ಶಿರಸಿ: ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಉದ್ದೇಶಿತ 5–6ನೇ ಘಟಕ ವಿಸ್ತರಣೆ ಯೋಜನೆಯನ್ನು ಕೈಬಿಡಬೇಕು ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ, ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
‘ಘಟಕ ವಿಸ್ತರಣೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿರುವುದು ವರದಿಯಾಗಿದೆ. ಆರಂಭದಿಂದಲೂ ಅಣುವಿದ್ಯುತ್ ಸ್ಥಾವರ ವಿರೋಧಿಸುತ್ತಿರುವ ನಮಗೆ ಇದು ಆಘಾತಕಾರಿ ವಿಷಯವಾಗಿದೆ. ಈ ಆದೇಶಗಳನ್ನು ರದ್ದುಪಡಿಸಬೇಕು’ ಎಂದಿದ್ದಾರೆ.
ಇದನ್ನೂ ಓದಿ...ಕೈಗಾ: 5, 6ನೇ ಘಟಕಕ್ಕೆ ಅಸ್ತು
ಜಿಲ್ಲೆಯ ಸಾರ್ವಜನಿಕರ ಆರೋಗ್ಯ, ಆರ್ಥಿಕತೆ ಹಾಗೂ ಪರಿಸರಕ್ಕೆ ಮಾರಣಾಂತಿಕವಾಗಿರುವ ಈ ಯೋಜನೆಯನ್ನು ರದ್ದುಪಡಿಸಬೇಕು. ಸರ್ಕಾರ ಸ್ಥಾಪನೆಯ ವಿಚಾರ ಮುಂದಿಟ್ಟಾಗಲೇ, ವಿರೋಧ ವ್ಯಕ್ತಪಡಿಸಲಾಗಿತ್ತು. ಸಮಾವೇಶ ನಡೆಸಿದಾಗ ಸಾವಿರಾರು ಜನರು ಭಾಗವಹಿಸಿ, ವಿರೋಧ ವ್ಯಕ್ತಪಡಿಸಿದ್ದರು. ಯಾಕಾಗಿ ಈ ಯೋಜನೆ ಬೇಡ ಎಂಬುದರ ಕಾರಣ ಇಲ್ಲಿ ನೀಡಲಾಗಿದೆ.
* ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಕೈಗಾ ಸುತ್ತಮುತ್ತಲ ಗಾಳಿ, ನೀರು, ಜಲಚರ, ಸಸ್ಯಗಳು ವಿಕಿರಣಯುಕ್ತವಾಗಿದ್ದು, ಅವನ್ನು ಸೇವಿಸುವ ಜನರ ಪರಿಸ್ಥಿತಿ ಏನು ಎಂಬುದರ ಕುರಿತು ನೈಜ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಮುಂಬೈ ಟಾಟಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ನಡೆಸುತ್ತಿದೆ ಎನ್ನಲಾಗುವ ವರದಿಯು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಮತ್ತೆ ಹೊಸ ಅಣುವಿದ್ಯುತ್ ಘಟಕಗಳನ್ನು ಸ್ಥಾಪಿಸುವುದು ಸರಿಯಲ್ಲ.
*ಕೈಗಾ ಅಣುವಿದ್ಯುತ್ ಘಟಕಗಳು ಕಾಳಿ ನೀರನ್ನು ಬಳಸಿಕೊಂಡು, ಪುನಃ ಆ ನೀರನ್ನು ಕಾಳಿ ನದಿಗೆ ಬಿಡುತ್ತದೆ. ವಿಕಿರಣಯುಕ್ತ ಈ ನೀರು ಕಾಳಿ ನದಿಯ ಮತ್ತು ಕಾರವಾರದ ಸಮುದ್ರದಲ್ಲಿ ಸಿಗುವ ಮೀನು,ಏಡಿ, ಸೀಗಡಿ, ಬೆಳಚೆಯಂಥ ಜಲಚರಗಳ ದೇಹವನ್ನು ಸೇರುತ್ತಿವೆ. ಈ ಮೀನನ್ನು ಸೇವಿಸುವ ಜನರ ಆರೋಗ್ಯ ಏನಾಗುತ್ತಿದೆ? ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಇಂಥ ಸಂದರ್ಭದಲ್ಲಿ ಮತ್ತೆ ಹೊಸ ಅಣುವಿದ್ಯುತ್ ಘಟಕಗಳನ್ನು ಸ್ಥಾಪಿಸುವದು ಸರಿಯಲ್ಲ.
