ಹೊನ್ನಾವರ: ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ವರ್ಷಗಳೇ ಉರುಳಿವೆ. ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದರೂ ಕಾಲೇಜಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ ಎಂಬ ಕೊರಗು ಉಳಿದುಕೊಂಡಿದೆ.
ಕಾಲೇಜಿಗೆಂದು ನೀಡಲಾಗಿರುವ 2.10 ಎಕರೆ ಜಾಗದ ಸುತ್ತ ಆವರಣಗೋಡೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಕಾಲೇಜಿನಲ್ಲಿ 21 ತರಗತಿ ಕೋಣೆಗಳಿದೆ. ಬಿ.ಎ, ಬಿ.ಎಸ್‌ಸಿ, ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ ಸ್ನಾತಕ ಕೋರ್ಸ್‌ಗಳ ಜತೆಗೆ ಎಂ.ಕಾಂ, ಎಂ.ಎ(ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ) ಸ್ನಾತಕೋತ್ತರ ಕೋರ್ಸ್‌ಗಳಿವೆ.
ಸ್ನಾತಕ ತರಗತಿಗಳಲ್ಲಿ 1,054 ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಕೇವಲ 32 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಎಂ.ಎ ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯಗಳಿಗೆ ಕೆಲ ವರ್ಷಗಳಿಂದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. 2022–23ರಲ್ಲಿ ಸ್ನಾತಕ ತರಗತಿಗಳಿಗೆ ಇದ್ದಿದ್ದ 1,156 ವಿದ್ಯಾಥಿಗಳ ಸಂಖ್ಯೆ 2023–24ನೇ ಸಾಲಿನಲ್ಲಿ 1,054ಕ್ಕೆ ಇಳಿದಿದೆ.
‘ಕಳೆದ ಐದು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕನಿಷ್ಠ 500ರಷ್ಟು ಇಳಿಕೆಯಾಗಿದೆ’ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರೋರ್ವರು ತಿಳಿಸಿದರು.
ಗ್ರಂಥಪಾಲಕ, ದೈಹಿಕ ಶಿಕ್ಷಣ ನಿರ್ದೇಶಕ ಸೇರಿದಂತೆ 19 ಖಾಯಂ ಬೋಧಕ ಸಿಬ್ಬಂದಿ ಹಾಗೂ 35 ಅತಿಥಿ ಉಪನ್ಯಾಸಕರಿದ್ದಾರೆ. ಪ್ರಾಚಾರ್ಯ ಹುದ್ದೆ ಸೇರಿದಂತೆ 7 ಬೋಧಕ ಹುದ್ದೆಗಳು ಖಾಲಿ ಇವೆ. ರಸಾಯನಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಭಾಗಗಳಿಗೆ ಮಂಜೂರಾದ ಹುದ್ದೆಗಳಿಲ್ಲ. ನಿಯೋಜನೆ ಹಾಗೂ ಇತರ ಕಾರಣಗಳಿಗಾಗಿ ಉಂಟಾಗುವ ಕಾಯಂ ಬೋಧಕರ ಅಲಭ್ಯತೆ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರ ಪ್ರತಿಭಟನೆ ಹಾಗೂ ಕಾಲಕಾಲಕ್ಕೆ ಅವರ ನೇಮಕಾತಿಯಲ್ಲಾಗುವ ವಿಳಂಬ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿವೆ’ ಎಂದು ವಿದ್ಯಾರ್ಥಿ ಪಾಲಕರು ಅಳಲು ತೋಡಿಕೊಳ್ಳುತ್ತಾರೆ.
ಗಣಕೀಕೃತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ದೊಡ್ಡ ಸಭಾಂಗಣ, ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿವೆ. ಕೆಎಸ್‌ಒಯು ಬಾಹ್ಯ ಪರೀಕ್ಷಾ ಕೇಂದ್ರ ಕಳೆದ ವರ್ಷದಿಂದ ಆರಂಭಗೊಂಡಿದೆ.
₹92.87 ಲಕ್ಷ ಯೋಜನಾ ವೆಚ್ಚದೊಂದಿಗೆ 2013ರಲ್ಲಿ ಆರಂಭಗೊಂಡ ಪರಿಶಿಷ್ಟ ಜಾತಿ, ಪಂಗಡದ ವಸತಿ ನಿಲಯದ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಅಧಿಕೃತವಾಗಿ ಕಾಲೇಜಿಗೆ ಹಸ್ತಾಂತರಗೊಂಡಿಲ್ಲ. ಲೆಕ್ಕಕ್ಕೆ 75 ಕಂಪ್ಯೂಟರ್ ಇವೆಯಾದರೂ ಕೇವಲ 35 ಕಂಪ್ಯೂಟರ್‌ಗಳು ಮಾತ್ರ ಸುಸ್ಥಿಯಲ್ಲಿವೆ. ಆಟದ ಮೈದಾನದ ಕೊರತೆ ವಿದ್ಯಾರ್ಥಿಗಳನ್ನು ಹೆಚ್ಚು ಕಾಡುತ್ತಿದೆ.
ಎನ್.ಇ.ಪಿ.ಪಠ್ಯ ಜಾರಿಯ ನಂತರ ಕಲಾ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಗ್ರಂಥಾಲಯ ಕೂಡ ಕಿರಿದಾಗಿದೆ.–ನಸ್ರುಲ್ಲಾ ಎಂ.ಖಾನ್, ಪ್ರಭಾರ ಪ್ರಾಚಾರ್ಯ
ಆಟದ ಮೈದಾನ ಉತ್ಸವ ಸಮಿತಿಗೆ!
ಆಟದ ಮೈದಾನವಾಗಿ ಉಪಯೋಗಿಸಿಕೊಳ್ಳಬಹುದಾಗಿದ್ದ ಕಾಲೇಜಿನ ಪಕ್ಕದಲ್ಲೇ ಇರುವ ಸರ್ಕಾರಿ ಜಾಗವನ್ನು ಧಾರ್ಮಿಕ ಪಂಗಡವೊಂದರ ಉತ್ಸವ ಸಮಿತಿಗೆ ಕಟ್ಟಡ ನಿರ್ಮಿಸಿಕೊಳ್ಳಲು ಹಾಗೂ ಇತರ ಉದ್ದೇಶಗಳಿಗೆ ಬಿಟ್ಟಿರುವ ಸ್ಥಳೀಯ ಜನಪ್ರತಿನಿಧಿಗಳ ರಾಜಕೀಯ ಕ್ರಮದ ಕುರಿತು ಕಾಲೇಜಿನ ಸಿಬ್ಬಂದಿ ಹಾಗೂ ಕೆಲ ಪ್ರಜ್ಞಾವಂತ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.