ADVERTISEMENT

ಮುಂಡಗೋಡ: ದ್ರವ ತ್ಯಾಜ್ಯ ಸಂಸ್ಕರಿಸುವ ಕಾಲುವೆ

ಮುಂಡಗೋಡ ತಾಲ್ಲೂಕಿನ ಇಂದೂರು ಗ್ರಾಮ ಪಂಚಾಯ್ತಿಯಲ್ಲಿ ಅನುಷ್ಠಾನ

ಶಾಂತೇಶ ಬೆನಕನಕೊಪ್ಪ
Published 23 ಫೆಬ್ರುವರಿ 2023, 16:12 IST
Last Updated 23 ಫೆಬ್ರುವರಿ 2023, 16:12 IST
ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ದ್ರವ ತ್ಯಾಜ್ಯ ಸಂಸ್ಕರಣಾ ಕಾಲುವೆ ನಿರ್ಮಿಸಿರುವುದನ್ನು ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಪರಿಶೀಲಿಸಿದರು
ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ದ್ರವ ತ್ಯಾಜ್ಯ ಸಂಸ್ಕರಣಾ ಕಾಲುವೆ ನಿರ್ಮಿಸಿರುವುದನ್ನು ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಪರಿಶೀಲಿಸಿದರು   

ಮುಂಡಗೋಡ: ಜಲಮೂಲ ಕಲುಷಿತಗೊಳ್ಳುವುದನ್ನು ಕಡಿಮೆ ಮಾಡಲು, ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣಕ್ಕಾಗಿ, ತಾಲ್ಲೂಕಿನ ಇಂದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದ್ರವ ತ್ಯಾಜ್ಯ ಸಂಸ್ಕರಣ (ಲಿಕ್ವಿಡ್‌ ವೇಸ್ಟ್‌ ಮ್ಯಾನೇಜಮೆಂಟ್‌) ಕಾಮಗಾರಿ ಪ್ರಗತಿಯಲ್ಲಿದೆ.

ಈ ಮೂಲಕ ಮನೆಗಳ ಮುಂದಿನ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ, ಜಲಮೂಲ ಸೇರುವ ಮುನ್ನ ತ್ಯಾಜ್ಯ ಮುಕ್ತ ನೀರು ಸಂಗ್ರಹಗೊಳ್ಳುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಸ್ವಚ್ಛ ಭಾರತ್‌ ಮಿಷನ್‌ ಗ್ರಾಮೀಣ ಯೋಜನೆ ಹಾಗೂ ನರೇಗಾದಡಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಕ್ತಾಯ ಹಂತದಲ್ಲಿದೆ. ಚರಂಡಿ ನೀರು ಸಂಸ್ಕರಿಸಿ ಕೆರೆಗೆ ಸೇರುವಂತೆ ಮಾಡುವುದೇ ಯೋಜನೆಯ ವಿಶೇಷವಾಗಿದೆ.

‘ನರೇಗಾದಡಿ ₹10 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಿಸಲಾಗಿದೆ. ಸಂಪರ್ಕ ಕೊಂಡಿಯಾಗಿ ಅಂದಾಜು ₹4 ಲಕ್ಷ ವೆಚ್ಚದಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಗ್ರಾಮೀಣ ಯೋಜನೆಯಡಿ ದ್ರವ ತ್ಯಾಜ್ಯ ಸಂಸ್ಕರಣ ಕಾಲುವೆ ನಿರ್ಮಿಸಲಾಗಿದೆ.

ADVERTISEMENT

‘ಸಚಿವ ಶಿವರಾಮ ಹೆಬ್ಬಾರ್‌ ಪ್ರಯತ್ನದಿಂದ ಇಂದೂರ ಗ್ರಾಮ ಪಂಚಾಯಿತಿಯು ಅಮೃತ ಯೋಜನೆಯಡಿ ಆಯ್ಕೆಯಾಗಿತ್ತು. ಅದರಿಂದ ಬಂದ ವಿಶೇಷ ಅನುದಾನ ಬಳಸಿಕೊಂಡು ಈ ಕಾಮಗಾರಿ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಗ್ರಾ.ಪಂ ಸದಸ್ಯ ಶಶಿಧರ ಪರವಪುರ.

