ADVERTISEMENT

ಕಾರವಾರ– ಬಂದರುಗಳಲ್ಲಿ ಚಟುವಟಿಕೆ ಸ್ತಬ್ಧ: ಮೀನುಗಾರಿಕೆ ಕ್ಷೇತ್ರಕ್ಕೆ ಬರಗಾಲದ ಏಟು

ಗಣಪತಿ ಹೆಗಡೆ
Published 29 ಏಪ್ರಿಲ್ 2024, 6:09 IST
Last Updated 29 ಏಪ್ರಿಲ್ 2024, 6:09 IST
ಕಾರವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿ ಮೀನುಗಾರರು ಮುಂದಿನ ಅವಧಿಯ ಮೀನುಗಾರಿಕೆ ಚಟುವಟಿಕೆಗೆ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿರುವುದು
ಪ್ರಜಾವಾಣಿ ಚಿತ್ರ/ದಿಲೀಪ ರೇವಣಕರ್
ಕಾರವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿ ಮೀನುಗಾರರು ಮುಂದಿನ ಅವಧಿಯ ಮೀನುಗಾರಿಕೆ ಚಟುವಟಿಕೆಗೆ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿರುವುದು ಪ್ರಜಾವಾಣಿ ಚಿತ್ರ/ದಿಲೀಪ ರೇವಣಕರ್   

ಕಾರವಾರ: ಮಳೆಯ ಕೊರೆತೆಯಿಂದ ಕೃಷಿ ಕ್ಷೇತ್ರಕ್ಕೆ ಬರಗಾಲ ಆವರಿಸಿ ರೈತರು ಒಂದೆಡೆ ಸಂಕಟ ಪಡುತ್ತಿದ್ದರೆ, ಇನ್ನೊಂದೆಡೆ ವಿಶಾಲ ಅರಬ್ಬಿ ಸಮುದ್ರದಲ್ಲಿಯೂ ಮೀನು ಸಂತತಿಗೆ ಎದುರಾದ ಬರಗಾಲ ಮೀನುಗಾರರನ್ನು ಕಂಗೆಡುವಂತೆ ಮಾಡಿದೆ.

ಮಲೆನಾಡು ಮತ್ತು ಕರಾವಳಿ ಪ್ರದೇಶ ಒಳಗೊಂಡಿರುವ ಜಿಲ್ಲೆಯಲ್ಲಿ ಕೃಷಿಯಷ್ಟೇ ಮೀನುಗಾರಿಕೆ ಕ್ಷೇತ್ರಕ್ಕೂ ಪ್ರಾಧಾನ್ಯತೆ ಇದೆ. ಸುಮಾರು 28 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿವೆ. ಆದರೆ, ವರ್ಷದಿಂದ ವರ್ಷಕ್ಕೆ ಮೀನುಗಾರಿಕೆ ಕ್ಷೇತ್ರದಲ್ಲಿ ಮೀನಿಗೆ ಬರ ಉಂಟಾಗುತ್ತಿರುವುದು ಕಡಲ ಮಕ್ಕಳನ್ನು ಹೈರಾಣಾಗಿಸಿದೆ.

ಜಿಲ್ಲೆಯಲ್ಲಿ 1,113 ಪರ್ಸಿನ್, 4,027 ಟ್ರಾಲರ್ ದೋಣಿಗಳಿವೆ. ಏಳೂವರೆ ಸಾವಿರಕ್ಕಿಂತ ಹೆಚ್ಚು ಸಾಂಪ್ರದಾಯಿಕ ನಾಡದೋಣಿಗಳಿವೆ. ಅವುಗಳ ಪೈಕಿ ಶೇ 75 ರಷ್ಟು ದೋಣಿಗಳು ಸದ್ಯ ಮೀನುಗಾರಿಕೆ ಚಟುವಟಿಕೆ ಇಲ್ಲದೆ ಸ್ಥಗಿತಗೊಂಡಿವೆ. ಅದರಲ್ಲಿಯೂ ನೂರಾರು ಕುಟುಂಬಗಳಿಗೆ ಉದ್ಯೋಗ ಒದಗಿಸುತ್ತಿದ್ದ ಪರ್ಸಿನ್ ದೋಣಿಗಳು ಬಂದರಿನಲ್ಲೇ ಲಂಗರು ಹಾಕಿರುವುದು ಮೀನುಗಾರಿಕೆ ನಂಬಿ ದುಡಿಯುತ್ತಿದ್ದ ಕಾರ್ಮಿಕರ ಕೆಲಸ ಕಸಿಯುವಂತೆ ಮಾಡಿದೆ.

