ಕಾರವಾರ: ‘ಮಳೆಗಾಲದಲ್ಲಿ ಶಿರೂರು ಗುಡ್ಡದಿಂದ ಜಿನುಗುತ್ತಿದ್ದ ಝರಿಗಳನ್ನು ಕಂಡು ಮೈ ಪುಳಕಿತಗೊಳ್ಳುತ್ತಿತ್ತು. ಈಗ ಅದೇ ಝರಿಗಳನ್ನು ಕಂಡು ಮೈ ನಡುಗುತ್ತದೆ. ಭಯದಲ್ಲೇ ರಸ್ತೆಗೆ ಬಿದ್ದ ಮಣ್ಣನ್ನು ಎತ್ತಿ ಸಾಗಿಸುತ್ತಿದ್ದೇವೆ’ ಎಂದು ಬಿಹಾರದ ಕಾರ್ಮಿಕ ಜಿತನ್‍ರಾಮ್ ಹೇಳುವಾಗ ಅವರ ಕೈ ನಡುಗುತ್ತಿತ್ತು. ಅವರ ದೃಷ್ಟಿ ಹೆದ್ದಾರಿಯಂಚಿನ ಗುಡ್ಡದತ್ತ ನೆಟ್ಟಿತ್ತು.
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಮೂರು ದಿನವಾದರೂ ಹೆದ್ದಾರಿ ಆವರಿಸಿರುವ ಮಣ್ಣಿನ ರಾಶಿ ತೆರವು ಆಗಿಲ್ಲ. ಐದಾರು ಜೆಸಿಬಿಗಳು ಮಣ್ಣು ತೆಗೆದರೆ, ಅಷ್ಟೇ ಸಂಖ್ಯೆಯ ಟಿಪ್ಪರ್‌ಗಳು ಮಣ್ಣನ್ನು ದೂರಕ್ಕೆ ಸಾಗಿಸುತ್ತಿವೆ. ಜೆಸಿಬಿ, ಟಿಪ್ಪರ್ ಚಾಲಕರು, ಅವರಿಗೆ ಮಾರ್ಗದರ್ಶನ ನೀಡುವ ಸಿಬ್ಬಂದಿ ಸೇರಿ ಎಲ್ಲರೂ ಆತಂಕದಲ್ಲೇ ಕಾರ್ಯನಿರತರಾಗಿದ್ದಾರೆ.
ಸದ್ಯ ಹೆದ್ದಾರಿಗೆ ಬಿದ್ದು, ಗಂಗಾವಳಿ ನದಿಯನ್ನೂ ಆವರಿಸಿಕೊಂಡು, ಹಲವು ಜೀವಗಳನ್ನು ಬಲಿ ಪಡೆದ ಗುಡ್ಡದ ಅಕ್ಕಪಕ್ಕದಲ್ಲಿನ ಗುಡ್ಡಗಳಿಂದ ನಿರಂತರವಾಗಿ ಜಲಧಾರೆ ಒಸರುತ್ತಿದೆ. ಗುಡ್ಡದ ಮೇಲಿನಿಂದ ಮಣ್ಣುಗಳ ಮುದ್ದೆ ಕೆಳಕ್ಕೆ ಬೀಳುತ್ತಿದೆ. ಇದು ನೋಡುಗರ ಎದೆ ಝಲ್ಲೆನ್ನಿಸುತ್ತಿದೆ.
‘ಹೆದ್ದಾರಿ ಆವರಿಸಿಕೊಂಡ ಮಣ್ಣಿನ ರಾಶಿ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಒತ್ತಡ ಹಲವು ಕಾರ್ಮಿಕರ
ಲ್ಲಿದೆ. ‘ಕೆಲಸದ ಒತ್ತಡದ ಜೊತೆ ಗುಡ್ಡ ಕುಸಿದರೆ ನಮ್ಮ ಜೀವಕ್ಕೆ ಯಾರು ಹೊಣೆ’ ಎಂಬ ಆತಂಕ ಅವರಲ್ಲಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೆ ನಿರಂತರ ತೊಡಕು ಎದುರಾಗುತ್ತಿದೆ’ ಎಂದು ತೆರವು ಕಾರ್ಯಕ್ಕೆ ವಾಹನಗಳನ್ನು ಪೂರೈಸುವ ಅರುಣ ಹರ್ಕಡೆ ‘ಪ್ರಜಾವಾಣಿ’ಗೆ ತಿಳಿಸಿದರು.
