ಕಾರವಾರ: ದೇಶದ ಪಶ್ಚಿಮ ಕರಾವಳಿಯ ಪ್ರಮುಖ ರೈಲ್ವೆ ಯೋಜನೆಯಾಗಿರುವ ಕೊಂಕಣ ರೈಲು ಮಾರ್ಗವು ಈಗ ಸಂಪೂರ್ಣವಾಗಿ ವಿದ್ಯುದೀಕರಣವಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂಬೈನ ರೋಹಾದಿಂದ ಮಂಗಳೂರಿನ ತೋಕೂರುವರೆಗೆ ನಿಗಮದ ರೈಲುಗಳು ವಿದ್ಯುಚ್ಛಕ್ತಿಯಿಂದಲೇ ಸಂಚರಿಸಲಿವೆ.
ಕೊಂಕಣ ರೈಲ್ವೆಯು, 2017ರ ಆಗಸ್ಟ್‌ನಲ್ಲಿ ವಿದ್ಯುದೀಕರಣ ಕಾಮಗಾರಿಯನ್ನು ಆರಂಭಿಸಿತ್ತು. 2021ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿತ್ತು. ಆದರೆ, ಕೋವಿಡ್, ಪ್ರವಾಹದಂಥ ಕಾರಣಗಳಿಂದ ಕಾಮಗಾರಿ ವಿಳಂಬವಾಯಿತು. ಹಂತ ಹಂತವಾಗಿ ಯೋಜನೆಯನ್ನು ಜಾರಿ ಮಾಡುತ್ತ ಬಂದು, ಮಾರ್ಚ್ 24ರಂದು ಕೊನೆಯ ಹಂತದ ಕೆಲಸ ಪೂರ್ಣಗೊಂಡಿತು.
ಮಹಾರಾಷ್ಟ್ರದ ರತ್ನಗಿರಿಯಿಂದ ಗೋವಾದ ಥಿವಿಮ್ ನಡುವಿನ 194 ಕಿಲೋಮೀಟರ್‌ನಲ್ಲಿ ವಿದ್ಯುದೀಕರಣ ಮಾಡಿದ್ದು, ರೈಲುಗಳ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಇದರೊಂದಿಗೆ ಸಂಪೂರ್ಣ ಮಾರ್ಗವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯು ಪೂರ್ಣಗೊಂಡಿದೆ.
ಮಾರ್ಚ್ 2021ರಲ್ಲಿ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಸುಮಾರು 105 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿತ್ತು. ಆ ಮಾರ್ಗದಲ್ಲಿ ಮೊದಲ ಬಾರಿಗೆ ವಿದ್ಯುತ್ ಲೋಕೊ ಸಂಚಾರವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.
ಹಳಿ ಹಾದು ಹೋಗುವ ಉತ್ತರ ಕನ್ನಡದ ಐದು ತಾಲ್ಲೂಕುಗಳಲ್ಲೂ ವಿದ್ಯುದೀಕರಣ ಕಾಮಗಾರಿಯು ಬಹುತೇಕ ಅದೇ ಸಮಯಕ್ಕೆ ಸಂಪೂರ್ಣವಾಗಿತ್ತು. ಹಾಗಾಗಿ, ಮಾರ್ಚ್ 7ರಂದು ತೋಕೂರಿನಿಂದ ಕಾರವಾರದವರೆಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾರ್ಥ ಸಂಚಾರವೂ ಯಶಸ್ವಿಯಾಗಿತ್ತು. ಈ ವರ್ಷ ಜನವರಿಯಲ್ಲಿ ಕಾರವಾರದಿಂದ ಗೋವಾದ ವೆರ್ನಾವರೆಗೆ 116 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿತ್ತು.
ಇದೇರೀತಿ, ಮಂಗಳೂರಿನಿಂದ ನಂತರ ದಕ್ಷಿಣ ರೈಲ್ವೆಯ ವಿದ್ಯುದೀಕರಣವೂ ಪೂರ್ಣಗೊಂಡ ಬಳಿಕ ದೇಶದ ಪಶ್ಚಿಮ ಕರಾವಳಿಯಲ್ಲಿ ರೈಲುಗಳ ‘ಚುಕುಬುಕು’ ಸದ್ದು ಸಂಪೂರ್ಣವಾಗಿ ಅಡಗಲಿದೆ.
ಉಳಿತಾಯಕ್ಕೆ ಅನುಕೂಲ:
‘ಕೊಂಕಣ ರೈಲು ಮಾರ್ಗದ ವಿದ್ಯುದೀಕರಣದಿಂದ ಡೀಸೆಲ್ ಖರೀದಿ ಮತ್ತು ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಉಳಿತಾಯವಾಗಲಿದೆ’ ಎನ್ನುತ್ತಾರೆ ನಿಗಮದ ಪ್ರಾದೇಶಿಕ ವ್ಯಸ್ಥಾಪಕ ಬಿ.ಬಿ.ನಿಕ್ಕಂ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘2017ರಲ್ಲಿ ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಯ ಪ್ರಕಾರ, ಸಂಪೂರ್ಣ ವಿದ್ಯುದೀಕರಣದಿಂದಾಗಿ ಇಂಧನದ ವೆಚ್ಚದಲ್ಲಿಯೇ ವರ್ಷಕ್ಕೆ ₹ 180 ಕೋಟಿ ಹಾಗೂ ನಿರ್ವಹಣೆಯಲ್ಲಿ ₹ 100 ಕೋಟಿಯಿಂದ ₹ 120 ಕೋಟಿಗಳಷ್ಟು ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ತಿಳಿಸಿದರು.
-------
* ವಿದ್ಯುದೀಕರಣದಿಂದ ರೈಲುಗಳ ವೇಗದಲ್ಲಿ ಬದಲಾವಣೆಯಾಗುವುದಿಲ್ಲ. ಆದರೆ, ವಾತಾವರಣಕ್ಕೆ ಇಂಗಾಲ ಸೇರಿ ವಾಯುಮಾಲಿನ್ಯ ಆಗುವ ಪ್ರಮೇಯವಿರುವುದಿಲ್ಲ.
- ಬಿ.ಬಿ.ನಿಕ್ಕಂ, ಪ್ರಾದೇಶಿಕ ವ್ಯಸ್ಥಾಪಕ, ಕೊಂಕಣ ರೈಲ್ವೆ
------
ಕೊಂಕಣ ರೈಲ್ವೆ: ಅಂಕಿ ಅಂಶ
* ವಿದ್ಯುದೀಕರಣಕ್ಕೆ ತಗುಲಿದ ವೆಚ್ಚ: ₹ 1,287 ಕೋಟಿ
* ವಿದ್ಯುದೀಕರಣ ಕಾಮಗಾರಿ ಆರಂಭ: 2017ನೇ ಇಸವಿ
* ರೈಲು ಮಾರ್ಗದ ಒಟ್ಟು ಉದ್ದ: 756 ಕಿಲೋಮೀಟರ್
* ರೈಲಿನ ಗರಿಷ್ಠ ವೇಗ ಸಾಮರ್ಥ್ಯ: 120 ಕಿ.ಮೀ/ ಗಂಟೆ
* ಒಟ್ಟು ನಿಲ್ದಾಣಗಳು: 69
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.