ADVERTISEMENT

ಹೊಸ ಮತದಾರರಿಗೆ ಇ–ಗುರುತಿನ ಚೀಟಿ

ಬಾರ್ ಕೋಡ್ ಇರುವ ನೂತನ ಚೀಟಿ ಡೌನ್‌ಲೋಡ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:26 IST
Last Updated 8 ಫೆಬ್ರುವರಿ 2021, 17:26 IST
ಡಾ.ಕೆ.ಹರೀಶಕುಮಾರ್
ಡಾ.ಕೆ.ಹರೀಶಕುಮಾರ್   

ಕಾರವಾರ: ‘ಹೊಸ ಮತದಾರರಿಗೆ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಗುರುತಿನ ಚೀಟಿಯನ್ನು (ಪಿ.ವಿ.ಸಿ ಎಪಿಕ್) ನೀಡುತ್ತಿದೆ. 2020ರ ನವೆಂಬರ್ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾದವರು ಪಡೆದುಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರ್ಣ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಆಯೋಗದ ಮೊಬೈಲ್ ಆ್ಯಪ್ ಅಥವಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದನ್ನು ಡಿಜಿ ಲಾಕರ್, ಮೊಬೈಲ್‌ ಫೋನ್ ಅಥವಾ ಮುದ್ರಿಸಿಕೊಂಡು ತಮ್ಮ ಬಳಿ ಇಟ್ಟುಕೊಳ್ಳಬಹುದು’ ಎಂದು ಹೇಳಿದರು.

‘ಹೊಸ ಮತದಾರರ ಅಧಿಕೃತ ಮೊಬೈಲ್ ದೂರವಾಣಿ ಸಂಖ್ಯೆಯು ಆಯೋಗದಲ್ಲಿ ನೋಂದಣಿಯಾಗಿರಬೇಕು. ಒಂದುವೇಳೆ ಆಗಿರದಿದ್ದರೆ ವೆಬ್‌ಸೈಟ್‌ನಲ್ಲಿ ಮಾಡಿಕೊಳ್ಳಬಹುದು. ಹಳೆಯ ಮತದಾರರೂ ಶೀಘ್ರದಲ್ಲೇ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು’ ಎಂದರು.

ADVERTISEMENT

ಡೌನ್‌ಲೋಡ್ ಮಾಡುವುದು ಹೇಗೆ?
ಮತದಾರರ ಪೋರ್ಟಲ್:
http://voterportal/eci.gov.in/, ವೆಬ್‌ಸೈಟ್: https://nvsp.in/ ಅಥವಾ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಪಡೆಯಲು https://play.google.com/apps/details?id=com.eci.citizen ಲಿಂಕ್ ಬಳಕೆ ಮಾಡಬಹುದು.

‘ಮುಂದಿನ ತಿಂಗಳು ಆರಂಭ’
ಕಾರವಾರ ತಾಲ್ಲೂಕಿನ ಮುಡಗೇರಿಯಲ್ಲಿ ನೌಕಾನೆಲೆಗೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಮಾರ್ಚ್‌ ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ನೌಕಾನೆಲೆಗೆ ಸಂಬಂಧಿಸಿದ ಕೈಗಾರಿಕೆಗಳು ನೆಲೆಯೂರಬಹುದು ಎಂದು ನೌಕಾಪಡೆಯೂ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮವು (ಕೆ.ಐ.ಎ.ಡಿ.ಬಿ) ಈ ಪ್ರದೇಶದ ಅಭಿವೃದ್ಧಿಗೆ ₹ 13 ಕೋಟಿ ಮೀಸಲಿಟ್ಟಿದೆ. ನೌಕಾಪಡೆಯ ವಿವಿಧ ಹಡಗುಗಳನ್ನು ಜಟ್ಟಿಯಿಂದ ಮೇಲೆತ್ತಿ ದುರಸ್ತಿ ಮಾಡಲು ಬೇಕಾಗುವ ವಿವಿಧ ಸಲಕರಣೆಗಳನ್ನು ಈ ಕೈಗಾರಿಕಾ ವಸಾಹತುವಿನಲ್ಲಿ ತಯಾರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಗಮನಕ್ಕೆ ತರಲಾಗಿದೆ’
‘ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣದ ಯೋಜನೆ ಜಾರಿಯಾಗುವುದು ಬೇಡ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆದರೆ, ಯೋಜನೆಯನ್ನು ರದ್ದು ಪಡಿಸುವುದು ಸರ್ಕಾರದ ಮಟ್ಟದಲ್ಲಿ ಆಗುವಂಥದ್ದಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಉಳಿದಂತೆ, ಬಂದರು ಇಲಾಖೆಯವರ ಮೂಲಕ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಸೂಚಿಸಲಾಗಿದೆ’ ಎಂದು ಹರೀಶಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.