ADVERTISEMENT

ಚುರುಕು ಮುಂಗಾರು ಪರಿಣಾಮ: ಭತ್ತ ಕೃಷಿಯತ್ತ ರೈತರ ಚಿತ್ತ

ರವಿ ಸೂರಿ
Published 27 ಜೂನ್ 2024, 5:20 IST
Last Updated 27 ಜೂನ್ 2024, 5:20 IST
ಗೋಕರ್ಣ ಹೋಬಳಿ ವ್ಯಾಪ್ತಿಯಲ್ಲಿ ಬತ್ತ ಬೆಳೆಯಲು ಭೂಮಿ ಹದ ಮಾಡುತ್ತಿರುವ ರೈತ. 
ಗೋಕರ್ಣ ಹೋಬಳಿ ವ್ಯಾಪ್ತಿಯಲ್ಲಿ ಬತ್ತ ಬೆಳೆಯಲು ಭೂಮಿ ಹದ ಮಾಡುತ್ತಿರುವ ರೈತ.    

ಗೋಕರ್ಣ: ಕಳೆದ ವರ್ಷ ಈರುಳ್ಳಿ, ಕಲ್ಲಂಗಡಿ, ಗೆಣಸು ಬೆಳೆಗೆ ನಿರೀಕ್ಷಿಸಿದ ರೀತಿಯಲ್ಲಿ ಪ್ರತಿಫಲ ಸಿಗದೇ ನಷ್ಟ ಅನುಭವಿಸಿದ್ದ ರೈತರು, ಅದನ್ನೆಲ್ಲ ಮರೆತು ಈಗ ಭತ್ತದ ಬೀಜ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

ಕೆಲ ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಭೂಮಿ ಹದ ಮಾಡುವತ್ತ ನಿರತರಾಗಿದ್ದಾರೆ. ಗೋಕರ್ಣ ಹೋಬಳಿಯಲ್ಲಿ ಹೆಚ್ಚಿನ ರೈತರು ತುಂಡು ಕೃಷಿ ಭೂಮಿಯ ಹಿಡುವಳಿದಾರರಾಗಿದ್ದಾರೆ. ಈ ಭಾಗದಲ್ಲಿ ಒಟ್ಟೂ 830 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಬೆಳೆ ಮಾಡಲಾಗುತ್ತಿದೆ.

‘ಪ್ರತಿ ವರ್ಷ ಸುಮಾರು 400 ಕ್ವಿಂಟಲ್ ಬೀಜ ವಿತರಿಸಲಾಗುತ್ತಿದೆ. ಅದರಲ್ಲಿ ಜಯಾ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದ್ದು ಪ್ರತಿ ವರ್ಷ ಸುಮಾರು 350 ಕ್ವಿಂಟಲ್ ಬೀಜ ವಿತರಿಸಲಾಗುತ್ತದೆ. 1001–ಎಮ್.ಟಿ.ಯು ತಳಿಯ ಬೀಜ 40 ಕ್ವಿಂಟಲ್ ಹಾಗೂ ಹೈಬ್ರೀಡ್ ಬೀಜ ನೀಡಲಾಗುತ್ತಿದೆ’ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

‘ರೈತರ ಬೇಡಿಕೆಗೆ ತಕ್ಕಂತೆ ಜಯಾ ಬೀಜದ ಪೂರೈಕೆ ಇಲ್ಲವಾಗಿದೆ. ಬೇರೆ ತಳಿಯ ಬೀಜದ ಪೂರೈಕೆಯಿದ್ದರೂ ರೈತರು ಮಾತ್ರ ಜಯಾ ಬೀಜಕ್ಕೆ ಬೇಡಿಕೆಯಿಡುತ್ತಿದ್ದಾರೆ’ ಎಂದು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.

‘ಕೆಲವು ರೈತರು ಮೊದಲು ಹಾಕಿದ ಬೀಜ, ಒಮ್ಮೆಯೇ ಹೆಚ್ಚಿನ ಮಳೆಯಾದ ಕಾರಣ ನೀರಿನಲ್ಲಿ ಮುಳುಗಿ ನಷ್ಟವಾಗಿದೆ. ಈಗ ಮತ್ತೆ ಜಯಾ ಬೀಜಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಿಸಾನ್ ಪೋರ್ಟಲ್ ಮುಖಾಂತರ ರೈತರಿಗೆ ಬೀಜ ವಿತರಿಸಲಾಗುತ್ತಿದೆ. ಆಧಾರ ನೋಂದಣಿ ಮಾಡಿ ಬೀಜ ನೀಡಲಾಗುತ್ತಿದೆ. ರೈತರು ಆಧಾರ ಕಾರ್ಡ್ ದಾಖಲೆಗೆ ನೀಡುವುದು ಅಗತ್ಯವಾಗಿದೆ’ ಎಂದಿದ್ದಾರೆ.