* ಕೈಗಾ ಪ್ರದೇಶವು ಅಮೂಲ್ಯ ಕಾಡಿರುವ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯವೇ ಈ ಪ್ರದೇಶವನ್ನು (ಕೆರವಡಿ, ಕದ್ರಾ, ಮಲ್ಲಾಪುರ, ಕೈಗಾ ಇತ್ಯಾದಿ ಗ್ರಾಮ ಪಂಚಾಯತ ಪ್ರದೇಶ) ಪರಿಸರ ಸೂಕ್ಷ್ಮಪ್ರದೇಶವೆಂದು ಅಧಿಕೃತವಾಗಿ ಘೋಷಿಸಿ ಗೆಜೆಟ್ ಪ್ರಕಟಣೆ ಮಾಡಿದೆ. (ನಂ. 3956/ಅಕ್ಟೋಬರ್ 4, 2018) . ಇಂಥ ಸೂಕ್ಷ್ಮ ಪರಿಸರದಲ್ಲಿ ಅಣುವಿದ್ಯುತ್ ಘಟಕ ಸ್ಥಾಪಿಸಿರುವುದೇ ತಪ್ಪು. ಅವುಗಳ ಮುಂದಿನ ವಿಸ್ತರಣೆಯಂತೂ ಖಂಡಿತಾ ಸರಿಯಲ್ಲ.
* ಮಳೆ-ಬೆಳೆ ದೃಷ್ಟಿಯಿಂದ ಈ ಜಿಲ್ಲೆಯ ಪರಿಸರದ ಹಿತಕಾಯುವ ಮತ್ತು ಕಾಳಿ ನದಿಗೆ ಸದಾ ನೀರುಣಿಸುವ ಅಣಶಿ ಹುಲಿ ರಕ್ಷಿತಾರಣ್ಯ, ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ಅಭಯಾರಣ್ಯ ಇವೆಲ್ಲ ಕೈಗಾ ಪಕ್ಕದಲ್ಲಿಯೇ ಇವೆ. ಇಲ್ಲಿ ಅಪಾರ ಸಂಖ್ಯೆಯ ಅಪರೂಪದ ಸಸ್ಯ-ಪ್ರಾಣಿ ಜೀವವೈವಿಧ್ಯವಿದೆ. ಇವುಗಳ ಮೇಲೆ ಅಣುವಿಕಿರಣ ಉಂಟುಮಾಡುತ್ತಿರುವ ಘೋರಪರಿಣಾಮಗಳನ್ನು ಇದುವರೆಗೆ ಅಧ್ಯಯನ ಮಾಡಲಾಗಿಲ್ಲ. ಆದರೂ, ಸಾರ್ವಜನಿಕರಿಗೆ ಮಾಹಿತಿಯಿಲ್ಲ. ಹೀಗಿರುವಾಗ, ಪುನಃ ಅಣುವಿದ್ಯುತ್ತಿನ ಹೊಸ ಘಟಕಗಳ ಸ್ಥಾಪನೆ ತರವಲ್ಲ.
* ಕದ್ರಾದಿಂದ ಅಪಾರ ಪ್ರಮಾಣದಲ್ಲಿ ಕಾಳಿ ನೀರನ್ನು ಈಗಾಗಲೇ ಕೈಗಾ ಘಟಕಗಳು ಬಳಸುತ್ತಿವೆ. ಹೊಸ ಘಟಕಗಳು ಮತ್ತುಷ್ಟು ಹೆಚ್ಚು ನೀರನ್ನು ಬಳಸುತ್ತವೆ. ಇದರಿಂದ ಕಾಳಿನದಿಯಲ್ಲಿ ನೈಸಗರ್ಿಕ ನೀರಿನ ಹರಿವು ಮತ್ತಷ್ಟು ಕಡಿಮೆಯಾಗುತ್ತದೆ. ಇದರಿಂದ, ಕಾರವಾರದ ಕಡೆಯಿಂದ ಮತ್ತಷ್ಟು ಸಮುದ್ರದ ಉಪ್ಪು ನೀರು ಕಾಳಿನದಿಯ ಒಳಪ್ರದೇಶಕ್ಕೆ ನುಗ್ಗುವುದು. ಇದು ಕಾಳಿ ನದಿ ತೀರದ ಎಲ್ಲ ಹಳ್ಳಿಗರ ಬದುಕಿಗೇ ಸಂಕಷ್ಟ ತಂದಿಡಬಲ್ಲದು. ಇಲ್ಲಿರುವ ಅಸಂಖ್ಯ ಬಗೆಯ ಸಸ್ಯ-ಪ್ರಾಣಿ ಜಲಚರ ಜೀವವೈವಿಧ್ಯಗಳ ಮೇಲೆ ಅದೆಂಥ ಘೋರ ಪರಿಣಾಮ ಬೀರುತ್ತಿದೆಯೋ ಯಾರೂ ಅರಿಯರು. ಇದರಿಂದ ಕಾಳಿನದಿ, ದೇವಭಾಗ ಅಳಿವೆ ಪ್ರದೇಶ ಮತ್ತು ಕಾರವಾರದ ಸಮುದ್ರ ನೀರು ವಿಷವಾಗುತ್ತಿದೆ. ಆದ್ದರಿಂದ , ಕಾಳಿ ನದಿ ಬರಿದು ಮಾಡುವ ಕೈಗಾ ಯೋಜನೆ ವಿಸ್ತರಣೆ ಖಂಡಿತಾ ಸರಿಯಲ್ಲ.