‘ಕಲ್ಲುಮಿಶ್ರಿತ ಮರಳಿನ ಮೇಲೆ ಹರಿಯುವ ಚರಂಡಿ ನೀರು, ಸೋಸುವ ಪ್ರಕ್ರಿಯೆಗೆ ಒಳಪಡುತ್ತದೆ. ತ್ಯಾಜ್ಯ ಮುಕ್ತ ನೀರು ಅಂತಿಮವಾಗಿ ರಂಧ್ರಗಳಿರುವ ಪೈಪ್‌ ಮೂಲಕ ಸಂಗ್ರಹಗೊಂಡು ಕೆರೆಗೆ ಸೇರುತ್ತದೆ. ಅಂತರ್ಜಲ ಹೆಚ್ಚಿಸಲು ಈ ಯೋಜನೆಯು ನೆರವಾಗಲಿದ್ದು, ಅದರ ಜೊತೆಗೆ ಕೆರೆಯಲ್ಲಿ ಜಾನುವಾರುಗಳಿಗೆ ಕುಡಿಯಲು, ಜನರು ಬಟ್ಟೆ ತೊಳೆಯಲು, ಗದ್ದೆಗಳಿಗೆ ನೀರು ಹರಿಸಲು ತ್ಯಾಜ್ಯ ಮುಕ್ತ ನೀರು ಲಭಿಸಿದಂತಾಗುತ್ತದೆ. ಅಲ್ಲದೆ, ಕೆರೆಯೂ ಅಂದವಾಗಿ ಕಾಣುತ್ತದೆʼ ಎಂದರು.

ಸಂಸ್ಕರಣೆ ವಿಧಾನ:

ತ್ಯಾಜ್ಯ ನೀರು ಸಂಸ್ಕರಣೆ ಆಗಲು ಅಗಲವಾದ ಕಾಲುವೆಯಲ್ಲಿ ನಾಲ್ಕು ಪದರಿನಲ್ಲಿ ಕಲ್ಲು, ಮರಳು ಹಾಕಲಾಗಿದೆ. ದೊಡ್ಡ ಗಾತ್ರದಿಂದ ಸಣ್ಣಗಾತ್ರದವರೆಗಿನ ಕಲ್ಲುಗಳನ್ನು ಬಳಸಲಾಗಿದೆ. ತಿಳಿ ನೀರು ಕೆರೆ ಸೇರಲು ಕಾಲುವೆಯ ಕೆಳಭಾಗದಲ್ಲಿ ರಂಧ್ರಗಳನ್ನು ಮಾಡಿರುವ ಪೈಪ್‌ಗಳನ್ನು ಅಳವಡಿಸಲಾಗಿದೆ. ಅದರ ಮೇಲೆ 80 ಎಂ.ಎಂ ಗಾತ್ರದ ಕಲ್ಲುಗಳನ್ನು ಜೋಡಿಸಲಾಗಿದೆ. ಇದರ ಮೇಲ್ಭಾಗದಲ್ಲಿ 40 ಎಂ.ಎಂ, 20 ಎಂ.ಎಂ ಕಲ್ಲುಗಳನ್ನು ಕ್ರಮವಾಗಿ ಹಾಕಲಾಗಿದೆ. ಕೊನೆಯ ಹಂತವಾಗಿ ಕಲ್ಲುಮಿಶ್ರಿತ ಮರಳನ್ನು ಮೇಲ್ಭಾಗದಲ್ಲಿ ಹಾಕಲಾಗಿದೆ. ಮರಳಿನ ಮೇಲೆ ಹರಿಯುವ ನೀರು ಇಲ್ಲಿಂದಲೇ ತಿಳಿಯಾಗುವ ಪ್ರಕ್ರಿಯೆಗೆ ಒಳಪಡುತ್ತದೆ.

-------------

ಕೊಪ್ಪ ಹಾಗೂ ಇಂದೂರ ಗ್ರಾಮಗಳಲ್ಲಿ ಈ ಯೋಜನೆ ಪ್ರಗತಿಯಲ್ಲಿದೆ. ಕೆರೆ ನೀರು ಕಲುಷಿತಗೊಳ್ಳದಂತೆ ತಡೆಗಟ್ಟಲು ಇದು ಸಹಕಾರಿಯಾಗಲಿದೆ.

ಪ್ರದೀಪ ಭಟ್ಟ

ಪಂಚಾಯತ್‌ ರಾಜ್‌ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.