ADVERTISEMENT

ಜಿಲ್ಲೆಯ ಬೈತಕೋಲ, ಮುದಗಾ, ತದಡಿ, ಹೊನ್ನಾವರ, ಭಟ್ಕಳದ ಪಾವಿನಕುರ್ವಾ, ಅಂಕೋಲಾದ ಬೇಲೆಕೇರಿ ಸೇರಿದಂತೆ ಬಹುತೇಕ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳು ಕಳೆಗುಂದಿವೆ. ಪ್ರತಿ ವರ್ಷ ಮೇ ಅಂತ್ಯದವರೆಗೆ ಚಟುವಟಿಕೆಯಿಂದ ಕೂಡಿರುತ್ತಿದ್ದ ಬಂದರುಗಳಲ್ಲಿ ನೀರವ ಮೌನ ಆವರಿಸಿದೆ.

‘ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಬೆರಳೆಣಿಕೆಯಷ್ಟು ಟ್ರಾಲರ್ ದೋಣಿಗಳು ಮೀನು ಬೇಟೆ ನಡೆಸುತ್ತಿದ್ದು, ಪರ್ಸಿನ್ ದೋಣಿಗಳು ಬಂದರಿನಲ್ಲಿ ನಿಂತು ಹಲವು ದಿನ ಕಳೆದಿವೆ. ಬಂದರಿನಿಂದ ಸುಮಾರು ಎಂಟು ನಾಟಿಕಲ್ ಮೈಲಿ ದೂರದವರೆಗೆ ಸಿಗಬೇಕಿದ್ದ ಸಿಗಡಿ, ಲೆಪ್ಪೆ, ಸೇರಿದಂತೆ ಯಾವ ಬಗೆಯ ಮೀನುಗಳು ಇಲ್ಲ. ಒಮ್ಮೆ ದೋಣಿ ಒಯ್ದರೆ ಕಾರ್ಮಿಕರ ವೇತನ, ಡೀಸೆಲ್ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಕೇವಲ ₹2 ರಿಂದ 3 ಸಾವಿರ ಮೊತ್ತದ ಮೀನು ಸಿಗುತ್ತಿದೆ’ ಎಂದು ಟ್ರಾಲರ್ ದೋಣಿ ಮಾಲೀಕ ಬೈತಕೋಲದ ಶ್ರೀಧರ ಹರಿಕಂತ್ರ ಸಮಸ್ಯೆ ವಿವರಿಸಿದರು.

ಮೀನುಗಳ ಕೊರತೆಯ ಪರಿಣಾಮ ಮಾರುಕಟ್ಟೆಯಲ್ಲಿ ಮೀನುಗಳ ದರವೂ ದುಬಾರಿಯಾಗಿದೆ. ₹200ಕ್ಕೆ ಮೂರು ಬಂಗುಡೆ, ₹150ಕ್ಕೆ ಪಾಲು ಮೀನು ಮಾರಾಟವಾಗುತ್ತಿದೆ. ಇಸ್ವಾಣ, ತೋರಿ ಸೇರಿದಂತೆ ದೊಡ್ಡ ಮೀನುಗಳ ಲಭ್ಯತೆಯೂ ಇಲ್ಲದಂತಾಗಿದೆ.

ಮೀನುಗಾರಿಕೆ ಚಟುವಟಿಕೆ ಇಲ್ಲದ ಕಾರಣ ತದಡಿಯ ಮೀನುಗಾರಿಕೆ ಬಂದರಿನಲ್ಲಿ ಮೀನು ಸಾಗಾಟಕ್ಕೆ ಬಳಸುವ ಬುಟ್ಟಿ ಇತರ ಸರಂಜಾಮುಗಳನ್ನು ಮುಚ್ಚಿಡಲಾಗಿದೆ

ಕುಮಟಾ ಭಾಗದಲ್ಲಿಯೂ ಈಚೆಗೆ ಸಮುದ್ರ ಮೀನುಗಾರಿಕೆ ಕುಸಿಯುತ್ತಿದ್ದು, ಮೀನುಗಾರರು ಜೀವನ ನಡೆಸುವುದು ಕಷ್ಟಕರವಾಗಿದೆ. ಮೀನು ಕೊರತೆಯಿಂದ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವವರಿಗಿಂತ ಮೀನು ಶುಚಿಗೊಳಿಸುವವರೇ ಹೆಚ್ಚಾಗಿ ಕಾಣುತ್ತಿದ್ದಾರೆ.

