ಸಿದ್ದಾಪುರ: ‘ಕೇವಲ ಉಚಿತವಾಗಿ ನೀಡುವಂತಹ ವಸ್ತುಗಳ ಆಸೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರಂತದ ಸಂಗತಿ. ಕರ್ನಾಟಕ ಸರ್ಕಾರದ ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಾಲ್ಲೂಕಿನ ಬಿಳಗಿಯಲ್ಲಿ ನಮೋ ಬ್ರಿಗೇಡ್ ಸಿದ್ದಾಪುರ ಗುರುವಾರ ಹಮ್ಮಿಕೊಂಡ ನಮೋ ಭಾರತ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಉಪಯೋಗಿಸಿ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಜನರನ್ನು ಜಾಗೃತಗೊಳಿಸಿ ರಾಷ್ಟ್ರದಲ್ಲಿ ಮೋದಿ ಸರ್ಕಾರದ ಮೊದಲಿನ ಭಾರತಕ್ಕೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನು ಜನತೆಗೆ ಮನದಟ್ಟು ಮಾಡಲು ನಮೋ ಬ್ರಿಗೇಡ್ ಕೆಲಸ ಮಾಡುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ರಾಮ ಮಂದಿರ ಕರ ಸೇವಕರಾದ ಲಕ್ಷ್ಮಣ ಲೋಬಿ, ಶ್ರೀಧರ ಬಿಕ್ಕಳಸೆ, ಗೋಪಾಲ ತಂಗಾರುಮನೆ, ಅನಂತ ಊರತೋಟ, ಹಳಿಯಾಳದ ಉಮೇಶ ಬಸಲಿಂಗಪ್ಪ ಬೊಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಬಿಳಗಿಯ ಶ್ರೀರಾಮ ಅಕ್ಕಿ ಗಿರಣಿ ಮಾಲೀಕ ದೇವದಾಸ್ ಪೈ ಉಪಸ್ಥಿತರಿದ್ದರು.
ಕೇಶವ್ ಮೊಗೇರ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಘಟಕದ ರೈತ ಮೋರ್ಚಾ ಉಪಾಧ್ಯಕ್ಷ ಆದರ್ಶ ಪೈ ಬಿಳಗಿ ಸ್ವಾಗತಿಸಿದರು. ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ ಆಲ್ಮನೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.