ADVERTISEMENT

ತೇರಗಾಂವ: ವಿಜೃಂಭಣೆಯ ರಥೋತ್ಸವ ಸಂಪನ್ನ

ಹಳಿಯಾಳ: ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 15:39 IST
Last Updated 13 ಏಪ್ರಿಲ್ 2022, 15:39 IST
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದ ದುರ್ಗಾದೇವಿ ಹಾಗೂ ಲಕ್ಷ್ಮಿ ದೇವಿ ರಥೋತ್ಸವವು ಬುಧವಾರ ಭಕ್ತ ಸಾಗರದ ಮಧ್ಯೆ ನೆರವೇರಿತು
ಹಳಿಯಾಳ ತಾಲ್ಲೂಕಿನ ತೇರಗಾಂವ ಗ್ರಾಮದ ದುರ್ಗಾದೇವಿ ಹಾಗೂ ಲಕ್ಷ್ಮಿ ದೇವಿ ರಥೋತ್ಸವವು ಬುಧವಾರ ಭಕ್ತ ಸಾಗರದ ಮಧ್ಯೆ ನೆರವೇರಿತು   

ಹಳಿಯಾಳ: ತಾಲ್ಲೂಕಿನ ತೇರಗಾಂವ ಗ್ರಾಮದ ಲಕ್ಷ್ಮಿ ಹಾಗೂ ದುರ್ಗಾ ದೇವಿಯ ಮಹಾರಥೋತ್ಸವವು ಬುಧವಾರ, ಭಕ್ತರ ‘ಉಧೋ ಉಧೋ’ ಘೋಷಣೆಯೊಂದಿಗೆ ವೈಭವದಿಂದ ಸಂಪನ್ನಗೊಂಡಿತು. 12 ವರ್ಷಗಳ ನಂತರ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸೇರಿದ್ದರು.

ಬೆಂಗಳೂರಿನ ಗೋಸಾವಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ದೇವಸ್ಥಾನ ಆಡಳಿತ ಸಮಿತಿಯ ಪ್ರಮುಖರು ಹಾಗೂ ಊರಿನ ಪಂಚರುಮಧ್ಯಾಹ್ನ ಮೂರು ಗಂಟೆಯ ನಂತರ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮೆರವಣಿಗೆಯು ಗ್ರಾಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ವಿವಿಧ ಬಡಾವಣೆಗಳಿಂದ ಸಾಗಿತು. ತೇರಗಾಂವ ಗ್ರಾಮದ ಪ್ರವೇಶ ದ್ವಾರದಲ್ಲಿ ನಿರ್ಮಿಸಿದ ಜಾತ್ರಾ ಗದ್ದುಗೆಯವರೆಗೆ ತೆರಳಿ ಕೊನೆಗೊಂಡಿತು.

ನಂತರ ದೇವಿಯರ ಮೂರ್ತಿಗಳನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿ ಉಡಿ ತುಂಬಲಾಯಿತು. ಏ.17ರವರೆಗೆ ಉಡಿ ತುಂಬಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಂದು ರಾತ್ರಿ ದೇವಿಯರನ್ನು ಸೀಮೆಗೆ ಕಳುಹಿಸುವ ಪದ್ಧತಿ ಆಚರಿಸಲಾಗುವುದು. ಏ.19ರಂದು ಪುನರ್‌ ಪ್ರತಿಷ್ಠಾಪನೆ ನಡೆಯಲಿದೆ.

ADVERTISEMENT

ರಥೋತ್ಸವದ ಮುನ್ನ ಗ್ರಾಮದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ 12ರವರೆಗೆ ಮತ್ತೊಮ್ಮೆ ದುರ್ಗಾ ಹಾಗೂ ಲಕ್ಷ್ಮಿ ದೇವಿಯರ ಹೊನ್ನಾಟ ನಡೆಯಿತು. ರಥೋತ್ಸವದಲ್ಲಿ ಧಾರವಾಡದ ಕಲಗೇರಿಯ ದುರ್ಗಾದೇವಿ ಜನಪದ ಜಗ್ಗಲಿಗೆ ಮೇಳ ಹಾಗೂ ಹೆಜ್ಜೆಮೇಳ, ಮಹಿಳೆಯರು ಹಾಗೂ ಪುರುಷರ ಡೊಳ್ಳು ವಾದನ ಜನಾಕರ್ಷಿಸಿತು. ರಥೋತ್ಸವದಲ್ಲಿ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.