ಮೀನುಗಾರಿಕೆ ಚಟುವಟಿಕೆ ಇಲ್ಲದ ಪರಿಣಾಮ ಬಿಕೋ ಎನ್ನುತ್ತಿರುವ ತದಡಿಯ ಮೀನುಗಾರಿಕೆ ಬಂದರಿನ ಶೆಡ್

‘ದೀರ್ಘ ಕಾಲದಿಂದ ವಾತಾವರಣದಲ್ಲಿ ಉಂಟಾಗುತ್ತಿರುವ ಮಾಲಿನ್ಯ ಮೀನುಗಾರಿಕೆ ಕುಸಿಯಲು ಕಾರಣವಾಗಿರಬಹುದು’ ಎಂದು ಕುಮಟಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಲ ಅಭಿಪ್ರಾಯಪಡುತ್ತಾರೆ.

ಹೊನ್ನಾವರದ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು

‘ಸಮುದ್ರ ಮೇಲ್ಮೈ ನೀರಿನ ಮಟ್ಟ ಹೆಚ್ಚು ಬಿಸಿಯಾದರೆ ಆಮ್ಲಜನಕದ ಕೊರತೆಯುಂಟಾಗುತ್ತದೆ. ಆಮ್ಲಜನಕ ಪಡೆಯಲು ಪಡೆಯಲು ಮೀನುಗಳು ಇನ್ನಷ್ಟು ಆಳಕ್ಕೆ ಹೋಗುತ್ತವೆ. ಆಗ ಮೀನುಗಾರರಿಗೆ ಮೀನು ಸಿಗುವುದಿಲ್ಲ. ಇದೇ ಸಮಯದಲ್ಲಿ ಸಂತಾನೋತ್ಪತ್ತಿ ನಡೆಸುವ ಎಷ್ಟೋ ಜಾತಿಯ ಮೀನುಗಳಿಗೂ ಇಂಥ ವಾತಾವರಣ ಹಲವು ವರ್ಷಗಳಿಂದ ಅಡ್ಡಿಯಾಗುತ್ತಿದೆ. ಸಮುದ್ರದಲ್ಲಿ ಬದಲಾವಣೆಯಾಗುವ ವಾತಾವರಣವನ್ನು ಚಂದ್ರನ ಸುತ್ತ ಉಂಟಾಗುವ ಕಲೆಗಳಿಂದ ಮೀನುಗಾರರು ಗುರುತಿಸುತ್ತಾರೆ’ ಎಂದರು.

ಭಟ್ಕಳ ತಾಲ್ಲೂಕಿನಲ್ಲಿ ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ಭೀಕರ ಮತ್ಸ್ಯಕ್ಷಾಮ ತಲೆದೋರಿದ್ದು, ಮೀನುಗಾರಿಕೆ ಇಲ್ಲದೇ ಕಂಗೆಟ್ಟು ಹೋಗಿದ್ದಾರೆ. ಕೋಟಿ ಕೋಟಿ ಬಂಡವಾಳ ಹಾಕಿ ಯಾಂತ್ರಿಕೃತ ದೋಣಿ ನಡೆಸುವವರು ಅತ್ತ ಮೀನುಗಾರಿಕೆಯೂ ಇಲ್ಲದೇ ಇತ್ತ ಕೆಲಸಗರರಿಗೆ ಸಂಬಳ ನೀಡಲಾರದೇ ಕೈಕಟ್ಟಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.