* ಈಗಾಗಲೇ ಅಣುವಿದ್ಯುತ್ತಿಗೆ ಬೇಕಾಗುವ ಯುರೇನಿಯಂ ಅಭಾವ ತಲೆದೋರಿದೆ. ಹೀಗಾಗಿ, ಹಿಂದೊಮ್ಮೆ ಪರೀಕ್ಷಾರ್ಥ ಗಣಿಗಾರಿಕೆ ಮಾಡಿದ್ದ ಯಲ್ಲಾಪುರದ ಅರೇಬೈಲ್ ಘಟ್ಟದಲ್ಲಿ ಮತ್ತೊಮ್ಮೆ ಯುರೇನಿಯಂ ಗಣಿಗಾರಿಕೆ ಆರಂಭವಾಗಿ, ಮತ್ತುಷ್ಟು ಪರಿಸರ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ಅಪಾಯಕಾರಿ ಯುರೇನಿಯಂ ಗಣಿಗಾರಿಕೆಗೆ ದಾರಿ ಮಾಡಿಕೊಡುವ ಈ ಹೊಸ ಅಣುವಿದ್ಯುತ್ ಘಟಕಗಳು ಬೇಡ.
* ಸ್ಥಾಪಿಸಲು ಉದ್ದೇಶಿಸಿರುವ ಐದು ಮತ್ತು ಆರನೇ ಘಟಕಗಳಿಂದ ಉತ್ಪಾದಿಸುವ ವಿದ್ಯುತ್ತನ್ನು ಸಾಗಣೆ ಮಾಡುವುದರ ಕುರಿತು ಯೋಜನಾ ವರದಿ ಮಾಹಿತಿ ನೀಡುವುದಿಲ್ಲ. ನಿಜಕ್ಕೂ ಇದಕ್ಕಾಗಿ ಹೊಸ ತಂತಿ ಮಾರ್ಗ ಹಾಕಬೇಕಾಗುತ್ತದೆ. ಇದಕ್ಕಾಗಿ, ಪಕ್ಕದ ಜೋಯ್ಡಾ, ಯಲ್ಲಾಪುರ, ಅಂಕೋಲಾ ತಾಲೂಕುಗಳಲ್ಲಿನ ದಟ್ಟ ಕಾಡಿನ ಲಕ್ಷಾಂತರ ಮರಕಡಿದು, ವಿದ್ಯುತ್ ಲೈನ್ ಹಾಕುವ ಕಾಮಗಾರಿ ಮಾಡಬೇಕಾಗುತ್ತದೆ. ಇಂಥ ಅರಣ್ಯ ನಾಶ ಮಾಡುವ ಹೊಸ ಅಣುವಿದ್ಯುತ್ ಘಟಕಗಳು ಬೇಡ.
* ಕಾಳಿನದಿ ಕಣಿವೆಯ ಮೇಲ್ಭಾಗದಲ್ಲಿ ಈಗಾಗಲೇ ಏಳು ದೊಡ್ಡ ಅಣೆಕಟ್ಟುಗಳಿದ್ದು, ಪರಿಸರವು ತುಂಬ ಸೂಕ್ಷ್ಮವಾಗಿದೆ. ಭವಿಷ್ಯದಲ್ಲೇನಾದರೂ ಅಣೆಕಟ್ಟು ಬಿರುಕುಬಿಟ್ಟರೆ ಅಥವಾ ಭೂ ಕುಸಿತವಾದರೆ ಕದ್ರಾ-ಕೈಗಾ ಪ್ರದೇಶದಲ್ಲಿಯೂ ಭೂಕುಸಿತ, ಭೂಕಂಪ, ಪ್ರವಾಹದ ಸಾಧ್ಯತೆಗಳಿವೆ. ಹೀಗಿರುವಾಗ, ಕೈಗಾ, ಕದ್ರಾ, ಕಾರವಾರದ ಜನರನ್ನು ಇನ್ನಷ್ಟು ಅಪಾಯದ ಅಂಚಿಗೆ ದೂಡುವ ಈ ಅಪಾಯಕಾರಿ ಯೋಜನೆಯನ್ನು ವಿಸ್ತರಿಸುವ ಈ ಹೊಸ ಅಣುವಿದ್ಯುತ್ ಘಟಕಗಳು ಖಂಡಿತಾ ಬೇಡ.