ಮೃತದೇಹ ಪತ್ತೆಗೂ ತೊಡಕು: ಮೂರು ದಿನಗಳಾದರೂ ದುರ್ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 29 ಸದಸ್ಯರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) 34 ಸದಸ್ಯರು ಗಂಗಾವಳಿ ನದಿಯಲ್ಲಿ ಶೋಧ ಮುಂದುವರೆಸಿದ್ದಾರೆ.
‘ನದಿಗೆ ಕಲ್ಲು, ಮಣ್ಣಿನ ರಾಶಿ ಬಿದ್ದಿದ್ದು, ಅವುಗಳಡಿ ಮೃತದೇಹಗಳು ಸಿಲುಕಿರಬಹುದು. ನದಿಯ ಅಂಚಿನಲ್ಲಿ ಗಿಡಗಂಟಿಗಳು ಹೆಚ್ಚಿದ್ದು, ಹುಡುಕಾಟ ಕಷ್ಟವಾಗಿದೆ’ ಎಂದು ಎಸ್‌ಡಿಆರ್‌ಎಫ್ ತಂಡದ ಸದಸ್ಯರೊಬ್ಬರು ತಿಳಿಸಿದರು.
‘ಗಂಗಾವಳಿ ನದಿಯಲ್ಲಿ ಗುರುವಾರ ಬೆಳಿಗ್ಗೆ ಅವಂತಿಕಾ ನಾಯ್ಕ (6) ಮತ್ತು 45 ವರ್ಷದ ಪುರುಷನ ಮೃತದೇಹ ಸಿಕ್ಕಿದೆ. ಬೆಳಂಬಾರದ ಕಡಲತೀರದಲ್ಲಿ ದೇಹವೊಂದರ ಅರ್ಧ ಭಾಗ ದೊರೆತಿದೆ. ಅಲ್ಲಿಗೆ ಘಟನೆಯಲ್ಲಿ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಶಿರೂರು ದುರಂತದಲ್ಲಿ 10 ಮಂದಿ ಕಾಣೆಯಾಗಿದ್ದು, ಏಳು ಜನರ ಮೃತದೇಹ ಸಿಕ್ಕಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮಾಹಿತಿಗೆ 9483511015 ಸಹಾಯವಾಣಿ ಸಂಪರ್ಕಿಸಿ-ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ
‘ಮಳೆಗಾಲ ಆರಂಭವಾದಾಗ ಶಿರೂರು ಗುಡ್ಡದಿಂದ ಜಿನುಗುತ್ತಿದ್ದ ಝರಿಗಳನ್ನು ಕಂಡು ಮೈ ಪುಳಕಿತಗೊಳ್ಳುತ್ತಿತ್ತು. ಈಗ ಅದೇ ಝರಿಗಳನ್ನು ಕಂಡು ಮೈ ನಡುಗುತ್ತಿದೆ. ಭಯದಲ್ಲಿಯೇ ರಸ್ತೆಗೆ ಬಿದ್ದ ಮಣ್ಣನ್ನು ಎತ್ತಿ ಸಾಗಿಸುತ್ತಿದ್ದೇವೆ’ ಎಂದು ಬಿಹಾರ ಮೂಲದ ಕಾರ್ಮಿಕ ಜಿತನ್‍ರಾಮ್ ಹೇಳುವಾಗ ಅವರ ಕೈ ಇನ್ನೂ ನಡುಗುತ್ತಿತ್ತು. ಅವರ ದೃಷ್ಟಿ ಹೆದ್ದಾರಿಯಂಚಿನ ಗುಡ್ಡದತ್ತಲೇ ನೆಟ್ಟಿತ್ತು.
‘ನದಿ ತೀರದಲ್ಲಿ ಪ್ರವಾಹ ಭೀತಿ’
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಗಂಗಾವಳಿ, ಅಘನಾಶಿನಿ, ಗುಂಡಬಾಳ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. ಮನೆಗಳಿಗೆ ನೀರು ನುಗ್ಗಿದೆ. ಹೊನ್ನಾವರ, ಕುಮಟಾದಲ್ಲಿ 15ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಕುಮಟಾ ತಾಲ್ಲೂಕಿನ ಬರ್ಗಿ ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರ ಅಂಚಿನ ಗುಡ್ಡ ಕುಸಿದು ಹೆದ್ದಾರಿ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಇದರಿಂದ ಒಂದು ಪಥದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಗೋವಾದ ಮೊಲೆಮ್ ಸಮೀಪದ ದೂದಸಾಗರ ಸ್ವಾಮಿ ದೇವಸ್ಥಾನದ ಬಳಿ ಗುಡ್ಡ ಕುಸಿದಿದ್ದರಿಂದ ರಾಮನಗರ–ಗೋವಾ ಹೆದ್ದಾರಿಯಲ್ಲಿ ಕೆಲ ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.