ಕಾರವಾರದ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾದು ಕುಳಿತಿರುವ ಮೀನು ಮಾರಾಟಗಾರರು

‘ಪ್ರತಿ ವರ್ಷ ಜೂನ್ 1ರಿಂದ ಜುಲೈ 30 ರವರೆಗೆ ಮೀನುಗಾರಿಕೆ ನಡೆಸಲು ಕೇಂದ್ರ ಸರ್ಕಾರ ನಿಷೇಧ ಹೇರುತ್ತದೆ. ಆ ಸಮಯದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾದರೇ ಮೀನಿನ ಸಂತಾನೋತ್ಪತ್ತಿಗೆ ಅನುಕೂಲವಾಗುತ್ತದೆ. ಮುಂಗಾರು ಆರಂಭದಲ್ಲಿಯೇ ಕೈಕೊಟ್ಟರೆ ಮೀನುಗಾರಿಕೆ ನಿಷೇಧದ ಸಮಯದಲ್ಲಿ ಸಂತಾನೋತ್ಪತಿ ಕಾರ್ಯ ನಡೆಯುವುದಿಲ್ಲ’ ಎನ್ನುತ್ತಾರೆ ಭಟ್ಕಳ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರವಿ.

ಪೂರಕ ಮಾಹಿತಿ: ಎಂ.ಜಿ.ನಾಯ್ಕ, ಮೋಹನ ನಾಯ್ಕ, ಎಂ.ಜಿ.ಹೆಗಡೆ, ರವಿ ಸೂರಿ.

ಕೃಷಿ ಕ್ಷೇತ್ರಕ್ಕೆ ಬರ ಪರಿಹಾರ ನೀಡಿದಂತೆಯೇ ಮೀನುಗಾರಿಕೆ ಕ್ಷೇತ್ರವನ್ನೂ ಪರಿಗಣಿಸಿ ಮೀನುಗಾರರಿಗೆ ಪರಿಹಾರ ಕೊಡಲು ಸರ್ಕಾರ ನಿರ್ಣಯಿಸಲಿ.
ರಾಜು ತಾಂಡೇಲ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ
ಮೀನು ಸಂಪನ್ಮೂಲದ ಮೇಲಿನ ಅತಿಯಾದ ಒತ್ತಡ ಬೆಳಕಿನ ಮೀನುಗಾರಿಕೆಯ ಜತೆಗೆ ಸಣ್ಣ ಬಲೆಗಳನ್ನು ಬಳಸಿ ಮೀನುಗಾರಿಕೆ ನಡೆಸುವ ಪ್ರಕ್ರಿಯೆಗಳಿಂದ ಮೀನಿನ ಸಂತತಿ ಕ್ಷೀಣಿಸಿದೆ.
ಜೆ.ಎಲ್.ರಾಠೋಡ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ
ಮೀನುಗಾರಿಕೆ ದೋಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೀನುಗಾರಿಕೆ ಹೊರತಾಗಿ ಬೇರೆ ಕೆಲಸ ಇಲ್ಲ. ಮತ್ಸ್ಯಕ್ಷಾಮದಿಂದ ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ಇದ್ದು ಸರ್ಕಾರ ಅವರ ಸಹಾಯಕ್ಕೆ ಧಾವಿಸಬೇಕು.
ವಿನಾಯಕ ಹರಿಕಂತ್ರ ಮೀನುಗಾರರ ಯುವ ಸಂಘರ್ಷ ಸಮಿತಿ ಅಧ್ಯಕ್ಷ
ಎರಡು ತಿಂಗಳ ಹಿಂದೆ ಮೀನಿನ ಬರ ಕಂಡು ಬಂದಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಆದರೂ ಮೊದಲಿನಂತೆ ಮೀನು ಸಿಗುತ್ತಿಲ್ಲ.
ರಾಜೇಶ ತಾಂಡೇಲ ಹೊನ್ನಾವರ ಮೀನುಗಾರ ಮುಖಂಡ