* ಅಣುವಿದ್ಯುತ್ ಉತ್ಪಾದನೆಯಿಂದ ಹೊರಬೀಳುವ ಅಣುತ್ಯಾಜ್ಯವು ಲಕ್ಷಾಂತರ ವರ್ಷಗಳವರೆಗೂ ವಿಕಿರಣವನ್ನು ಹೊರಸೂಸುತ್ತಿರುತ್ತವೆ. ಆದರೆ, ಇದೀಗ ಈ ಅಣು ತ್ಯಾಜ್ಯವನ್ನು ಎಷ್ಟು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ ಅಥವಾ ಸಂಗ್ರಹಿಸಿ ಇಡಲಾಗುತ್ತಿದೆಯೆಂದು ನಮಗಾರಿಗೂ ತಿಳಿದಿಲ್ಲ. ಇದು ಮಡಿಲಲ್ಲಿ ಕಟ್ಟಿಕೊಂಡಿರುವ ಬೆಂಕಿ ಕೆಂಡ. ಹೀಗಾಗಿ, ಕ್ಯಾನ್ಸರ್ ರೋಗ ತರುವ ಅಣುತ್ಯಾಜ್ಯವನ್ನು ಇನ್ನಷ್ಟು ಸೃಷ್ಟಿಸುವ ಕೈಗಾ ಅಣುವಿದ್ಯುತ್ ಯೋಜನೆ ವಿಸ್ತರಣೆ ಬೇಡ.
* ಕೈಗಾದಲ್ಲಿ ಈಗಾಗಲೇ ಸ್ಥಾಪಿಸಿರುವ ನಾಲ್ಕು ಅಣು ವಿದ್ಯತ್ ಘಟಕಗಳಿಂದ ಸಂಕಷ್ಟಗೊಳಗಾಗಿರುವ ಸ್ಥಳೀಯ ರೈತರು, ವನವಾಸಿಗಳು, ಮೀನುಗಾರರು ಇವರಾರಿಗೂ ಸೂಕ್ತವಾದ ಮತ್ತು ನ್ಯಾಯಯುತ ಪುನರ್ವಸತಿ ಆಗಿಲ್ಲ. ಹೀಗಿರುವಾಗ, ಪುನಃ ಇನ್ನೆರಡು ಘಟಕಗಳನ್ನು ಸ್ಥಾಪಿಸುವುದು ಬೇಡ.
* ಕೈಗಾ ಅಣುವಿದ್ಯುತ್ ಸ್ಥಾವರ ಆಡಳಿತವು ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುವುದಾದರೂ, ನಿಜಕ್ಕೂ ಅಷ್ಟು ಉದ್ಯೋಗಗಳೂ ಇಲ್ಲಿ ಲಭ್ಯವಿರುವುದಿಲ್ಲ. ಕೇವಲ ಕೆಲವು ಕೆಳಹಂತದ ದಿನಗೂಲಿ ಉದ್ಯೋಗ ಸಿಗಬಹುದಷ್ಟೆ. ಅದರಿಂದ ಸ್ಥಳೀಯರಿಗೆ ಯಾವ ಲಾಭವೂ ಇಲ್ಲ. ಆದ್ದರಿಂದ, ಪುನಃ ಇನ್ನೆರಡು ಘಟಕಗಳನ್ನು ಸ್ಥಾಪಿಸುವುದು ಬೇಡ.
* ಅಣುವಿದ್ಯುತ್ ಆಥರ್ಿಕವಾಗಿ ಲಾಭದಾಯಕವಲ್ಲ ಎಂದು ಈಗಾಗಲೇ ವಿಜ್ಞಾನಿಗಳು ತೋರಿಸಿದ್ದಾರೆ. ಇದರಿಂದಾಗಿ ಈ ವಿನಾಶಕಾರಿ ಯೋಜನೆಯ ವಿಸ್ತರಣೆ ಬೇಡ.
* ಅಲ್ಪವೆಚ್ಚದ ಮತ್ತು ಪರಿಸರಕ್ಕೆ ಪೂರಕವಾದ ಸೌರವಿದ್ಯುತ್ತಿನಂಥ ಬದಲಿ ಇಂಧನ ಮೂಲಗಳಿವೆ. ಅವನ್ನು ಸರ್ಕಾರ ವ್ಯಾಪಕವಾಗಿ ಕೈಗೊಳ್ಳುವುದರ ಮೂಲಕ ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶದ ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಿದೆ. 5-6 ನೇ ಕೈಗಾ ಘಟಕ ಕೈಬಿಟ್ಟು ಸೌರಪಾರ್ಕ್‌ನಂಥ ಯೋಜನೆಯನ್ನು ಸ್ಥಾಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.