ಕಾರವಾರ: ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದ ದೇಸಿ ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರದಲ್ಲಿ ಭಾರಿ ಏರಿಕೆ ಆಗಿದೆ. ನಗರದ ಕೆಲವು ಸೂಪರ್ ಮಾರುಕಟ್ಟೆಗಳಲ್ಲಿ ಸಂಗ್ರಹವೂ ಕಡಿಮೆಯಾಗಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ.
ಯುದ್ಧ ಆರಂಭಕ್ಕೂ ಮೊದಲು ಕಾರವಾರದಲ್ಲಿ ಖಾದ್ಯ ತೈಲದ ದರವು ಪ್ರತಿ ಕೆ.ಜಿ.ಗೆ ₹ 140ರ ಆಸುಪಾಸಿನಲ್ಲಿತ್ತು. ಎಣ್ಣೆ ತಯಾರಕ ಕಂಪನಿಯಿಂದ ಕಂಪನಿಗೆ ₹ 10– ₹ 15ಗಳ ಅಂತರವಿತ್ತು. ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರುಕಟ್ಟೆಗಳಲ್ಲಿ ಬಹಳ ವ್ಯತ್ಯಾಸವಿರಲಿಲ್ಲ. ಆದರೆ, ಯುದ್ಧ ಆರಂಭವಾದ ಬಳಿಕ ಕೆಲವೇ ದಿನಗಳಲ್ಲಿ ₹ 40– ₹ 50ರ ಏರಿಕೆಯಾಗಿದೆ.
‘ಸೂರ್ಯಕಾಂತಿ ಎಣ್ಣೆಯ ಪ್ಯಾಕೇಟ್ ಮೇಲೆ ಗರಿಷ್ಠ ಮಾರಾಟ ದರವು ₹ 180ರಿಂದ ₹ 190 ರಷ್ಟು ಇದೆ. ಮೊದಲು ನಾವು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ₹ 140ರಿಂದ ₹ 150ರಂತೆ ಮಾರಾಟ ಮಾಡುತ್ತಿದ್ದೆವು. ಆದರೆ, ಈಗ ನಮಗೆ ಬಹುತೇಕ ಗರಿಷ್ಠ ದರದಲ್ಲೇ ಪೂರೈಕೆಯಾಗುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಪ್ಯಾಕೇಟ್ ಮೇಲೆ ಮುದ್ರಿತ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ’ ಎಂದು ನಗರದ ವರ್ತಕ ಮಂಜುನಾಥ ಹೇಳುತ್ತಾರೆ.
ಸಂಗ್ರಹವಿಲ್ಲ:ನಗರದ ಕೆಲವು ಪ್ರಸಿದ್ಧ ಸೂಪರ್ ಮಾರುಕಟ್ಟೆಗಳಲ್ಲಿ ಸೂರ್ಯಕಾಂತಿ ತೈಲದ ಸಂಗ್ರಹವಿಲ್ಲ. ಹಾಗಾಗಿ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ತಾಳೆ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ.
‘ನಮ್ಮ ಮಳಿಗೆಗೆ ಖಾದ್ಯ ತೈಲವು ಮುಖ್ಯವಾಗಿ ಹುಬ್ಬಳ್ಳಿಯಿಂದ ಪೂರೈಕೆಯಾಗುತ್ತದೆ. ಅಲ್ಲಿ ದೊಡ್ಡ ದೊಡ್ಡ ದಾಸ್ತಾನು ಮಳಿಗೆಗಳು ಪರಿಸ್ಥಿತಿಯ ಲಾಭ ಪಡೆಯುತ್ತಿವೆ. ಒಂದೋ ಪೂರೈಕೆ ಮಾಡುವುದಿಲ್ಲ, ಮಾಡಿದರೂ ಬೇಡಿಕೆಯಷ್ಟು ಕೊಡುವುದಿಲ್ಲ. ಯುದ್ಧಕ್ಕೂ ಮೊದಲು ಪ್ಯಾಕ್ ಮಾಡಿದ್ದಾದರೂ ನಮೂದಿತ, ಹೊಸ ದರದಲ್ಲೇ ಕೊಡುತ್ತಿದ್ದಾರೆ’ ಎಂದು ಮಳಿಗೆಯೊಂದರ ಉಸ್ತುವಾರಿ ಸಿಬ್ಬಂದಿ ದೂರುತ್ತಾರೆ.
ಸೂರ್ಯಕಾಂತಿ ಬೀಜದ ಬೆಳೆಯನ್ನು ಉಕ್ರೇನ್ ಮತ್ತು ರಷ್ಯಾ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ಮಾಡಲಾಗುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಈಗ ಆ ಎರಡು ದೇಶಗಳಲ್ಲಿ ಯುದ್ಧ ಮುಂದುವರಿದಿರುವ ಕಾರಣ, ಖಾದ್ಯತೈಲದ ಪೂರೈಕೆಗೆ ತೊಡಕಾಗಿದೆ ಎಂದು ವ್ಯಾಪಾರಿಗಳು ಪ್ರತಿಪಾದಿಸುತ್ತಾರೆ.
‘ದರ ಏರಿಕೆ ನಿಯಂತ್ರಿಸಿ’:‘ಕೋವಿಡ್ ಕಾರಣದಿಂದ ಕುಸಿದಿರುವ ಆರ್ಥಿಕ ಪರಿಸ್ಥಿತಿಯು ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ದಿನಬಳಕೆಯ ವಸ್ತುಗಳ ದರವೂ ಭಾರಿ ಏರಿಕೆಯಾಗುತ್ತಿದೆ. ಇದರಿಂದ ಎಲ್ಲರಿಗೂ ಹೊರೆಯಾಗುತ್ತಿದೆ. ದರ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗೃಹಿಣಿ ಶುಭಲತಾ ಹೇಳುತ್ತಾರೆ.
‘ಅಡುಗೆ ಎಣ್ಣೆ ಇಲ್ಲದೇ ನಿತ್ಯದ ಊಟೋಪಹಾರ ಸಿದ್ಧಪಡಿಸಲಾಗುವುದಿಲ್ಲ. ಕೆಲವೇ ದಿನಗಳ ಅಂತರದಲ್ಲಿ ದರವು ಭಾರಿ ಏರಿಕೆಯಾಗಿದೆ. ಯುದ್ಧದಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆಯ ಮೇಲೆ ನಿಜವಾಗಿಯೂ ಪರಿಣಾಮ ಆಗಿದೆಯೋ ಅಥವಾ ಈ ಸಂದರ್ಭವನ್ನು ಹಾಗೊಂದು ವದಂತಿ ಬಿತ್ತಲು ಬಳಸಲಾಗುತ್ತಿದೆಯೋ ತಿಳಿಯುತ್ತಿಲ್ಲ’ ಎಂದು ಅವರು ಅನುಮಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.