ನಿಷೇಧದ ಅವಧಿ ವಿಸ್ತರಣೆಗೆ ಆಗ್ರಹ

‘ಮೀನುಗಳ ಸಂತಾನೋತ್ಪತ್ತಿಗೆ ಮೀನುಗಾರರು ಅವಕಾಶ ಮಾಡಿಕೊಟ್ಟರೆ ಮಾತ್ರ ಮೀನು ಸಿಗಲು ಸಾಧ್ಯ. ಅದಕ್ಕೆ ನಾವೇ ಅವಕಾಶ ಮಾಡಿಕೊಡುತ್ತಿಲ್ಲ. ಯಾಂತ್ರಿಕೃತ ದೋಣಿಗಳು ಆಳ ಸಮುದ್ರದಲ್ಲಿ ಚಿಕ್ಕ ಚಿಕ್ಕ ಮರಿ ಮೀನು ಸಹಿತ ಮೀನುಗಾರಿಕೆ ನಡೆಸಿ ಸಮುದ್ರ ಬರಡು ಮಾಡಿದ್ದಾರೆ. ಕೇಂದ್ರ ಸರ್ಕಾರ ಮೀನುಗಾರಿಕೆ ನಿಷೇಧದ ಅವಧಿಯನ್ನು ಕನಿಷ್ಠ ಮೂರು ತಿಂಗಳಿಗೆ ವಿಸ್ತರಿಸಬೇಕು. ಹಿಂದಿನ ಕಾಲದಲ್ಲಿ ಆಗಸ್ಟ್‌ ತಿಂಗಳ ಕೊನೆಯ ತನಕ ಮೀನುಗಾರರ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುತ್ತಿದ್ದರು. ಇದರಿಂದ ಮತ್ಸ್ಯಕ್ಷಾಮ ಕಾಡುತ್ತಿರಲಿಲ್ಲ. ಈಗ ಕೆಲವೆಡೆ ನಿಷೇಧದ ಅವಧಿಯಲ್ಲಿಯೂ ಮೀನುಗಾರಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮೀನುಗಾರರ ಹಿತದೃಷ್ಟಿಯಿಂದ ನಿಷೇಧದ ಅವಧಿಯನ್ನು ಆಗಸ್ಟ್ ವರೆಗೆ ವಿಸ್ತರಿಸಬೇಕು’ ಎಂದು ಭಟ್ಕಳದ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ವೆಂಕಟ್ರಮಣ ಮೊಗೇರ ಒತ್ತಾಯಿಸುತ್ತಾರೆ.

ತವರಿಗೆ ಮರಳಿದ ಕಾರ್ಮಿಕರು
ಪರ್ಸಿನ್ ದೋಣಿಗಳಲ್ಲಿ ಸರಾಸರಿ 20 ರಿಂದ 25 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಈ ಪೈಕಿ ಬಹುತೇಕ ಮಂದಿ ಹೊರರಾಜ್ಯದವರೇ ಆಗಿದ್ದಾರೆ. ಒರಿಸ್ಸಾ ಝಾರ್ಖಂಡ್ ಛತ್ತೀಸಗಡ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ವಲಸೆ ಬರುವ ಕಾರ್ಮಿಕರು ಬೈತಕೋಲ ಮುದಗಾ ಹೊನ್ನಾವರ ಸೇರಿ ಹಲವೆಡೆ ಕಾರ್ಯನಿರ್ವಹಿಸುತ್ತಾರೆ. ಆಗಸ್ಟ್ ವೇಳೆಗೆ ಬರುವ ಅವರು ಮೇ ತಿಂಗಳ ಅಂತ್ಯದವರೆಗೆ ದುಡಿದು ಊರಿಗೆ ಮರಳುತ್ತಿದ್ದರು. ಈ ಬಾರಿ ಮಾರ್ಚ್ ಅಂತ್ಯಕ್ಕೆ ಬಹುತೇಕ ಕಾರ್ಮಿಕರು ತವರಿಗೆ ಮರಳಿದ್ದಾರೆ. ಕಾರ್ಮಿಕರಿಂದ ಗಿಜಿಗುಡುತ್ತಿದ್ದ ಬಂದರುಗಳಲ್ಲಿ ಮೌನ ವಾತಾವರಣ ಮೂಡಿದೆ. ‘ಮೀನುಗಾರಿಕೆ ಚಟುವಟಿಕೆ ಇದ್ದರೆ ಕಾರ್ಮಿಕರ ವೇತನ ಒದಗಿಸಲು ಸಾಧ್ಯವಿದೆ. ಚಟುವಟಿಕೆಯೇ ಇಲ್ಲದೆ ಲಕ್ಷಾಂತರ ರೂಪಾಯಿ ವೇತನ ನೀಡುವುದು ದೋಣಿಗಳ ಮಾಲೀಕರಿಗೂ ಕಷ್ಟ. ಈ ಬಾರಿ ಮೀನುಗಾರಿಕೆಯೇ ಇಲ್ಲದ ಪರಿಣಾಮ ಅವಧಿಗೆ ಮೊದಲೇ ಕಾರ್ಮಿಕರು ಊರಿಗೆ ಮರಳಿದ್ದಾರೆ’ ಎಂದು ರಾಜು ತಾಂಡೇಲ ಸಮಸ್ಯೆ ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.