ADVERTISEMENT

ಕಟ್ಟಡ ಸುರಕ್ಷತೆ ಪರಿಶೀಲನೆಗೆ ತಜ್ಞರ ಸಮಿತಿ

ಸಮಿತಿಯ ನಿರ್ವಹಣಾ ವೆಚ್ಚವನ್ನು ಬಿಲ್ಡರ್‌ಗಳೇ ಭರಿಸಬೇಕು: ನಗರಸಭೆ

ಸದಾಶಿವ ಎಂ.ಎಸ್‌.
Published 5 ಮೇ 2019, 19:30 IST
Last Updated 5 ಮೇ 2019, 19:30 IST
ಕಾರವಾರ ನಗರದ ನೋಟ (ಸಾಂದರ್ಭಿಕ ಚಿತ್ರ)
ಕಾರವಾರ ನಗರದ ನೋಟ (ಸಾಂದರ್ಭಿಕ ಚಿತ್ರ)   

ಕಾರವಾರ:ನಗರದಲ್ಲಿ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳ ಸುರಕ್ಷತೆ, ಬಾಳ್ವಿಕೆಯ ಬಗ್ಗೆ ಪರಿಶೀಲನೆ ನಡೆಸಲು ನಗರಸಭೆ ನಿರ್ಧರಿಸಿದೆ. ಈ ಸಂಬಂಧ ತಜ್ಞರ ಸಮಿತಿಯೊಂದನ್ನು ಶೀಘ್ರವೇ ರಚನೆಯಾಗಲಿದೆ.

ಈ ಸಂಬಂಧ ಹಮ್ಮಿಕೊಳ್ಳಲಾದ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಬಿಲ್ಡರ್‌ಗಳ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಬಳಿಕ ಸಮಿತಿ ರಚನೆಯ ತೀರ್ಮಾನಕ್ಕೆ ಬರಲಾಯಿತು. ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಲ್ಡರ್‌ಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.

ಧಾರವಾಡದಲ್ಲಿ ಈಚೆಗೆ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಸಾವು ನೋವು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕಾರವಾರದಲ್ಲೂ ಇರುವವಾಸಯೋಗ್ಯವಲ್ಲದಮತ್ತು ಕಾನೂನು ಬಾಹಿರವಾಗಿ ನಿರ್ಮಿಸಿದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಬಿಲ್ಡರ್‌ಗಳ ಜತೆ ಸಭೆ ಆಯೋಜಿಸಿತ್ತು.

ADVERTISEMENT

ನಗರದಲ್ಲಿ 30ಕ್ಕೂ ಅಧಿಕ ಕಟ್ಟಡಗಳು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ಮೂಲ ನಕ್ಷೆಯನ್ನು ಉಲ್ಲಂಘಿಸಿವೆ. ಅವುಗಳ ಮಾಲೀಕರು, ಬಿಲ್ಡರ್‌ಗಳ ವಿರುದ್ಧ ಕ್ರಮವೇನು ಎಂಬ ಪ್ರಶ್ನೆ ನಾಗರಿಕರದ್ದಾಗಿದೆ.

ನಗರಸಭೆ ರಚಿಸಲಿರುವ ಸಮಿತಿಯು ಈ ಕಟ್ಟಡಗಳು ಬಾಳಿಕೆ ಬರುತ್ತವೆಯೇ ಎಂಬ ಪರಿಶೀಲನೆ ನಡೆಸಲಿವೆ. ಅಲ್ಲದೇ ಕಟ್ಟಡಗಳ ಮೂಲ ವಿನ್ಯಾಸವನ್ನೂ ಗಮನಿಸಲಿದೆ. ಇದಕ್ಕೆ ನಿರ್ಮಾಣ ವಿನ್ಯಾಸ ಪರಿಶೀಲನಾ ಸಮಿತಿಯನ್ನು ಗುತ್ತಿಗೆ ಕರೆದು ರಚನೆಯಾಗಲಿದೆ. ನಗರಸಭೆ ಸೂಚನೆಯಂತೆ ಆ ಸಮಿತಿಯು ಕಟ್ಟಡಗಳ ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಲಿದೆ. ಅದನ್ನು ಆಧರಿಸಿ ನಗರಸಭೆಯು ವಾಸ್ತವ್ಯ ಪ್ರಮಾಣಪತ್ರ ನೀಡಲಿದೆ.

‘ಸಮಿತಿಯ ಖರ್ಚು ವೆಚ್ಚಗಳನ್ನು ಬಿಲ್ಡರ್‌ಗಳೇ ಭರಿಸಬೇಕು. ಕರ್ನಾಟಕ ನಗರಸಭೆ ಮಾದರಿ ಕಟ್ಟಡಗಳ ನಿಯಮಾವಳಿಯಲ್ಲಿ ಇದರ ಉಲ್ಲೇಖವಿದೆ. ಅದರ ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಗರಸಭೆ ಆಯುಕ್ತ ಯೋಗೇಶ್ವರ್ ತಿಳಿಸಿದ್ದಾರೆ.

‘ಬಿಲ್ಡರ್‌ಗಳೇ ಹೊಣೆಗಾರರು’:‘ನಗರಸಭೆ ನೀಡಿದ ಅನುಮತಿಯನ್ನು ಮೀರಿ ಹೆಚ್ಚುವರಿ ಅಂತಸ್ತುಗಳನ್ನು ಹಲವರು ನಿರ್ಮಿಸಿಕೊಂಡಿದ್ದಾರೆ. ಈ ವಿಚಾರ ನಗರಸಭೆಯ ಗಮನಕ್ಕೆ ಬಂದಿದೆ. ನಗರ ಯೋಜನೆಯ ಹೊಸ ವಲಯ ನಿಯಮಾವಳಿಯ ಪ್ರಕಾರವೇ ನಿರ್ಮಾಣ ಮಾಡಿದ್ದಾಗಿ ಬಿಲ್ಡರ್‌ಗಳು ವಾದಿಸುತ್ತಿದ್ದಾರೆ. ಆದರೆ, ಆ ನಿಯಮಾವಳಿ ಇನ್ನೂ ಪ್ರಕಟವಾಗಿಲ್ಲ. ಅವರಿಂದ ಪ್ರಮಾಣಪತ್ರ ಪಡೆದುಕೊಂಡ ಬಳಿಕವೇ ಕಟ್ಟಡಕ್ಕೆ ಪರವಾನಗಿ ನೀಡಲಾಗುತ್ತದೆ. ಹಾಗಾಗಿ ಏನೇ ಆದರೂ ಬಿಲ್ಡರ್‌ಗಳೇ ಹೊಣೆಗಾರರಾಗುತ್ತಾರೆ’ ಎನ್ನುತ್ತಾರೆ ಯೋಗೇಶ್ವರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.