‘ಈ ಭಾಗದಲ್ಲಿ ಮಿಷನ್ ನಾಟಿಗೆ ರೈತರು ಹೆಚ್ಚಿನ ಒಲವು ತೋರಿಸಿದ್ದು, ಕೆಲವೇ ಕೆಲವು ರೈತರು ಸಸಿ ನಾಟಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಯಾಂತ್ರೀಕೃತ ನಾಟಿಯಲ್ಲಿ ಕೆಲಸವೂ ಕಡಿಮೆ, ಖರ್ಚು ಕಡಿಮೆ, ಕಳೆಯೂ ಕಡಿಮೆ, ಭತ್ತದ ಇಳುವರಿ ಜಾಸ್ತಿ ದೊರಕುತ್ತಿದ್ದು ಬಹು ಭಾಗ ಜನ ಯಂತ್ರಗಳನ್ನೇ ಬಳಸುತ್ತಿದ್ದಾರೆ’ ಎನ್ನುತ್ತಾರೆ ದಾಂಡೇಭಾಗದ ರೈತ ಲಕ್ಷ್ಮೀಶ ಗೌಡ.

‘ಗೋಕರ್ಣ ಭಾಗದಲ್ಲಿ ಜಯಾ ಬೀಜ ಉತ್ತಮವಾಗಿ ಫಸಲು ಬರುತ್ತದೆ. ಗೆಣಸು, ಈರುಳ್ಳಿ, ಕಲ್ಲಂಗಡಿ ಬೆಳೆಯಿಂದ ನಷ್ಟ ಅನುಭವಿಸಿದ್ದೇವೆ. ಈಗ ಭತ್ತದ ಬೆಳೆಯಾದರೂ ಹೆಚ್ಚಿನ ಲಾಭ ತರಲಿ ಎಂಬ ಆಶಯ ಹೊಂದಿದ್ದೇವೆ’ ಎನ್ನುತ್ತಾರೆ ಅವರು.

ಗೋಕರ್ಣದ ರುದ್ರಪಾದದ ಬಳಿ ಭತ್ತದ ಬೆಳೆಗೆ ಭೂಮಿ ಹದ ಮಾಡಿರುವುದು.
ಬೀಜ ವಿತರಣೆ ಪ್ರಾರಂಭವಾಗಿದೆ. ಜಯಾ ತಳಿಯ ಬೀಜಕ್ಕೇ ಹೆಚ್ಚಿನ ಬೇಡಿಕೆಯಿದೆ. ಕೋರಿಕೆಯಷ್ಟು ಬೀಜ ಪೂರೈಕೆಯಾಗದ ಕಾರಣ ವಿತರಣೆಯಲ್ಲಿ ಸ್ವಲ್ಪ ತಡವಾಗುತ್ತಿದೆ
ವೆಂಕಟೇಶಮೂರ್ತಿ ಕೃಷಿ ಸಹಾಯಕ ನಿರ್ದೇಶಕ

ಗೋದಾಮಿನ ಕೊರತೆ

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಕುಮಟಾ ಕೂಜಳ್ಳಿ ಮಿರ್ಜಾನ್ ಮತ್ತು ಗೋಕರ್ಣ ಹೋಬಳಿ ಸೇರಿ ಕೇವಲ ಇಬ್ಬರೇ ಕೃಷಿ ಅಧಿಕಾರಿ ಇದ್ದಾರೆ. ಉಳಿದವರೆಲ್ಲಾ ಹೊರ ಗುತ್ತಿಗೆ ನೌಕರರಾಗಿದ್ದಾರೆ. ಇದರಿಂದ ರೈತರು ಅವಶ್ಯಕ ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ರೈತರು. ಗೋಕರ್ಣದಲ್ಲಿ ಗೋದಾಮಿನ ಕೊರತೆಯೂ ಇದೆ. ಬೀಜ ರಸಗೊಬ್ಬರ ಸಂಗ್ರಹಿಸಿಡಲು ಸೂಕ್ತವಾದ ಸ್ಥಳದ ಅಭಾವವಿದ್ದು ಕೃಷಿ ಯಂತ್ರಗಳನ್ನು ಇಡಲು ಸ್ಥಳವೇ ಇಲ್ಲದಾಗಿದೆ ಎಂಬುದು ರೈತರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.