಣ್ಣದಾದ ಉದ್ಯಮವೊಂದನ್ನು ಇಬ್ಬರು ಸಹೋದರರು ಸೇರಿ ಆರಂಭಿಸಿದ್ದು ಅದರೊಟ್ಟಿಗೆ ಕೃಷಿ ಕ್ಷೇತ್ರದತ್ತಲೂ ಲಕ್ಷವಹಿಸುತ್ತಿದ್ದೇವೆವಿಘ್ನೇಶ ನಾಯಕ ಕೃಷಿಕ
ಇಳುವರಿ ಹೆಚ್ಚಳದ ನಿರೀಕ್ಷೆ
‘2023ರ ಮಾರ್ಚ್‍ನಲ್ಲಿ ಡ್ರ್ಯಾಗನ್ ಫ್ರುಟ್ ಸಸಿಗಳನ್ನು ನಾಟಿ ಮಾಡಲಾಗಿತ್ತು. ಸರಾಸರಿ 18 ತಿಂಗಳಿಗೆ ಫಸಲು ಸಿಗುವುದು ವಾಡಿಕೆ. ನಾವು ಮಾಡಿದ ಆರೈಕೆಯ ಪರಿಣಾಮ ವಾಡಿಕೆಗಿಂತ ಒಂದೆರಡು ತಿಂಗಳು ಮುನ್ನ ಫಸಲು ಸಿಕ್ಕಿತು. ವರ್ಷಕ್ಕೆ ಐದು ಬಾರಿ ಕಟಾವು ಮಾಡವ ಗುರಿ ಹೊಂದಿದ್ದೆವು. ಒಮದೂವರೆ ಎಕರೆಗೆ ನಿರ್ವಹಣೆಗೆ ₹1.5 ಲಕ್ಷದಿಂದ ₹2 ಲಕ್ಷದವರೆಗೆ ವೆಚ್ಚವಾಗಿತ್ತು. ₹3 ಲಕ್ಷ ಆದಾಯ ಬಂದಿದೆ. ಕುಮಟಾ ಮತ್ತು ಮಂಗಳೂರು ಮಾರುಕಟ್ಟೆಗೆ ಹಣ್ಣು ಪೂರೈಸುತ್ತಿದ್ದು ರಾಜ್ಯದ ಬೇರೆ ಬೇರೆ ಭಾಗದಿಂದಲೂ ಬೇಡಿಕೆ ಬರುತ್ತಿವೆ. ದಿನಕಳೆದಂತೆ ಇಳುವರಿ ಹೆಚ್ಚುವ ನಿರೀಕ್ಷೆಯೂ ಇದೆ’ ಎನ್ನುತ್ತಾರೆ ಕೃಷಿಕ ವಿತ್ತೇಶ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.