ಜೊಯಿಡಾ: ‘ಕೃಷಿ ಮಾಡಲು ಸಾಕಷ್ಟು ಭೂಮಿ ಇದ್ದರೂ ಕೂಲಿ ಕೆಲಸಕ್ಕೆ ಜನ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ಭತ್ತ ಬೆಳೆಯುವ ಬದಲು ದಾಲ್ಚಿನ್ನಿ ಬೆಳೆಯಲು ಆರಂಭಿಸಿದೆ. ಕಡಿಮೆ ಕೂಲಿಯಲ್ಲಿ ಉತ್ತಮ ಆದಾಯ ಗಳಿಕೆಗೆ ಇದು ದಾರಿ ಮಾಡಿಕೊಟ್ಟಿದೆ’
ಹೀಗೆನ್ನುತ್ತಲೆ ತಾಲ್ಲೂಕಿನ ಕುಂಬಾರವಾಡಾದ ಪ್ರಗತಿಪರ ಕೃಷಿಕ ಶಾಂತರಾಮ (ಸುಭೇಂದು) ಕಾಮತ್ ಕೊಂದರ ಗ್ರಾಮದಲ್ಲಿರುವ ತಮ್ಮ ದಾಲ್ಚಿನ್ನಿ ತೋಟದತ್ತ ಕೈ ತೋರಿಸಿದರು. ಒಂದು ಕಾಲದಲ್ಲಿ ಭತ್ತದ ಕಣಜವಾಗಿದ್ದ ಭೂಮಿಯಲ್ಲಿ ಈಗ ಆಳೆತ್ತರಕ್ಕೆ ಬೆಳೆದ ದಾಲ್ಚಿನ್ನಿ ಗಿಡಗಳು ನಳನಳಿಸುತ್ತಿರುವುದು ಕಾಣಿಸಿತು.
ಬಿಎಸ್ಸಿ ಪದವೀಧರರಾಗಿರುವ ಶಾಂತಾರಾಮ ಕಾಮತ್ ಅವರು ಕುಂಬಾರವಾಡಾದಿಂದ ಎಂಟು ಕಿ.ಮೀ ದೂರದಲ್ಲಿರುವ ಕೊಂದರ ಗ್ರಾಮದಲ್ಲಿ ಆಹಾರ ಬೆಳೆಯ ಬದಲು ಸಾಂಬಾರ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ.
ಕಾಡುಮೇಡಿನ ನಾಡು ಜೊಯಿಡಾದಲ್ಲಿ ನೂರಾರು ಬಗೆಯ ಸಸ್ಯಸಂಪತ್ತು ಇದೆ. ಕೃಷಿ ಚಟುವಟಿಕೆಯೂ ಇದೆ. ಆದರೆ, ದಾಲ್ಚಿನ್ನಿಯಂತಹ ಸಾಂಬಾರು ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವವರು ಇರಲಿಲ್ಲ. ಈ ಕೊರತೆಯನ್ನು ನೀಗಿಸಿರುವ ಶಾಂತಾರಾಮ ಇತರ ರೈತರಿಗೂ ದಾಲ್ಚಿನ್ನಿ ಬೆಳೆಯಲು ಪ್ರೋತ್ಸಾಹಿಸುತ್ತಿರುವುದು ವಿಶೇಷ.
