ADVERTISEMENT

ಪದೇಪದೇ ಉಕ್ಕಿ ಹರಿಯುವ ಒಳಚರಂಡಿ

ಕಾರವಾರದ ಪೊಲೀಸ್ ಕ್ಲಬ್ ರಸ್ತೆಯ ನಿವಾಸಿಗಳಿಗೆ ತಪ್ಪದ ಬವಣೆ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 9:36 IST
Last Updated 25 ನವೆಂಬರ್ 2019, 9:36 IST
ಕಾರವಾರದ ಪೊಲೀಸ್ ಕ್ಲಬ್ ರಸ್ತೆಯಲ್ಲಿ ಈಚೆಗೆ ಒಳ ಚರಂಡಿ ಉಕ್ಕಿ, ಕೊಳಚೆ ನೀರು ರಸ್ತೆಯಲ್ಲಿ ಹರಿಯಿತು.
ಕಾರವಾರದ ಪೊಲೀಸ್ ಕ್ಲಬ್ ರಸ್ತೆಯಲ್ಲಿ ಈಚೆಗೆ ಒಳ ಚರಂಡಿ ಉಕ್ಕಿ, ಕೊಳಚೆ ನೀರು ರಸ್ತೆಯಲ್ಲಿ ಹರಿಯಿತು.   

ಕಾರವಾರ: ನಗರದ ಪೊಲೀಸ್ ಕ್ಲಬ್ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಪದೇಪದೇ ಉಕ್ಕಿ ಹರಿಯುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲಾ ಪಂಚಾಯ್ತಿ ಕಚೇರಿಯ ಹಿಂಭಾಗದ ಈ ರಸ್ತೆಯ ಮುಚ್ಚಿದ ಚರಂಡಿಗೆ ಸ್ನಾನಗೃಹ, ಶೌಚಾಲಯಗಳ ನೀರನ್ನು ನೇರವಾಗಿ ಹರಿಸಲಾಗುತ್ತಿದೆ. ಅದರ ಪೈಪ್‌ ಕಟ್ಟಿಕೊಂಡು ಮ್ಯಾನ್‌ಹೋಲ್ ಮೂಲಕ ಹೊರಬರುತ್ತಿದೆ. ಇದರಿಂದ ರಸ್ತೆಯ ತುಂಬ ಕೊಳಕು ನೀರು ನಿಂತಿರುತ್ತದೆ. ಸಮೀಪದಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ವಾಹನಗಳು ಸಾಗಿದರೆಹತ್ತಿರವಿದ್ದವರ ಮೈ ಮೇಲೆ ಸಿಡಿಯುತ್ತದೆ. ಸೊಳ್ಳೆಗಳ ಹಾವಳಿಯೂ ಹೆಚ್ಚಿದ್ದು, ಸಾಂಕ್ರಾಮಿಕ ಕಾಯಿಲೆಗಳ ಆತಂಕ ಕಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.

‘ಕೆಲವು ತಿಂಗಳಿನಿಂದ ಈ ರೀತಿ ಸಮಸ್ಯೆಯಾಗುತ್ತಿದೆ. ನಗರಸಭೆಯ ಸಿಬ್ಬಂದಿ ಎರಡು ದಿನಗಳ ಹಿಂದೆಯಷ್ಟೇ ಬಂದು ಚರಂಡಿ ಸ್ವಚ್ಛಗೊಳಿಸಿದ್ದರು. ಆದರೆ, ಪುನಃ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಕೆಲವೊಮ್ಮೆ, ಸಮೀಪದ ತೆರೆದ ಚರಂಡಿಯಲ್ಲೂ ತುಂಬಿಕೊಳ್ಳುತ್ತದೆ. ಇಡೀ ಪ್ರದೇಶವೇ ದುರ್ವಾಸನೆ ಬೀರುತ್ತದೆ’ ಎಂದು ಸ್ಥಳೀಯ ನಿವಾಸಿ ಪ್ರವೀಣ ಕೃಷ್ಣಾಪುರ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಈ ರಸ್ತೆಯ ಸುತ್ತಮುತ್ತಹತ್ತಾರು ಮನೆಗಳು ಮತ್ತು ವಸತಿ ಸಮುಚ್ಛಯಗಳಿವೆ. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರೂ ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಆದರೂನಗರಸಭೆಯ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆ ಬಂದಿಲ್ಲವೇ? ಅದರ ವಿರುದ್ಧ ಯಾಕೆಕ್ರಮ ತೆಗೆದುಕೊಂಡಿಲ್ಲ? ನಗರದಲ್ಲಿ ಡೆಂಗಿ, ಮಲೇರಿಯಾದಂತಹ ಪ್ರಕರಣಗಳು ಕಡಿಮೆ ಇವೆ. ಈ ರೀತಿಯ ನಿರ್ಲಕ್ಷ್ಯದಿಂದ ಹೆಚ್ಚು ಕಾಣಿಸಿಕೊಳ್ಳಬಹುದು. ಚರಂಡಿ ಸಮಸ್ಯೆಯ ಬಗ್ಗೆ ನಗರಸಭೆಗೆ ಹಲವು ಸಲ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದುಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

ಫಲಕದ ಕೆಳಗೇ ಕಸ!:ಪೊಲೀಸ್ ಕ್ಲಬ್ ರಸ್ತೆಯಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿಯ ಸಮೀಪ ಕಸ ಎಸೆಯದಂತೆ ಫಲಕವೊಂದನ್ನು ಅಳವಡಿಸಲಾಗಿದೆ. ಕಸ ಎಸೆದವರಿಗೆ ₹ 1 ಸಾವಿರ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡುವ ಸಂದೇಶ ಅದರಲ್ಲಿದೆ. ಆದರೆ, ಅದರ ಬುಡದಲ್ಲೇ ಹಳೆಯ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ರಾಶಿ ಹಾಕಲಾಗಿದೆ. ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.