‘ಹಿಂದೆಲ್ಲ ಮುಂಗಾರಿನ ಸಮಯದಲ್ಲಿ ಕೂಲಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿದ್ದರು. ಭತ್ತದ ಕೃಷಿಯಲ್ಲಿ ಕೆಲಸ ಜಾಸ್ತಿ ಆದಾಯ ಕಡಿಮೆ ಎಂಬ ಕಾರಣಕ್ಕೆ ಗದ್ದೆ ಮಾಡುವವರ ಸಂಖ್ಯೆಯೂ ಇಳಿಯಿತು. ಈಗಿನ ಪೀಳಿಗೆಯ ಯುವಕರು ಶಿಕ್ಷಣ ಪಡೆದು ನೆರೆಯ ಗೋವಾ ರಾಜ್ಯಕ್ಕೆ ಉದ್ಯೋಗಕ್ಕೆ ಹೋಗುತ್ತಿರುವುದರಿಂದ ಕೂಲಿಗೆ ಜನ ಸಿಗುತ್ತಿರಲಿಲ್ಲ. ಭೂಮಿಯನ್ನು ಬಂಜರು ಬಿಡಬೇಕಾದ ಸ್ಥಿತಿ ಎದುರಾದಾಗ ಕಡಿಮೆ ನೀರು, ಕಡಿಮೆ ಕೂಲಿಯಲ್ಲಿ ಬೆಳೆಯಬಹುದಾದ ದಾಲ್ಚಿನ್ನಿಯತ್ತ ದೃಷ್ಟಿ ಹರಿಯಿತು’ ಎಂದು ಕಾಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ ಆಗಿರುವ ಕೃಷಿಕ ಶಾಂತಾರಾಮ ಕಾಮತ ಕೃಷಿಗಾಥೆ ಆರಂಭಿಸಿದರು.
‘ಎರಡು ಎಕರೆಯಲ್ಲಿ ದಾಲ್ಚಿನ್ನಿ ಗಿಡಗಳನ್ನು ಬೆಳೆಸಿದ್ದೇನೆ. ಸುಮಾರು 45 ರಿಂದ 500 ಗಿಡಗಳು ಬೆಳೆದು ನಿಂತಿವೆ. ಪ್ರತಿ ಗಿಡದಿಂದ ಸರಾಸರಿ 1 ರಿಂದ ಎರಡು ಕೆ.ಜಿವರೆಗೆ ಮೊಗ್ಗು ಪಡೆಯಲು ಸಾಧ್ಯವಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ದಾಲ್ಚಿನ್ನಿ ಮೊಗ್ಗು ಪ್ರತಿ ಕೆ.ಜಿಗೆ ₹800 ರಿಂದ ₹1000 ದರವಿದೆ. ಪ್ರತಿ ಎಕರೆಗೆ ₹4 ರಿಂದ 5 ಲಕ್ಷ ಆದಾಯ ಗಳಿಸಲು ಸಾಧ್ಯವಿದೆ’ ಎಂದು ವಿವರಿಸಿದರು.
‘ದಾಲ್ಚಿನ್ನಿ ಬೆಳೆಯಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ನರೇಗಾ ಯೋಜನೆ ಅಡಿ ತೋಟ ನಿರ್ಮಾಣಕ್ಕೂ ಅವಕಾಶವಿದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಇಕ್ಕೇಳಿಕರ ತಿಳಿಸಿದರು.
ಎರಡು ಎಕರೆಯಲ್ಲಿ ದಾಲ್ಚಿನ್ನಿ ಬೆಳೆ ಕೂಲಿಕಾರ್ಮಿಕರ ಕೊರತೆಯಿಂದ ಭತ್ತದ ಬದಲು ಸಾಂಬಾರ ಬೆಳೆಯತ್ತ ಹೊರಳಿದ ರೈತ ಪ್ರತಿ ಎಕರೆಗೆ ಸರಾಸರಿ ₹4 ರಿಂದ 5 ಲಕ್ಷ ಆದಾಯ ಗಳಿಕೆ
ದಾಲ್ಚಿನ್ನಿ ಬೆಳೆಯಲು ಕಡಿಮೆ ನೀರು ಗೊಬ್ಬರ ಸಾಕು. ಅಲ್ಲದೆ ಸಹಾಯಧನ ಸೌಲಭ್ಯವೂ ಸಿಗುವುದರಿಂದ ರೈತರಿಗೆ ವರದಾನವಾಗಲಿದೆಶಾಂತಾರಾಮ (ಸುಭೇಂದು) ಕಾಮತ ಕಾಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.